ಬೆಂಗಳೂರು: ‘ಔಷಧ, ವೈದ್ಯಕೀಯ ಉಪಕರಣಗಳು ಮತ್ತು ಆರೋಗ್ಯ ಸೇವೆಗೆ ಬಳಸುವ ವಸ್ತುಗಳ ಮೂಲ ದರವನ್ನು ಬಹಿರಂಗವಾಗಿ ಪ್ರಕಟಿಸುವಂತೆ ಸೂಚಿಸಿ ಹೊರಡಿಸಲಾಗಿರುವ ಸುತ್ತೋಲೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಒತ್ತಾಯಿಸುವುದಿಲ್ಲ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಈ ಕುರಿತು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್‌ ಸಂಘಗಳ ಅಧ್ಯಕ್ಷೆ ಡಾ.ಶೋಭಾ ಪ್ರಕಾಶ್‌ ಮತ್ತಿತರರು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಬಿ.ವಿ.ಭಾನುಪ್ರಕಾಶ್, ‘ಸುತ್ತೋಲೆಯಲ್ಲಿ ಉಲ್ಲೇಖಿಸಿರುವ ಕಾನೂನು ನಿಬಂಧನೆಗಳಿಗೆ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸ್ವಲ್ಪ ಕಾಲಾವಕಾಶ ನೀಡಿದರೆ, ಸುತ್ತೋಲೆಯನ್ನು ಹಿಂಪಡೆದು ಹೊಸದಾಗಿ ಸುತ್ತೋಲೆ ಹೊರಡಿಸುವ ಸಾಧ್ಯತೆಯೂ ಇದೆ’ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ನವೆಂಬರ್ 1ರಿಂದ ಸುತ್ತೋಲೆ ಜಾರಿಗೆ ಬರಲಿದ್ದು, ಅಲ್ಲಿಯವರೆಗೆ ಸುತ್ತೋಲೆ ಜಾರಿ ಮಾಡುವಂತೆ ಕಡ್ಡಾಯಗೊಳಿಸಬಾರದು ಎಂದು ಅರ್ಜಿದಾರರ ಕೋರಿದ್ದಾರಲ್ಲಾ’ ಎಂದು ಪ್ರಶ್ನಿಸಿತು. ಇದಕ್ಕೆ ಭಾನುಪ್ರಕಾಶ್‌, ‘ಅರ್ಜಿದಾರರ ವಿರುದ್ಧ ಯಾವುದೇ ಆತುರದ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಭರವಸೆ ನೀಡಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿತು.

ಅರ್ಜಿಯಲ್ಲೇನಿದೆ?: ‘ಸಂವಿಧಾನದ 19(1)(ಜಿ) ವಿಧಿಯ ಪ್ರಕಾರ ಪ್ರತಿಯೊಬ್ಬರಿಗೂ ಮುಕ್ತವಾಗಿ ವ್ಯಾಪಾರ ಮಾಡುವ ಹಕ್ಕಿದೆ. ಸರಬರಾಜುದಾರರ ಜೊತೆ ಮಾಡಿಕೊಂಡ ಗೋಪ್ಯ ವಾಣಿಜ್ಯ ಒಪ್ಪಂದದ ದರಗಳನ್ನು ರೋಗಿಗಳಿಗೆ ನೀಡಲಾಗುವ ರಸೀದಿಯಲ್ಲಿ ಪ್ರಕಟಿಸುವುದರಿಂದ ಆಸ್ಪತ್ರೆಗಳ ಮೂಲಭೂತ ಹಕ್ಕಿಗೆ ಧಕ್ಕೆಯಾಗಲಿದೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

‘ಔಷಧಗಳ ಲ್ಯಾಂಡಿಂಗ್ ಬೆಲೆ ಎಂಬುದು ಜಿಎಸ್‌ಟಿ, ರಿಯಾಯಿತಿಗಳು, ಬ್ಯಾಚ್​ಗಳು ಮತ್ತು ಜಾರಿಗೆ ಬರುವ ವಿನಾಯಿತಿಗಳನ್ನು ಆಧರಿಸಿ ಬದಲಾಗುತ್ತದೆ. ಇದಕ್ಕೆ ಸೂಕ್ತವಾದ ಯಾವುದೇ ಸರಾಸರಿ ಲೆಕ್ಕಾಚಾರದ ಮಾನದಂಡವನ್ನು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿಲ್ಲ. ಇದರಿಂದ ಆಸ್ಪತ್ರೆಗಳ ಆಡಳಿತ ಮತ್ತು ಸಾಫ್ಟ್ವೇರ್ ವ್ಯವಸ್ಥೆಯಲ್ಲಿ ಗೊಂದಲ ಉಂಟಾಗಲಿದೆ’ ಎಂದು ವಿವರಿಸಿದ್ದಾರೆ. ‘ಈ ರೀತಿ ಆದೇಶಿಸಲು ಇಲಾಖೆಗೆ ಯಾವುದೇ ಶಾಸನಬದ್ಧ ಅಧಿಕಾರವಿಲ್ಲ. ಆದ್ದರಿಂದ, ಸುತ್ತೋಲೆಯನ್ನು ರದ್ದುಪಡಿಸಬೇಕು’ ಎಂದು ಕೋರಿದ್ದಾರೆ.