ಬೆಂಗಳೂರು: ಆಚಾರವಿಲ್ಲದ ನಾಲಿಗೆ, ವಿಚಾರವಿಲ್ಲದ ಮಾತು, ಇದು ಮಾನ್ಯ ಕುಮಾರಸ್ವಾಮಿಯವರನ್ನು ವಿವರಿಸಬಹುದಾದ ಅತ್ಯುತ್ತಮ ಸಾಲುಗಳು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಪ್ರಿಯಾಂಕ್ ಖರ್ಗೆ ಹರಿಹಾಯ್ದಿದ್ದಾರೆ.
ಈ ಸಂಬಂಧ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, ನಿನ್ನೆ ಏನು ಮಾತನಾಡಿದ್ದೆ, ಮೊನ್ನೆ ಏನು ಮಾತನಾಡಿದ್ದೆ, ಇಂದು ಏನು ಮಾತನಾಡುತ್ತಿದ್ದೇನೆ, ನಾಳೆ ಏನು ಮಾತನಾಡುತ್ತೇನೆ ಎಂಬುದರ ಸ್ಪಷ್ಟತೆ ಸ್ವತಃ ಕುಮಾರಸ್ವಾಮಿಯವರಿಗೇ ಇಲ್ಲ.
ಸಿದ್ದರಾಮಯ್ಯನವರ ವಿಷಯವನ್ನಿಟ್ಟುಕೊಂಡು ಒಮ್ಮೆ ಮುಖ್ಯಮಂತ್ರಿಗಳ ಕಡೆ ಬೆರಳು ತೋರಿಸುತ್ತಾರೆ, ಮತ್ತೊಮ್ಮೆ ಜಮೀರ್ ಅಹಮದ್ ಅವರ ಕಡೆ ಕೈ ತೋರಿಸುತ್ತಾರೆ, ಇನ್ನೊಮ್ಮೆ ಖರ್ಗೆ ಕುಟುಂಬದ ಕಡೆ ಕೈ ತೋರಿಸುತ್ತಾರೆ. ಕಂಡವರ ಮನೆಗೆ ಬೆಂಕಿ ಹಚ್ಚಿ ಬೇಳೆ ಬೇಯಿಸಿಕೊಳ್ಳುವುದನ್ನು ಮನೆಮುರುಕತನ ಎನ್ನುತ್ತಾರೆ. “ಮನೆಮುರುಕತನ” ಎಂಬ ಪದದ ಅರ್ಥ ನಿಮಗೆ ತಿಳಿದಿದೆ ಎಂದುಕೊಂಡಿದ್ದೇನೆ ಎಂದು ಲೇವಡಿ ಮಾಡಿದ್ದಾರೆ.
ಸಿದ್ದರಾಮಯ್ಯನವರನ್ನು ಅತಿ ಹೆಚ್ಚು ಅವಮಾನಿಸಿದವರು ಯಾರಾದರೂ ಇದ್ದರೆ, ಅದು ಕುಮಾರಸ್ವಾಮಿಯವರು ಮಾತ್ರ. ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಿದವರು ಯಾರಾದರೂ ಇದ್ದರೆ, ಅದು ಕುಮಾರಸ್ವಾಮಿಯವರು ಮಾತ್ರ. ಇದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸ್ಪಷ್ಟವಾಗಿ ಗೋಚರಿಸುವ ಸತ್ಯ. ಸಿದ್ದರಾಮಯ್ಯನವರ ರಾಜಕೀಯ ಜೀವನದುದ್ದಕ್ಕೂ ಎಡೆಬಿಡದೆ ಕಾಡಿದವರು, ಇಂದು ಖರ್ಗೆ ಕುಟುಂಬದ ಕಡೆ ತಿರುಗಿದ್ದಾರೆ ಎಂದು ಆರೋಪಿಸಿದ್ದಾರೆ.
“ಆಚಾರವಿಲ್ಲದ ನಾಲಿಗೆ, ವಿಚಾರವಿಲ್ಲದ ಮಾತು!” — ಇದು ಮಾನ್ಯ ಕುಮಾರಸ್ವಾಮಿಯವರನ್ನು ವಿವರಿಸಬಹುದಾದ ಅತ್ಯುತ್ತಮ ಸಾಲುಗಳು.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 29, 2026
ನಿನ್ನೆ ಏನು ಮಾತನಾಡಿದ್ದೆ, ಮೊನ್ನೆ ಏನು ಮಾತನಾಡಿದ್ದೆ, ಇಂದು ಏನು ಮಾತನಾಡುತ್ತಿದ್ದೇನೆ, ನಾಳೆ ಏನು ಮಾತನಾಡುತ್ತೇನೆ ಎಂಬುದರ ಸ್ಪಷ್ಟತೆ ಸ್ವತಃ ಕುಮಾರಸ್ವಾಮಿಯವರಿಗೇ ಇಲ್ಲ.
ಶ್ರೀ ಸಿದ್ದರಾಮಯ್ಯನವರ…
ಕುಮಾರಸ್ವಾಮಿಯವರೇ,
ನಿಮ್ಮ ಐಟಿ ಸೆಲ್ನ ಹುಡುಗರು ವಿಚಾರಣೆಗೆ ಹಾಜರಾಗುತ್ತಿಲ್ಲವೇಕೆ?
ಸ್ಟಿಂಗ್ ವಿಡಿಯೋ ಬಹಿರಂಗಪಡಿಸುವಲ್ಲಿ ನಮ್ಮವರ ಪಾತ್ರವಿಲ್ಲ ಎಂದು ಧೈರ್ಯವಾಗಿ ಹೇಳುವ ನೈತಿಕತೆಯನ್ನು ತೋರುತ್ತಿಲ್ಲವೇಕೆ?
ವಿಡಿಯೋ ಅಪ್ಲೋಡ್ ಮಾಡಿದ್ದನ್ನು ವಿರೋಧಿಸುತ್ತಿಲ್ಲವೇಕೆ?
ಅಕ್ಕ ಸಮ್ಮೇಳನದ ಹೆಸರಿನಲ್ಲಿ ಅಮೆರಿಕಕ್ಕೆ ಹೋಗಿ ನಡೆಸಿದ ಷಡ್ಯಂತ್ರವೇನು?
ಮಾತನಾಡುತ್ತೀರಾ, ಕುಮಾರಣ್ಣಾ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಸ್ವತಃ ತಮ್ಮ ಸಹೋದರನ ಕುಟುಂಬದ ಬೆಳವಣಿಗೆಯನ್ನೂ ಸಹಿಸದ ಕುಮಾರಸ್ವಾಮಿಯವರು ನಮ್ಮನ್ನು ಸಹಿಸಬಲ್ಲರೇ? ಕುಮಾರಸ್ವಾಮಿಯವರೇ, ಕಿಂಚಿತ್ತಾದರೂ ಮಾತಿನಲ್ಲಿ ಘನತೆ ಬೆಳೆಸಿಕೊಳ್ಳಿ, ಸತ್ಯ ಹೇಳುವುದನ್ನು ರೂಢಿಸಿಕೊಳ್ಳಿ, ನಡತೆಯಲ್ಲಿ ತೂಕ ಹೆಚ್ಚಿಸಿಕೊಳ್ಳಿ ಎಂದು ಕಿಡಿ ಕಾರಿದ್ದಾರೆ.

