ನವದೆಹಲಿ (ಅ.29): ಬಾಹ್ಯಾಕಾಶದಲ್ಲಿ ಸ್ವತಂತ್ರ ಮಾನವ ಸಹಿತ ನೌಕೆಯ ಮೂಲಸೌಕರ್ಯವನ್ನು ಹೊಂದುವ ಭಾರತದ ಕನಸು ಇದೀಗ ಮತ್ತಷ್ಟು ಹತ್ತಿರವಾಗಿದೆ. ಭಾರತ ನಿರ್ಮಿಸಲು ಉದ್ದೇಶಿಸಿರುವ ‘ಭಾರತೀಯ ಅಂತರಿಕ್ಷ ಸ್ಟೇಷನ್’ (BAS) ನಿಲ್ದಾಣವು ಅತ್ಯಾಧುನಿಕ ರೋಬೋಟಿಕ್ ಸಾಮರ್ಥ್ಯಗಳನ್ನು ಹೊಂದಿರಲಿದ್ದು, ಬಾಹ್ಯಾಕಾಶ ನಿಲ್ದಾಣದ ಹೊರಭಾಗದಲ್ಲಿ ಗಗನಯಾತ್ರಿಗಳು ಕೈಗೊಳ್ಳುವ ಪ್ರಮುಖ ಕಾರ್ಯಾಚರಣೆಗಳು, ಸ್ಟೇಷನ್‌ನ ರಚನಾತ್ಮಕ ತಪಾಸಣೆಗಳು ಹಾಗೂ ಮುಂಬರುವ ವಿಸ್ತರಣಾ ಕಾಮಗಾರಿಗಳಿಗೆ ನೆರವಾಗಲಿದೆ.

ನವದೆಹಲಿಯಲ್ಲಿ ನಡೆದ ‘ESTIC 2026’ ಸಮಾವೇಶದ ಸ್ಪೇಸ್ ಸೈನ್ಸ್ ಆಂಡ್ ಟೆಕ್ನಾಲಜೀಸ್ ಸೇಶನ್‌ನಲ್ಲಿ ಇಸ್ರೋದ ಬಿಎಎಸ್ (BAS) ಯೋಜನೆ ನಿರ್ದೇಶಕಿ (Project Director) ಕೆ. ಕಲ್ಪನಾ ಅವರು ಗುರುವಾರ (ಅಕ್ಟೋಬರ್ 29) ಈ ಮಹತ್ವದ ತಾಂತ್ರಿಕ ಬ್ಲೂಪ್ರಿಂಟ್ ಅನ್ನು ಅನಾವರಣಗೊಳಿಸಿದರು. ಈ ಮಾಹಿತಿಯ ಪ್ರಕಾರ, ನಿಲ್ದಾಣವು ಆಂತರಿಕ ಮತ್ತು ಬಾಹ್ಯ ರೋಬೋಟಿಕ್ ಹಸ್ತಗಳ ಜೊತೆಗೆ, ಸ್ವತಂತ್ರವಾಗಿ ಹಾರಾಡುವ ‘ಫ್ರೀ-ಫ್ಲೈಯಿಂಗ್ ವ್ಯವಸ್ಥೆಗಳು’ (Free-flying systems) ಹಾಗೂ ಮಾನವನಂತೆಯೇ ಕಾರ್ಯನಿರ್ವಹಿಸುವ ‘ಹ್ಯೂಮನಾಯ್ಡ್ ರೋಬೋಟ್‌ಗಳನ್ನು’ (Humanoid Robots) ಹೊಂದಿರಲಿದೆ.

5 ಮಾಡ್ಯೂಲ್‌ಗಳು ಹಾಗೂ 54 ಟನ್ ತೂಕದ ಮೆಗಾ ಸ್ಟೇಷನ್

ಇಸ್ರೋ ಪ್ರಸ್ತುತಪಡಿಸಿದ ವಿವರಣೆಯ ಪ್ರಕಾರ, ಈ ಸ್ವದೇಶಿ ಬಾಹ್ಯಾಕಾಶ ನಿಲ್ದಾಣವು ಒಟ್ಟು 5 ಪ್ರತ್ಯೇಕ ಮಾಡ್ಯೂಲ್‌ಗಳನ್ನು ಹೊಂದಿರಲಿದ್ದು, ಭೂಮಿಯ ಕೆಳ ಕಕ್ಷೆಯಲ್ಲಿ (Low Earth Orbit) ಸುಮಾರು 450 ಕಿಲೋಮೀಟರ್ ಎತ್ತರದಲ್ಲಿ ಹಾಗೂ 51.5 ಡಿಗ್ರಿ ವಾಲುವಿಕೆಯಲ್ಲಿ ಭೂಮಿಯನ್ನು ಪ್ರದಕ್ಷಿಣೆ ಹಾಕಲಿದೆ. ಈ ಸಂಪೂರ್ಣ ಸ್ಪೇಸ್ ಸ್ಟೇಷನ್ ಸುಮಾರು 54 ಟನ್ ತೂಕವನ್ನು ಹೊಂದಿರಲಿದ್ದು, 27 ಮೀಟರ್ ಉದ್ದ ಹಾಗೂ 20 ಮೀಟರ್ ಅಗಲದ ಬೃಹತ್ ಆಯಾಮಗಳನ್ನು ಹೊಂದಿರಲಿದೆ. ಈ ನಿಲ್ದಾಣದಲ್ಲಿ 3 ರಿಂದ 4 ಗಗನಯಾತ್ರಿಗಳು ನಿರಂತರವಾಗಿ ದೀರ್ಘಕಾಲ ನೆಲೆಸಲು ವ್ಯವಸ್ಥೆ ಮಾಡಲಾಗುತ್ತಿದ್ದು, ಕಿರು ಅವಧಿಯ ಮಿಷನ್‌ಗಳ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಮತ್ತಿಬ್ಬರು/ಮೂವರು ಗಗನಯಾತ್ರಿಗಳಿಗೆ ಜಾಗ ಕಲ್ಪಿಸಲಾಗುತ್ತದೆ.

