ಮಾಂಗ್ ಕೋಕ್‌ನಲ್ಲಿ ನಡೆಯುತ್ತಿರುವ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ 4 ವಿಕೆಟ್‌ಗಳ ಸೋಲು ಅನುಭವಿಸಿದೆ. ತಲಾ 6 ಓವರ್‌ಗಳ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 88 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ಕೇವಲ 23 ಎಸೆತಗಳಲ್ಲೇ ಗೆಲುವಿನ ನಗೆ ಬೀರಿತು. ಪಾಕಿಸ್ತಾನದ ನಾಯಕ ಅಬ್ಬಾಸ್ ಅಫ್ರಿದಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 8 ಎಸೆತಗಳಲ್ಲಿ 35 ರನ್ ಸಿಡಿಸಿದ ಅವರು, ತಮ್ಮ ಒಂದು ಓವರ್‌ನಲ್ಲಿ ಕೇವಲ 10 ರನ್ ನೀಡಿ ಗಮನ ಸೆಳೆದರು. ಇತ್ತ ಭಾರತದ ನಾಯಕ ಕೃನಾಲ್ ಪಾಂಡ್ಯ ಪಾಲಿಗೆ ಈ ಪಂದ್ಯ ದುಃಸ್ವಪ್ನವಾಗಿ ಪರಿಣಮಿಸಿತು.
ಭಾರತದ ಬ್ಯಾಟಿಂಗ್ ವೈಫಲ್ಯ
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕ ಆಟಗಾರ ರಾಹುಲ್ ತ್ರಿಪಾಠಿ ಕೇವಲ 9 ರನ್ ಗಳಿಸಿ ಔಟಾದರೆ, ನಿತೀಶ್ ರಾಣಾ 14 ಎಸೆತಗಳಲ್ಲಿ 19 ರನ್ ಗಳಿಸಿದರು. ಇನ್ನು ಶಶಾಂಕ್ ಸಿಂಗ್ ಮಾತ್ರ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಕೇವಲ 11 ಎಸೆತಗಳನ್ನು ಎದುರಿಸಿದ ಅವರು, 5 ಸಿಕ್ಸರ್ ಹಾಗೂ 2 ಬೌಂಡರಿಗಳ ನೆರವಿನಿಂದ 40 ರನ್ ಸಿಡಿಸಿದರು. ಆದರೆ, ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ.
ಭಾರತದ ನಾಯಕ ಕೃನಾಲ್ ಪಾಂಡ್ಯ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ರಾಹುಲ್ ತೆವಾಟಿಯಾ ಕೂಡ ಗೋಲ್ಡನ್ ಡಕ್‌ಗೆ ಬಲಿಯಾದರು. ನಟರಾಜನ್ 6 ಎಸೆತಗಳಲ್ಲಿ 12 ರನ್ ಗಳಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಭಾರತ 88 ರನ್‌ಗಳ ಮೊತ್ತಕ್ಕೆ ತೃಪ್ತಿಪಟ್ಟಿತು.
ದುಬಾರಿಯಾದ ಕೃನಾಲ್ ಪಾಂಡ್ಯ
89 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಖವಾಜಾ ನಫೆ ಹಾಗೂ ನಾಯಕ ಅಬ್ಬಾಸ್ ಅಫ್ರಿದಿ ಸ್ಫೋಟಕ ಆರಂಭ ಒದಗಿಸಿದರು. ಅದರಲ್ಲೂ ಕೃನಾಲ್ ಪಾಂಡ್ಯ ಎಸೆದ ಮೊದಲ ಓವರ್‌ನಲ್ಲಿ ಅಬ್ಬಾಸ್ ಅಫ್ರಿದಿ ಸತತ ಐದು ಸಿಕ್ಸರ್‌ಗಳನ್ನು ಸಿಡಿಸಿ ಭಾರತದ ಬೌಲರ್‌ಗಳನ್ನು ಕಂಗೆಡಿಸಿದರು. ಕೇವಲ 8 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನಿಂದ 35 ರನ್ ಗಳಿಸಿದ ಅಬ್ಬಾಸ್ ಅಫ್ರಿದಿ ಪಾಕಿಸ್ತಾನದ ಗೆಲುವನ್ನು ಸುಲಭಗೊಳಿಸಿದರು. ಮತ್ತೊಂದೆಡೆ ಖವಾಜಾ ನಫೆ ಕೂಡ 12 ಎಸೆತಗಳಲ್ಲಿ 41 ರನ್ ಸಿಡಿಸಿ ಅಬ್ಬರಿಸಿದರು.
ನಂತರ ಅಬ್ದುಲ್ ಸಮದ್ 7 ರನ್ ಗಳಿಸಿ ಅಜೇಯರಾಗಿ ಉಳಿದರು. ಇರ್ಫಾನ್ ಖಾನ್ ತಾವು ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಮೂಲಕ ಪಾಕಿಸ್ತಾನದ ಗೆಲುವನ್ನು ಖಚಿತಪಡಿಸಿದರು. ಈ ಸೋಲಿನ ಬಳಿಕ ಭಾರತ ತಂಡ ಅಕ್ಟೋಬರ್ 31ರಂದು ಯುಎಇ ವಿರುದ್ಧ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

