ಇರಾನ್ ಯುದ್ಧದ ಪರಿಣಾಮಗಳನ್ನು ಮುಂದಿಟ್ಟುಕೊಂಡು ದೇಶದಲ್ಲಿ ಆತಂಕ ಸೃಷ್ಟಿಸಲು ಹಾಗೂ ತಪ್ಪು ಮಾಹಿತಿ ಹರಡುವ ಮೂಲಕ ತಮ್ಮ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರಲು ಪ್ರತಿಪಕ್ಷಗಳು ಪ್ರಯತ್ನಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಆರೋಪಿಸಿದರು. ಯಾವುದೇ ರಾಜಕೀಯ ಪಕ್ಷದ ಹೆಸರನ್ನು ಉಲ್ಲೇಖಿಸದೆ ಅವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಗುಜರಾತ್ನ ಬನಸ್ಕಾಂಠಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶ ಸಂಕಷ್ಟ ಎದುರಿಸುತ್ತಿರುವಾಗ ಕೆಲವರು ಅದರಲ್ಲಿ ಸಂತೋಷ ಕಾಣುತ್ತಿದ್ದಾರೆ. ಅನಿಶ್ಚಿತತೆಯ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
ಇರಾನ್ ಯುದ್ಧದಿಂದ ಉಂಟಾಗಿರುವ ಪರಿಣಾಮಗಳನ್ನು ಭಾರತ ಒಗ್ಗಟ್ಟಿನಿಂದ ಎದುರಿಸುತ್ತಿದೆ. ಆದರೆ, ರಸಗೊಬ್ಬರ ಮತ್ತು ಅಡುಗೆ ಅನಿಲದ ಲಭ್ಯತೆಯ ಕುರಿತು ಆತಂಕ ಹರಡುವ ಮೂಲಕ ರೈತರು ಹಾಗೂ ಮಹಿಳೆಯರಲ್ಲಿ ಭಯ ಹುಟ್ಟಿಸಲು ಪ್ರತಿಪಕ್ಷಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.
‘ದೇಶ ಸಂಕಷ್ಟ ಎದುರಿಸುತ್ತಿರುವಾಗ ಈ ಜನರು ಅದರಲ್ಲಿ ಸಂತೋಷಪಡುತ್ತಾರೆ. ಇರಾನ್ ಯುದ್ಧದ ಪರಿಣಾಮಗಳನ್ನು ಭಾರತ ಒಗ್ಗಟ್ಟಿನಿಂದ ಎದುರಿಸುತ್ತಿರುವ ಸಂದರ್ಭದಲ್ಲಿ, ರಸಗೊಬ್ಬರ ಸಿಗುವುದಿಲ್ಲ ಎಂದು ರೈತರನ್ನು ಹಾಗೂ ಅಡುಗೆ ಅನಿಲ ಖಾಲಿಯಾಗುತ್ತದೆ ಎಂದು ಮಹಿಳೆಯರನ್ನು ಹೆದರಿಸಲು ಪ್ರಯತ್ನಿಸಿದರು’ ಎಂದು ಮೋದಿ ಹೇಳಿದರು.
ದೇಶದಲ್ಲಿ ಅಶಾಂತಿ ಸೃಷ್ಟಿಸುವುದು ಹಾಗೂ ತಮ್ಮ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವುದು ಇಂತಹ ಪ್ರಯತ್ನಗಳ ಉದ್ದೇಶವಾಗಿದೆ ಎಂದು ಪ್ರಧಾನಿ ಆರೋಪಿಸಿದರು.
ಯುದ್ಧದ ನಡುವೆಯೂ ರೈತರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಂಡಿದೆ. ಈಗಲೂ ಸುಮಾರು 300 ರೂಪಾಯಿಗೆ ರಸಗೊಬ್ಬರ ಲಭ್ಯವಾಗುವಂತೆ ನೋಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಿಶ್ವದಾದ್ಯಂತ ಅನಿಶ್ಚಿತತೆಯ ವಾತಾವರಣವಿದ್ದರೂ ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದು, ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ ಎಂದು ಪ್ರಧಾನಿ ಹೇಳಿದರು.
ಹಿಂದಿನ ಸರ್ಕಾರಗಳು ಕನಿಷ್ಠ ಬೆಂಬಲ ಬೆಲೆ (MSP) ಸೇರಿದಂತೆ ರೈತರಿಗೆ ಹಲವು ಭರವಸೆಗಳನ್ನು ನೀಡಿದ್ದರೂ ಅವುಗಳನ್ನು ಈಡೇರಿಸಿರಲಿಲ್ಲ. ಆದರೆ, ತಮ್ಮ ಸರ್ಕಾರ ಆ ಭರವಸೆಗಳನ್ನು ಈಡೇರಿಸಿದೆ ಎಂದು ಪ್ರತಿಪಾದಿಸಿದರು.
