ಬೆಂಗಳೂರು: ‘ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಸಮರ್ಪಕವಾಗಿ ನಡೆದಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿರುವುದನ್ನು ಉಲ್ಲೇಖಿಸಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಶೋಕ, 'ರಾಹುಲ್ ಗಾಂಧಿ ಅವರ ಸುಳ್ಳಿನ ಟೈರ್ ಪಂಚರ್ ಮಾಡಿದ ಸಚಿವ ಸತೀಶ ಜಾರಕಿಹೊಳಿ! ಎಸ್ಐಆರ್ ಬಗ್ಗೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ನಾಟಕೀಯ ಪ್ರಹಸನಕ್ಕೆ ಈಗ ಸ್ವತಃ ಅವರದ್ದೇ ಸಂಪುಟದ ಸಚಿವ ಸತೀಶ ಜಾರಕಿಹೊಳಿ ಕನ್ನಡಿ ಹಿಡಿದಿದ್ದಾರೆ' ಎಂದು ಹೇಳಿದ್ದಾರೆ.
'ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಅತ್ಯಂತ ಸಮರ್ಪಕವಾಗಿ ನಡೆದಿದೆ ಎಂದು ಜಾರಕಿಹೊಳಿ ನೀಡಿರುವ ಹೇಳಿಕೆ, ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ಬೀದಿಯಲ್ಲಿ ನಿಂತು ನಾಟಕವಾಡುತ್ತಿರುವ ಕಾಂಗ್ರೆಸ್ ನಾಯಕರ ಬೂಟಾಟಿಕೆಯನ್ನು ಸಂಪೂರ್ಣವಾಗಿ ಬಯಲು ಮಾಡಿದೆ. ಸ್ವತಃ ಕಾಂಗ್ರೆಸ್ ಸಚಿವರೇ 'ಕರ್ನಾಟಕದಲ್ಲಿ ಎಸ್ಐಆರ್ ಪ್ರಕ್ರಿಯೆಯನ್ನು ನಾವು ವಿರೋಧಿಸಿಲ್ಲ, ಇಲ್ಲಿ ಎಲ್ಲವೂ ಸರಿಯಾಗಿ ನಡೆದಿದೆ ಎಂದು ಒಪ್ಪಿಕೊಂಡಿದ್ದಾರೆ. ಹಾಗಾದರೆ ದೆಹಲಿಗೆ ಹೋಗಿ ಬೃಹತ್ ಪ್ರತಿಭಟನೆ ಹೆಸರಿನಲ್ಲಿ ರಾಜ್ಯದ ಜನತೆಗೆ ಮತ್ತು ದೇಶಕ್ಕೆ ಸುಳ್ಳು ಹರಡುತ್ತಿರುವುದು ಏಕೆ?' ಎಂದು ಪ್ರಶ್ನಿಸಿದ್ದಾರೆ.
'ನನ್ನ ನೇರ ಪ್ರಶ್ನೆ, ಹಿಂದೆ ಪಕ್ಷದ ನಿಲುವಿನ ವಿರುದ್ಧ ಮಾತನಾಡಿದರೆಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿದಂತೆ, ಈಗ ನಿಮ್ಮ ರಾಹುಲ್ ಗಾಂಧಿ ಸುಳ್ಳನ್ನು ಬಯಲು ಮಾಡಿದ ಸಚಿವ ಜಾರಕಿಹೊಳಿ ಅವರನ್ನೂ ಸಂಪುಟದಿಂದ ವಜಾ ಮಾಡುವ ಧೈರ್ಯ ತೋರಿಸುತ್ತೀರಾ' ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸವಾಲು ಹಾಕಿದ್ದಾರೆ.
'ಕಾಂಗ್ರೆಸ್ ನಾಯಕರ ಬೂಟಾಟಿಕೆ ಮತ್ತು ಡಬಲ್ ಸ್ಟ್ಯಾಂಡರ್ಡ್ ಈಗ ರಾಜ್ಯದ ಜನತೆಗೆ ಸಂಪೂರ್ಣವಾಗಿ ಅರ್ಥವಾಗಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ಅವರ ಸುಳ್ಳಿನ ಟೈರ್ ಪಂಚರ್ ಮಾಡಿದ ಸಚಿವ ಸತೀಶ್ ಜಾರಕಿಹೊಳಿ!
— R. Ashoka (@RAshokaBJP) October 30, 2026
ಎಸ್ ಐಆರ್ ಬಗ್ಗೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ನಾಟಕೀಯ ಪ್ರಹಸನಕ್ಕೆ ಈಗ ಸ್ವತಃ ಅವರದ್ದೇ ಸಂಪುಟದ ಸಚಿವ ಸತೀಶ್ ಜಾರಕಿಹೊಳಿ ಕನ್ನಡಿ ಹಿಡಿದಿದ್ದಾರೆ.
ರಾಜ್ಯದಲ್ಲಿ ಎಸ್.ಐ.ಆರ್ (SIR) ಪ್ರಕ್ರಿಯೆ ಅತ್ಯಂತ ಸಮರ್ಪಕವಾಗಿ ನಡೆದಿದೆ ಎಂದು ಜಾರಕಿಹೊಳಿ… pic.twitter.com/giFP9F6ZVD

