ಟೀಂ ಇಂಡಿಯಾದ ಮಹಿಳಾ ಕ್ರಿಕೆಟ್ ತಂಡವು 2025ರಲ್ಲಿ ಮೊದಲ ಬಾರಿಗೆ ಏಕದಿನ ವಿಶ್ವಕಪ್‌ ಟ್ರೋಫಿಗೆ ಮುತ್ತಿಟ್ಟಿತು. ಗೆದ್ದ ಬೆನ್ನಲ್ಲೇ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಸ್ಮೃತಿ ಮಂದಾನಗೆ ವಿಶೇಷ ಸಂದೇಶ ಕಳುಹಿಸಿದ್ದರಂತೆ. ಅದನ್ನು ಸ್ಮೃತಿ ಮಂದಾನ ಇದೀಗ ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ಗಲ್ಫ್ ಆಯಿಲ್‌ನ 125ನೇ ವಾರ್ಷಿಕೋತ್ಸವದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಧೋನಿ ಮತ್ತು ಮಂದಾನ ಇಬ್ಬರೂ ಬ್ರಾಂಡ್ ರಾಯಭಾರಿಗಳಾಗಿ ಭಾಗವಹಿಸಿದ್ದರು. ಆಗ ಸ್ಮೃತಿ ಮಂದಾನ ಧೋನಿ ಕಳುಹಿಸಿದ ಸಂದೇಶದ ಬಗ್ಗೆ ಬಹಿರಂಗಪಡಿಸಿದ್ದಾರೆ.

ಸ್ಮೃತಿ ಮಂದಾನ ಹೇಳಿದ್ದೇನು?

ಧೋನಿ ಸಾಮಾನ್ಯವಾಗಿ ತನ್ನ ಫೋನ್‌ನಲ್ಲಿ ಹೆಚ್ಚು ಸಂದೇಶ ಕಳುಹಿಸುವುದಿಲ್ಲ. ಆದರೆ ನಾವು ವಿಶ್ವಕಪ್ ಗೆದ್ದಾಗ ನನಗೆ ಅವರ ಕಡೆಯಿಂದ ಮೆಸೇಜ್ ಬಂದಿತ್ತು. ಅದನ್ನು ನೋಡಿ ನನಗೆ ತುಂಬಾ ಸಂತೋಷ ಆಯಿತು. ನನ್ನ ಖುಷಿಗೆ ಪಾರವೇ ಇರಲಿಲ್ಲ. ಇದೇ ವೇಳೆ ಧೋನಿ ಏನೆಂದು ಮೆಸೇಜ್ ಮಾಡಿದ್ದರು ಅನ್ನೋದನ್ನೂ ಸ್ಮೃತಿ ಮಂದಾನ ಬಹಿರಂಗಪಡಿಸಿದ್ದಾರೆ. 'Please wish everyone part of this win' (ಈ ಗೆಲುವಿನಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಅಭಿನಂದನೆಗಳು/ಶುಭಾಶಯಗಳು) ಎಂಬ ಸಂದೇಶವನ್ನು ಕಳುಹಿಸಿದ್ದರು ಎಂದು ತಿಳಿಸಿದ್ದಾರೆ. ನಾವು ವಿಶ್ವಕಪ್ ಗೆದ್ದಾಗ ಧೋನಿ ಅವರು, ಶುಭ ಹಾರೈಸಿದ್ದ ಕ್ಷಣವನ್ನು ಮಂದಾನ ಹಂಚಿಕೊಂಡಿದ್ದಾರೆ.

2025ರ ವಿಶ್ವಕಪ್ ಫೈನಲ್ ಪಂದ್ಯವು ಮುಂಬೈನಲ್ಲಿ ನಡೆದಿತ್ತು. ಟೀಂ ಇಂಡಿಯಾವು ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸುವ ಮೂಲಕ ಚೊಚ್ಚಲ ವಿಶ್ವಕಪ್‌ಗೆ ಮುತ್ತಿಟ್ಟಿತು. ಈ ಗೆಲುವಿನಲ್ಲಿ ಸ್ಮೃತಿ ಮಂದಾನ ಪ್ರಮುಖ ಪಾತ್ರ ವಹಿಸಿದ್ದರು. 2025ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಮಂದಾನ ಅದ್ಭುತ ಪ್ರದರ್ಶನ ನೀಡಿದ್ದರು. ಒಂಬತ್ತು ಪಂದ್ಯಗಳಲ್ಲಿ 54.25 ಸರಾಸರಿಯಲ್ಲಿ 434 ರನ್‌ಗಳಿಸಿದ್ದರು. ಒಂದು ಶತಕ ಮತ್ತು ಎರಡು ಅರ್ಧಶತಕಗಳು ಸೇರಿದ್ದವು.

ಈ ವಿಶ್ವಕಪ್‌ನ ಗೆಲುವು ಸ್ಮೃತಿ ಮಂದಾನ ವೃತ್ತಿ ಬದುಕಿಗೆ ಮತ್ತೊಂದು ತಿರುವು ನೀಡಿತು. ಕಳೆದ ಅಕ್ಟೋಬರ್‍‌ನಲ್ಲಿ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರು ಕ್ಯಾಪ್ಟನ್ಸಿಯಿಂದ ಕೆಳಗೆ ಇಳಿದರು. ಬೆನ್ನಲ್ಲೇ, ಸ್ಮೃತಿ ಮಂದಾನ ತಂಡದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ನಾಯಕಿಯಾಗಿ ಸ್ಮೃತಿ ಮಂದಾನ ಮೊದಲ ಸರಣಿಯಲ್ಲಿ ಯಶಸ್ವಿಯಾಗಿ ಗೆದ್ದಿದ್ದಾರೆ. ಜಿಂಬಾಬ್ವೆ ವಿರುದ್ಧದ ODI ಸರಣಿಯನ್ನು ಭಾರತ ತಂಡವು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ. ಆ ಮೂಲಕ ಭಾರತೀಯ ಮಹಿಳಾ ತಂಡದ ಹೊಸ ನಾಯಕಿಯಾಗಿ ಮಂದಾನ ಪ್ರಯಾಣಕ್ಕೆ ಯಶಸ್ವಿನ ಆರಂಭ ಸಿಕ್ಕಿದೆ ಎಂದು ಹೇಳಬಹುದು.