From farms and dairy to infrastructure and connectivity, Banaskantha is making new strides in development. https://t.co/PCTYAW27DN
— Narendra Modi (@narendramodi) October 30, 2026
ರೈತರಿಗೆ ಕನಿಷ್ಠ ಬೆಂಬಲ ಬೆಲೆ, ಪಿಎಂ-ಕಿಸಾನ್ ನೆರವು ಕುರಿತು ಮೋದಿ ವಿವರಣೆ
ರೈತರ ಕಲ್ಯಾಣಕ್ಕಾಗಿ ತಮ್ಮ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಪ್ರಧಾನಿ ಮೋದಿ, ಕಳೆದ 12 ವರ್ಷಗಳಲ್ಲಿ ಗೋಧಿ ಮತ್ತು ಭತ್ತ ಬೆಳೆಗಾರರಿಗೆ ಕನಿಷ್ಠ ಬೆಂಬಲ ಬೆಲೆಯಡಿ ಸುಮಾರು 24 ಲಕ್ಷ ಕೋಟಿ ರೂ ಪಾವತಿಸಲಾಗಿದೆ ಎಂದು ತಿಳಿಸಿದರು.
ಅದೇ ರೀತಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ಸಣ್ಣ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಸುಮಾರು 4.5 ಲಕ್ಷ ಕೋಟಿ ರೂ ವರ್ಗಾಯಿಸಲಾಗಿದೆ ಎಂದು ಹೇಳಿದರು.
ದೇಶದ ಒಟ್ಟು ರೈತರಲ್ಲಿ ಶೇ 85ಕ್ಕೂ ಹೆಚ್ಚು ಮಂದಿ ಸಣ್ಣ ರೈತರಾಗಿದ್ದು, ಹಲವು ದಶಕಗಳಿಂದ ಅವರನ್ನು ನಿರ್ಲಕ್ಷಿಸಲಾಗಿತ್ತು ಎಂದು ಪ್ರಧಾನಿ ಹೇಳಿದರು.
ತಮ್ಮ ಸರ್ಕಾರವು ನೇರ ಆರ್ಥಿಕ ನೆರವು ಹಾಗೂ ಇತರ ಕ್ರಮಗಳ ಮೂಲಕ ಸಣ್ಣ ರೈತರ ಕಲ್ಯಾಣಕ್ಕೆ ಆದ್ಯತೆ ನೀಡಿದೆ ಎಂದು ತಿಳಿಸಿದರು.
ಧೈರ್ಯವಿದ್ದರೆ ಸಂಸತ್ತು ವಿಸರ್ಜಿಸಿ, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಿ: ಮಲ್ಲಿಕಾರ್ಜುನ ಖರ್ಗೆ ಸವಾಲು; Video14 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ಗುಜರಾತ್ ಪ್ರವಾಸವು ಇಂದು ಬನಸ್ಕಾಂಠಾದಲ್ಲಿ ರೋಡ್ಶೋ ನಡೆಸುವ ಮೂಲಕ ಆರಂಭವಾಯಿತು.
ಈ ಪ್ರವಾಸದ ವೇಳೆ ಬನಸ್ಕಾಂಠಾ ಜಿಲ್ಲೆಯಲ್ಲಿ 14 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವ ಹಾಗೂ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬನಸ್ಕಾಂಠಾದ ಭಿಲ್ಡಿಯಲ್ಲಿ ಸ್ಥಾಪಿಸಲಾಗಿರುವ ‘ಭಾರತ್ ಬೋವೈನ್ ಬ್ರೀಡಿಂಗ್ ಆ್ಯಂಡ್ ರಿಸರ್ಚ್ ಸೆಂಟರ್’ (ಭಾರತ ಜಾನುವಾರು ಸಂತಾನೋತ್ಪತ್ತಿ ಮತ್ತು ಸಂಶೋಧನಾ ಕೇಂದ್ರ) ಅನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
127 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ಕೇಂದ್ರವು ಜಾನುವಾರುಗಳ ಸಂತಾನೋತ್ಪತ್ತಿ, ಆನುವಂಶಿಕ ಗುಣಮಟ್ಟ ಸುಧಾರಣೆ ಹಾಗೂ ಅತ್ಯಾಧುನಿಕ ಸಂತಾನೋತ್ಪತ್ತಿ ತಂತ್ರಜ್ಞಾನಗಳ ಅಭಿವೃದ್ಧಿಗೆ ಒತ್ತು ನೀಡಲಿದೆ.
ಕಾಂಕ್ರೇಜ್ ತಳಿಯ ಜಾನುವಾರುಗಳ ಅಭಿವೃದ್ಧಿಗೆ ಮೀಸಲಾಗಿರುವ ದೇಶದ ಮೊದಲ ವಿಶಿಷ್ಟ ಕೇಂದ್ರ ಇದಾಗಿದೆ.
