ಆಕ್ಲೆಂಡ್‌: ನ್ಯೂಜಿಲೆಂಡ್‌ ವಿರುದ್ಧ ಆರಂಭಿಕ 3 ಪಂದ್ಯಗಳಲ್ಲೂ ಗೆದ್ದು ಸರಣಿ ಕೈವಶಪಡಿಸಿಕೊಂಡಿರುವ ಟೀಂ ಇಂಡಿಯಾ, ಈಗ ಆತಿಥೇಯರ ವಿರುದ್ಧ 4ನೇ ಟಿ20 ಪಂದ್ಯಕ್ಕೆ ಸಜ್ಜಾಗಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಶುಕ್ರವಾರ ಆಕ್ಲೆಂಡ್‌ನಲ್ಲಿ ನಡೆಯಲಿದೆ.

ಭಾರತ ಈಗಾಗಲೇ ಸರಣಿ ಗೆದ್ದಿರುವುದರಿಂದ, ಈ ಪಂದ್ಯದಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆಯಿದೆ. ಪ್ರಮುಖವಾಗಿ ಇಬ್ಬರು ಸ್ಪಿನ್ನರ್‌ಗಳಾದ ಕುಲ್ದೀಪ್‌ ಯಾದವ್‌ ಹಾಗೂ ವರುಣ್‌ ಚಕ್ರವರ್ತಿ ಅವಕಾಶಕ್ಕಾಗಿ ಕಾಯುತ್ತಿದ್ದು, ಅವರನ್ನು ಆಡುವ 11ರ ಬಳಗದಲ್ಲಿ ಆಡಿಸಲಿದೆಯೇ ಎಂಬ ಕುತೂಹಲವಿದೆ. ವೇಗಿ ಭುವನೇಶ್ವರ್‌ ಆರಂಭಿಕ 3 ಪಂದ್ಯಗಳಲ್ಲೂ ದುಬಾರಿಯಾಗಿದ್ದು, ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬೇಕಿದ್ದರೆ ಮಾರಕ ದಾಳಿ ಸಂಘಟಿಸಬೇಕಿದೆ.

ಇಶಾನ್ ಕಿಶನ್ ಗೈರು?:

ಗಾಯದಿಂದಾಗಿ ಕಳೆದೆರಡು ಪಂದ್ಯಕ್ಕೆ ಗೈರಾಗಿದ್ದ ಇಶಾನ್‌ ಕಿಶನ್‌ ಈ ಪಂದ್ಯಕ್ಕೆ ಲಭ್ಯವಿದ್ದಾರೆಯೇ ಇಲ್ಲವೇ ಎಂಬುದರ ಬಗ್ಗೆ ಮಾಹಿತಿ ಲಭಿಸಿಲ್ಲ. ಅವರು ಗೈರಾದರೆ ವೈಭವ್‌ ಸೂರ್ಯವಂಶಿಗೆ ಮತ್ತೊಂದು ಅವಕಾಶ ಸಿಗಲಿದೆ.

ಇನ್ನು, ತವರಿನಲ್ಲೇ ಹ್ಯಾಟ್ರಿಕ್‌ ಸೋಲನುಭವಿಸಿರುವ ಕಿವೀಸ್‌ ಪುಟಿದೇಳಲು ಕಾಯುತ್ತಿದ್ದು, ಸುಧಾರಿತ ಪ್ರದರ್ಶನ ನೀಡಬೇಕಾದ ಅಗತ್ಯವಿದೆ.

ಕೊನೆ 2 ಟಿ20ಯಿಂದ ಫರ್ಗ್ಯೂಸನ್‌ ಹೊರಕ್ಕೆ

ಈಗಾಗಲೇ ಸರಣಿ ಸೋತಿರುವ ನ್ಯೂಜಿಲೆಂಡ್‌ಗೆ ಮತ್ತೊಂದು ಹಿನ್ನಡೆ ಉಂಟಾಗಿದೆ. ತಂಡದ ಪ್ರಮುಖ ವೇಗಿ ಲಾಕಿ ಫರ್ಗ್ಯೂಸನ್‌ ಗಾಯದಿಂದಾಗಿ ಕೊನೆ 2 ಟಿ20 ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಅವರ ಬದಲು ಮ್ಯಾಟ್‌ ಫಿಶರ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಸಂಭಾವ್ಯ ಆಟಗಾರರ ತಂಡ:

ಭಾರತ: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್(ನಾಯಕ), ತಿಲಕ್ ವರ್ಮಾ, ನಮನ್ ಧೀರ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಪ್ರಿನ್ಸ್ ಯಾದವ್, ಅರ್ಶದೀಪ್ ಸಿಂಗ್.

ನ್ಯೂಜಿಲೆಂಡ್: ಟಿಮ್ ಸೀಫರ್ಟ್(ವಿಕೆಟ್ ಕೀಪರ್), ಫಿನ್ ಅಲೆನ್, ಡೇರಲ್ ಮಿಚೆಲ್, ಗ್ಲೆನ್ ಫಿಲಿಫ್ಸ್, ಬೆವೊನ್ ಜೇಕೊಬ್ಸ್, ಮಿಚೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್(ನಾಯಕ), ನೇಥನ್ ಸ್ಮಿತ್, ಆಡಂ ಮಿಲ್ನೆ, ಜೇಕಬ್ ಡಫಿ, ಮ್ಯಾಥ್ಯೂ ಫಿಶರ್.

ಪಂದ್ಯ ಆರಂಭ: ಮಧ್ಯಾಹ್ನ 12.30ಕ್ಕೆ