ವಾಸಯೋಗ್ಯ ಆವರಣವು (Habitable volume) ಸುಮಾರು 100 ಕ್ಯೂಬಿಕ್ ಮೀಟರ್‌ಗಳಷ್ಟು ಇರಲಿದ್ದು, ನಿಲ್ದಾಣದ ಕಾರ್ಯಾಚರಣೆಗೆ 60 ಕಿಲೋವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ವಿನ್ಯಾಸಗೊಳಿಸಲಾಗಿದೆ.

ಸ್ಟೇಷನ್‌ನ 5 ಮಾಡ್ಯೂಲ್‌ಗಳು ಮತ್ತು ಅವುಗಳ ವಿಶಿಷ್ಟ ಪಾತ್ರಗಳು

BAS-01 (ಬೇಸ್ ಮಾಡ್ಯೂಲ್): ಇದು ತಂತ್ರಜ್ಞಾನಗಳ ಪರೀಕ್ಷಾ ವೇದಿಕೆಯಾಗಿ (Test bed) ಕಾರ್ಯನಿರ್ವಹಿಸಲಿದ್ದು, ನಿಲ್ದಾಣದ ಸೇವೆಗಳು, ಗಗನಯಾತ್ರಿಗಳ ವಸತಿ ಅಗತ್ಯಗಳು ಹಾಗೂ ಉಪಕರಣಗಳ 'ಪೇಲೋಡ್ ರಾಕ್‌'ಗಳನ್ನು ಬೆಂಬಲಿಸುತ್ತದೆ.

BAS-02 (ಕೋರ್ ಮಾಡ್ಯೂಲ್): ಇದು ಪ್ರಮುಖ ಕೇಂದ್ರ ಘಟಕವಾಗಿದ್ದು, ಡಾಕಿಂಗ್ ಮೂಲಸೌಕರ್ಯ, ಪೇಲೋಡ್ ರಾಕ್‌‌ಗಳು ಹಾಗೂ ಶೂನ್ಯ ಗುರುತ್ವಾಕರ್ಷಣೆಯಲ್ಲಿ ಗಗನಯಾತ್ರಿಗಳ ಆರೋಗ್ಯ ರಕ್ಷಣೆಗೆ ಬೇಕಾದ ವ್ಯಾಯಾಮ ಉಪಕರಣಗಳನ್ನು ಹೊಂದಿರಲಿದೆ.

BAS-03 (ಸೈನ್ಸ್ ಮಾಡ್ಯೂಲ್): ಈ ಘಟಕವು ಗಗನಯಾತ್ರಿಗಳ ಸ್ಪೇಸ್‌ವಾಕ್ (Spacewalks), ಪೇಲೋಡ್‌ಗಳು ಹಾಗೂ ಮರುಬಳಕೆಯ ಪರಿಸರ ನಿಯಂತ್ರಣ ಮತ್ತು ಜೀವ ರಕ್ಷಣಾ ವ್ಯವಸ್ಥೆಗಳನ್ನು (Regenerative ECLSS) ಬೆಂಬಲಿಸುತ್ತದೆ.

BAS-04 (ಲ್ಯಾಬ್ ಮಾಡ್ಯೂಲ್): ಇದು ಭೂಮಿಯನ್ನು ವೀಕ್ಷಿಸಲು 'ಕುಪೋಲಾ' (Cupola) ಕಿಟಕಿ ವ್ಯವಸ್ಥೆ, ಹೆಚ್ಚುವರಿ ಗಗನಯಾತ್ರಿಗಳ ಕೊಠಡಿಗಳು ಹಾಗೂ ಪ್ರಯೋಗಾಲಯದ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.

BAS-05 (ಬರ್ತಿಂಗ್ ಮಾಡ್ಯೂಲ್): ಇದು ಕಾಮನ್ ಬರ್ತಿಂಗ್ ಮೆಕಾನಿಸಂ ಒದಗಿಸಲಿದ್ದು, ಭವಿಷ್ಯದ ವಿಸ್ತರಣೆಗಳು ಹಾಗೂ ಕಾರ್ಗೋ (ಸರಕು) ಮಾಡ್ಯೂಲ್‌ಗಳು ಬಂದು ಸಂಪರ್ಕ ಸಾಧಿಸಲು (Docking) ನೆರವಾಗುತ್ತದೆ.