ಇದೇ ವೇಳೆ, ಬನಾಸ್ ಡೇರಿ ವತಿಯಿಂದ ಥರಾಡ್ ಮತ್ತು ರಾಧನ್ಪುರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಎರಡು ಜೈವಿಕ ಸಂಕುಚಿತ ನೈಸರ್ಗಿಕ ಅನಿಲ (ಬಯೊ-ಸಿಎನ್ಜಿ) ಘಟಕಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಈ ಘಟಕಗಳಲ್ಲಿ ಕ್ರಮವಾಗಿ ಪ್ರತಿದಿನ 75 ಮೆಟ್ರಿಕ್ ಟನ್ ಹಾಗೂ 100 ಮೆಟ್ರಿಕ್ ಟನ್ ಜಾನುವಾರುಗಳ ಸಗಣಿಯನ್ನು ಸಂಸ್ಕರಿಸಲಾಗುವುದು.
ಇತರ ಯೋಜನೆಗಳಲ್ಲಿ ವಿಮಾನ ನಿಲ್ದಾಣ ಮತ್ತು ಗಿಫ್ಟ್ ಸಿಟಿವರೆಗೆ ವಿಸ್ತರಿಸುವ ಅಹಮದಾಬಾದ್ ಮೆಟ್ರೊ ಎರಡನೇ ಹಂತದ ಯೋಜನೆ ಹಾಗೂ ಅಹಮದಾಬಾದ್–ಮೆಹ್ಸಾನಾ ರಸ್ತೆಯನ್ನು ನಾಲ್ಕು ಪಥಗಳಿಂದ ಎಂಟು ಪಥಗಳಿಗೆ ವಿಸ್ತರಿಸುವ ಕಾಮಗಾರಿ ಸೇರಿವೆ. ರಸ್ತೆ ವಿಸ್ತರಣೆ ಯೋಜನೆಯ ಅಂದಾಜು ವೆಚ್ಚ ₹2,600 ಕೋಟಿಯಾಗಿದೆ.
4,030 ಹೊಸ ಅಂಗನವಾಡಿ ಕೇಂದ್ರಗಳಿಗೆ ಶಂಕುಸ್ಥಾಪನೆ
ಮಕ್ಕಳ ಸ್ನೇಹಿ ಸೌಲಭ್ಯಗಳೊಂದಿಗೆ ನಿರ್ಮಾಣ ಪೂರ್ಣಗೊಂಡಿರುವ 361 ಅಂಗನವಾಡಿ ಕೇಂದ್ರಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಅಲ್ಲದೆ, 4,030 ಹೊಸ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
800 ಕೋಟಿ ರೂಪಾಯಿ ಹೂಡಿಕೆಯ ಈ ಯೋಜನೆಯಿಂದ ನಾಲ್ಕು ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರಯೋಜನವಾಗುವ ನಿರೀಕ್ಷೆಯಿದೆ.
ಇದೇ ವೇಳೆ, ಕೃಷಿ ಮೂಲಸೌಕರ್ಯ ನಿಧಿಯಡಿ ಸುಮಾರು 4,950 ಕೋಟಿ ರೂಪಾಯಿ ಒಟ್ಟು ಯೋಜನಾ ವೆಚ್ಚದಲ್ಲಿ ಪೂರ್ಣಗೊಂಡಿರುವ 521 ಯೋಜನೆಗಳನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಇವುಗಳಲ್ಲಿ ಶೀತಲೀಕರಣ ಘಟಕಗಳು, ಗೋದಾಮುಗಳು, ಧಾನ್ಯ ಸಂಗ್ರಹಣಾ ಸೈಲೊಗಳು, ಹಸಿರುಮನೆಗಳು ಹಾಗೂ ಆಹಾರ ಸಂಸ್ಕರಣಾ ಘಟಕಗಳು ಸೇರಿವೆ.
ಪಿಎಂ-ಕಿಸಾನ್ 24ನೇ ಕಂತಿನ 19 ಸಾವಿರ ಕೋಟಿ ರೂ ಬಿಡುಗಡೆ
ಪ್ರವಾಸದ ವೇಳೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 24ನೇ ಕಂತಿನ 19 ಸಾವಿರ ಕೋಟಿ ರೂ ಹಣವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.
ಅಲ್ಲದೆ, ಅಹಮದಾಬಾದ್ (ಸಾಬರಮತಿ)–ವಾರಾಣಸಿ ಎಕ್ಸ್ಪ್ರೆಸ್ ಹಾಗೂ ಮೆಹ್ಸಾನಾ–ಬೆಚರಾಜಿ–ಸಾಬರಮತಿ ಮೆಮು ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ.

