ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಮಾರ್ನಸ್ ಲಾಬುಶೇನ್ ಶೂನ್ಯಕ್ಕೆ ಔಟ್ ಆಗಿದ್ದಾರೆ. ಇತ್ತ ಮಾರ್ನಸ್ ವಿಕೆಟ್ ಸಿಗುತ್ತಿದ್ದಂತೆ ಸೌತ್ ಆಫ್ರಿಕಾದ ಫೀಲ್ಡರ್ ಮ್ಯಾಥ್ಯೂ ಬ್ರೀಟ್​ಝ್ಕೆ ಮಾಡಿದ ವಿಶಿಷ್ಟ ಸಂಭ್ರಮಾಚರಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಮೈದಾನದಲ್ಲಿ ನಡೆದಿದ್ದೇನು?

ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನ ವೇಳೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಮಾರ್ನಸ್ ಲಾಬುಶೇನ್ ಅವರನ್ನು ಸೌತ್ ಆಫ್ರಿಕಾದ ಆಟಗಾರರು ಮೊದಲಿನಿಂದಲೇ ಟಾರ್ಗೆಟ್ ಮಾಡಿದ್ದರು. ಸ್ಟಂಪ್ ಮೈಕ್‌ನಲ್ಲಿ “ಆ ಕಿರಿಕಿರಿ ತರುವ ನಂ. 3 ಬ್ಯಾಟರ್ ಅನ್ನು ಬೇಗ ಕ್ರೀಸ್‌ಗೆ ಕಳುಹಿಸಿ” ಎಂಬ ಮಾತುಗಳು ಕೇಳಿಬಂದಿದ್ದವು.

ಈ ವೇಳೆ ಸ್ಪಿನ್ನರ್ ಸೈಮನ್ ಹಾರ್ಮರ್ ಎಸೆದ ಚೆಂಡನ್ನು ರಕ್ಷಣಾತ್ಮವಾಗಿ ಆಡಲು ಹೋಗಿ ಸ್ಲಿಪ್‌ನಲ್ಲಿದ್ದ ಐಡೆನ್ ಮಾರ್ಕ್ರಾಮ್‌ಗೆ ಕ್ಯಾಚ್ ನೀಡಿದರು. ಕೇವಲ 5 ಎಸೆತಗಳನ್ನು ಎದುರಿಸಿದ ಲಾಬುಶೇನ್ ಖಾತೆ ತೆರೆಯದೆಯೇ ಪೆವಿಲಿಯನ್ ಹಾದಿ ಹಿಡಿದರು.

‘ಕಾಂಗರೂ ಜಂಪ್’ ಸೆಲೆಬ್ರೇಷನ್!

ಲಾಬುಶೇನ್ ಔಟ್ ಆಗುತ್ತಿದ್ದಂತೆ, ಹತ್ತಿರದಲ್ಲೇ ಫೀಲ್ಡಿಂಗ್ ಮಾಡುತ್ತಿದ್ದ ಮ್ಯಾಥ್ಯೂ ಬ್ರೀಟ್​ಝ್ಕೆ ಆಸ್ಟ್ರೇಲಿಯಾ ಬ್ಯಾಟರ್​ನತ್ತ ದಿಟ್ಟಿಸಿ ನೋಡುತ್ತಾ ಪಿಚ್‌ ಮೇಲಿಂದ ಜಿಗಿದು ವಿಚಿತ್ರವಾಗಿ ಸಂಭ್ರಮಿಸಿದರು. ಈ ದೃಶ್ಯವನ್ನು ನೋಡಿದ ಕಾಮೆಂಟೇಟರ್ಸ್  ಮತ್ತು ಅಭಿಮಾನಿಗಳು ಇದನ್ನು “ಕಾಂಗರೂ ಜಂಪ್” ಸೆಲೆಬ್ರೇಷನ್ ಎಂದು ಕರೆದಿದ್ದಾರೆ.

Wait for it 😂

#SAvAUS https://t.co/2NS83O1FJZ

— FanCode (@FanCode) October 28, 2026

ಸ್ಲೆಡ್ಜಿಂಗ್​ಗೆ ತಿರುಗೇಟು:

ಮಾಜಿ ಕ್ರಿಕೆಟಿಗರು ಮತ್ತು ವಿಶ್ಲೇಷಕರ ಪ್ರಕಾರ, ಮ್ಯಾಥ್ಯೂ ಬ್ರೀಟ್​ಝ್ಕೆ ಅವರ ಈ ಆಕ್ರಮಣಕಾರಿ ಸೆಲೆಬ್ರೇಷನ್ ಆಕಸ್ಮಿಕವಾಗಿರಲಿಲ್ಲ. ಇದು ಲಾಬುಶೇನ್​ಗೆ ನೀಡಿದ ತಿರುಗೇಟಾಗಿತ್ತು.

ಏಕೆಂದರೆ, ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ ಫೀಲ್ಡಿಂಗ್ ಮಾಡುತ್ತಿದ್ದಾಗ, ಲಾಬುಶೇನ್ ಸೌತ್ ಆಫ್ರಿಕಾ ಬ್ಯಾಟರ್‌ಗಳಿಗೆ ಸತತವಾಗಿ ಸ್ಲೆಡ್ಜಿಂಗ್ ಮಾಡುತ್ತಾ ಕಿರಿಕಿರಿ ಉಂಟುಮಾಡಿದ್ದರು ಎಂದು ಡೇವಿಡ್ ವಾರ್ನರ್ ತಿಳಿಸಿದ್ದಾರೆ.

ಅಲ್ಲದೆ, ಈ ಸರಣಿಯ ಆರಂಭದಲ್ಲಿ ಬ್ರೀಟ್​​ಝ್ಕೆ ಔಟ್ ಆದಾಗ, ಫಸ್ಟ್ ಸ್ಲಿಪ್‌ನಲ್ಲಿದ್ದ ಲಾಬುಶೇನ್ ಸೌತ್ ಆಫ್ರಿಕಾ ಆಟಗಾರನ ಮುಖದ ಮುಂದೆಯೇ ಬಂದು ಅತಿರೇಕವಾಗಿ ಸಂಭ್ರಮಿಸಿದ್ದರು. ಅದಕ್ಕೆ ಸರಿಯಾದ ತಿರುಗೇಟು ನೀಡಲು ಕಾಯುತ್ತಿದ್ದ ಬ್ರೀಟ್​ಝ್ಕೆ ಲಾಬುಶೇನ್ ಶೂನ್ಯಕ್ಕೆ ಔಟ್ ಆದ ತಕ್ಷಣ ಅದೇ ಶೈಲಿಯಲ್ಲಿ ಹಳೆಯ ಲೆಕ್ಕವನ್ನು ಚುಕ್ತಾ ಮಾಡಿದಿದ್ದಾರೆ. ಈ ಲೆಕ್ಕ ಚುಕ್ತಾದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕಾಂಗರೂ ಜಂಪ್ ಸೆಲೆಬ್ರೇಷನ್ ಹೆಸರಿನಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 329 ರನ್ ಗಳಿಸಿ ಆಲೌಟ್ ಆಗಿದೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡುತ್ತಿರುವ ಆಸ್ಟ್ರೇಲಿಯಾ ತಂಡವು ಎರಡನೇ ದಿನದಾಟದ ಅಂತ್ಯದ ವೇಳೆ 4 ವಿಕೆಟ್ ಕಳೆದುಕೊಂಡು 330 ರನ್ ಕಲೆಹಾಕಿದೆ.