ರೋಬೋಟಿಕ್ ಕಾರ್ಯಾಚರಣೆ ಮತ್ತು ಸೂಕ್ಷ್ಮ ಗುರುತ್ವಾಕರ್ಷಣೆ ಸಂಶೋಧನೆ

ಬಾಹ್ಯಾಕಾಶ ನಿಲ್ದಾಣದ ಐದೂ ಮಾಡ್ಯೂಲ್‌ಗಳಲ್ಲೂ ನೌಕೆಗಳು ಬಂದು ಕನೆಕ್ಟ್ ಆಗಲು 'ಡಾಕಿಂಗ್' ವ್ಯವಸ್ಥೆ ನೀಡಲಾಗಿದೆ. ವಿಕಿರಣ (Radiation), ಭಾರಿ ತಾಪಮಾನ ವೈಪರೀತ್ಯ, ಹಾಗೂ ಆಕಾಶದಲ್ಲಿ ತಲೆಯೆತ್ತುವ 'ಮೈಕ್ರೋಮೆಟಿಯೋರಾಯ್ಡ್' (ಉಲ್ಕಾಪಾತ) ಮತ್ತು ಬಾಹ್ಯಾಕಾಶ ತ್ಯಾಜ್ಯಗಳಿಂದ (Orbital debris) ನಿಲ್ದಾಣವನ್ನು ರಕ್ಷಿಸಲು ಅತ್ಯಾಧುನಿಕ ಕವರ್ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಈ ನಿಲ್ದಾಣವು ಸೂಕ್ಷ್ಮ ಗುರುತ್ವಾಕರ್ಷಣೆಯ (Microgravity) ವಾತಾವರಣದಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲು ಅತ್ಯುತ್ತಮ ವೇದಿಕೆಯಾಗಲಿದೆ. ಮುಖ್ಯವಾಗಿ ಜೀವ ವಿಜ್ಞಾನ, ಔಷಧೀಯ ಸಂಶೋಧನೆ (Pharmaceuticals), ವಸ್ತು ವಿಜ್ಞಾನ (Materials science) ಹಾಗೂ ಸುಧಾರಿತ ಉತ್ಪಾದನಾ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲು ಕೇಂದ್ರ ಸರ್ಕಾರ ಆದ್ಯತೆ ನೀಡಿದೆ.

ಉಡಾವಣಾ ಗುರಿ ಹಾಗೂ ಬಜೆಟ್ ವಿವರ

ಭಾರತವು ತನ್ನ ಗಗನಯಾತ್ರಿ ನೌಕೆ ಯೋಜನೆ 'ಗಗನಯಾನ್‌'ನಿಂದ (Gaganyaan) ಮುನ್ನಡೆದು ಬಾಹ್ಯಾಕಾಶದಲ್ಲಿ ಸ್ಥಿರ ಉಪಸ್ಥಿತಿ ಕಾಯ್ದುಕೊಳ್ಳಲು ಸಜ್ಜಾಗಿದೆ. ಈ ಯೋಜನೆಯಡಿ ತನ್ನ ಮೊದಲ ಮಾಡ್ಯೂಲ್ ‘BAS-01’ ಅನ್ನು 2028 ರ ವೇಳೆಗೆ ಉಡಾವಣೆ ಮಾಡುವ ಹಾಗೂ ಸಂಪೂರ್ಣ 5 ಮಾಡ್ಯೂಲ್‌ಗಳ ಸ್ಪೇಸ್ ಸ್ಟೇಷನ್ ಅನ್ನು 2035 ರ ವೇಳೆಗೆ ಪೂರ್ಣಪ್ರಮಾಣದಲ್ಲಿ ಕಾರ್ಯಾಚರಣೆಗೆ ತರುವ ಬೃಹತ್ ಗುರಿಯನ್ನು ಭಾರತ ಹೊಂದಿದೆ.

ಈ ಪೈಕಿ ಮೊದಲ ಮಾಡ್ಯೂಲ್‌ನ (BAS-01) ಅಭಿವೃದ್ಧಿ ಹಾಗೂ ಉಡಾವಣೆಗಾಗಿ 2025-2028 ರ ಅವಧಿಗೆ ಕೇಂದ್ರ ಸರ್ಕಾರವು ಈಗಾಗಲೇ ₹1,763 ಕೋಟಿ ಅನುಮೋದಿತ ಬಜೆಟ್ ಕಾಯ್ದಿರಿಸಿದೆ. ಈ ಬಾಹ್ಯಾಕಾಶ ಔಟ್‌ಪೋಸ್ಟ್ ನಿರ್ಮಾಣ ಹಾಗೂ ನಿರ್ವಹಣೆಯಲ್ಲಿ ರೋಬೋಟಿಕ್ ಸಿಸ್ಟಮ್‌ಗಳು ಅತ್ಯಂತ ಪ್ರಮುಖ ಪಾತ್ರ ವಹಿಸಲಿವೆ.