ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿ ಮೀರುತ್ತಿದೆ. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ಮಹತ್ವದ ವಿಚಾರಣೆ ನಡೆಯಿತು. ಈ ವೇಳೆ ಸುಪ್ರೀಂ ಕೋರ್ಟ್, ದೆಹಲಿ ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದೆ.

ವಾಯುಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಟೀಂ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ರಂತಹ ಪ್ರಸಿದ್ಧ ವ್ಯಕ್ತಿಗಳ ನೆರವು ಪಡೆಯುವಂತೆ ಸೂಚಿಸಿದೆ. ದೆಹಲಿ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ವಾದ ಮಂಡಿಸಿದರು. ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಹಿಂದೆಂದಿಗಿಂತಲೂ ಹೆಚ್ಚು ಸಿದ್ಧತೆ ಮಾಡಿಕೊಂಡಿದೆ ಎಂದು ಕೋರ್ಟ್‌ಗೆ ತಿಳಿಸಿದರು.

ದೆಹಲಿ ಸರ್ಕಾರ ತೆಗೆದುಕೊಂಡ ಪ್ರಮುಖ ಕ್ರಮ

  • ಬಿಎಸ್-6 ನಿಯಮ ಪಾಲಿಸದ ಹೊರಗಿನ ವಾಹನಗಳಿಗೆ ದೆಹಲಿ ಪ್ರವೇಶಕ್ಕೆ ನಿಷೇಧ
  • ಟ್ರಾಫಿಕ್ ಕಡಿಮೆ ಮಾಡಲು ಸರ್ಕಾರಿ ಕಚೇರಿಗಳ ಕೆಲಸದ ಅವಧಿಯಲ್ಲಿ ಬದಲಾವಣೆ
  • ನಿರ್ಮಾಣ ಸ್ಥಳಗಳ ಬಳಿ 608 ಆಂಟಿ-ಸ್ಮಾಗ್ ಗನ್‌ಗಳ ಅಳವಡಿಕೆ
  • ವಾಯು ರಕ್ಷಕ್ ಯೋಜನೆ, ವಾರ್ಷಿಕ ಮಾಲಿನ್ಯ ನಿಯಂತ್ರಣ ಯೋಜನೆ ಜಾರಿ

ಸರ್ಕಾರದ ಈ ಕ್ರಮಕ್ಕೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್.. ನೀವು ಕೇವಲ ನಿಯಮಗಳನ್ನು ಜಾರಿ ತಂದರೆ ಸಾಲದು. ಜನರ ಮನಸ್ಥಿತಿಯನ್ನು ಬದಲಾಯಿಸಬೇಕು. ಜನರು ರಾತ್ರೋರಾತ್ರಿ ಬದಲಾಗುವುದಿಲ್ಲ. ಇದಕ್ಕೆ ನಿರಂತರ ಜಾಗೃತಿ ಅಭಿಯಾನ ಮುಖ್ಯ ಮಾರ್ಗವಾಗಿದೆ. ಅದಕ್ಕಾಗಿ ಜನರಿಗೆ ಚಿರಪರಿಚಿತ ಸೆಲೆಬ್ರಿಟಿಗಳನ್ನು ಬಳಸಿಕೊಳ್ಳಬೇಕು. ಉದಾಹರಣೆಗೆ ವಿರಾಟ್ ಕೊಹ್ಲಿ ರಂತಹ ಕ್ರಿಕೆಟ್ ದಿಗ್ಗಜರ ಮೂಲಕ ಜಾಗೃತಿ ಮೂಡಿಸಿದರೆ ಜನ ಬೇಗನೆ ಎಚ್ಚೆತ್ತುಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ವಿರಾಟ್ ಕೊಹ್ಲಿ ದೆಹಲಿಯವರೇ ಆಗಿದ್ದಾರೆ. ದೇಶದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಯುವಜನರ ಮೇಲೆ ಅವರ ಮಾತಿಗೆ ಹೆಚ್ಚಿನ ಪ್ರಭಾವವಿದೆ. ಹೀಗಾಗಿ ಅವರಂತಹ ಪ್ರಭಾವಿ ವ್ಯಕ್ತಿಗಳ ಮೂಲಕ ವಾಯುಮಾಲಿನ್ಯದ ದುಷ್ಪರಿಣಾಮಗಳ ಬಗ್ಗೆ, ಅದರಲ್ಲೂ ಮಕ್ಕಳು, ವೃದ್ಧರು ಮತ್ತು ಅಂಗವಿಕಲರ ಮೇಲಾಗುವ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಿದರೆ ಹೆಚ್ಚು ಪರಿಣಾಮಕಾರಿ ಆಗಿರಲಿದೆ ಎಂದು ಕೋರ್ಟ್ ಹೇಳಿದೆ.

ದೆಹಲಿ ಸರ್ಕಾರ ಕೈಗೊಂಡಿರುವ ಇತರ ಕ್ರಮಗಳ ಬಗ್ಗೆಯೂ ಐಶ್ವರ್ಯಾ ಭಾಟಿ ವಿವರಿಸಿದರು. ನಿರ್ಮಾಣ ಹಂತದ ಕಟ್ಟಡಗಳ ಬಳಿ ಆಂಟಿ-ಸ್ಮಾಗ್ ಗನ್ ಅಳವಡಿಸಲಾಗಿದೆ. ಒಟ್ಟು 608 ಆಂಟಿ-ಸ್ಮಾಗ್ ಗನ್‌ಗಳನ್ನು ದೆಹಲಿಯಾದ್ಯಂತ ನಿಯೋಜಿಸಲಾಗಿದೆ. ವಾಯು ರಕ್ಷಕ್ ಎಂಬ ವಿಶೇಷ ತಂಡವನ್ನು ರಚಿಸಲಾಗಿದೆ.

ಪಟಾಕಿ ಸಂಪೂರ್ಣ ನಿಷೇಧಕ್ಕೆ ಸುಪ್ರೀಂ ನಕಾರ

ವಾರ್ಷಿಕ ಮಾಲಿನ್ಯ ನಿಯಂತ್ರಣ ಯೋಜನೆ ಮತ್ತು ನಿಯಂತ್ರಣ ಕೇಂದ್ರದ ಮೂಲಕ ನಿರಂತರವಾಗಿ ಗಾಳಿಯ ಗುಣಮಟ್ಟವನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು. ಇದೇ ವೇಳೆ ಪಟಾಕಿ ನಿಷೇಧದ ಬಗ್ಗೆಯೂ ಕೋರ್ಟ್ ಸ್ಪಷ್ಟನೆ ನೀಡಿದೆ. ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸುವ ಉದ್ದೇಶ ನಮಗಿಲ್ಲ, ಇದು ಜನರ ಭಾವನೆಗಳಿಗೆ ಸಂಬಂಧಿಸಿದ ವಿಚಾರ. ದೀಪಾವಳಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ. ಆದರೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ದೀಪಾವಳಿ ಸುತ್ತಮುತ್ತಲಿನ ಎರಡು ದಿನಗಳ ಕಾಲ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.