ಬೆಂಗಳೂರು, ಅಕ್ಟೋಬರ್ 30: ಖಾಸಗಿ ಕೋಚಿಂಗ್ ಸೆಂಟರ್‌ಗಳ ಅತಿಯಾದ ಒತ್ತಡ, ದರ ವಸೂಲಿ ಹಾಗೂ ಶೈಕ್ಷಣಿಕ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಹೊಸದಾಗಿ ಕಠಿಣ ಕರಡು ನಿಯಮಗಳನ್ನು ಪ್ರಕಟಿಸಿದೆ. ರಾಜ್ಯ ಉನ್ನತ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಈ ಹೊಸ ನಿಯಮಗಳ ಪ್ರಕಾರ, 15 ವರ್ಷದ ಕೆಳಗಿನ ಅಥವಾ ಹತ್ತನೇ ತರಗತಿ ಪೂರ್ಣಗೊಳಿಸದ ವಿದ್ಯಾರ್ಥಿಗಳನ್ನು ಯಾವುದೇ ಖಾಸಗಿ ಕೋಚಿಂಗ್ ಕೇಂದ್ರಗಳು ದಾಖಲಿಸಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಪರೀಕ್ಷೆ ಮತ್ತು ರಿವಿಷನ್ ಸೇರಿದಂತೆ ಪ್ರತಿದಿನ ಐದು ಗಂಟೆ ಮಾತ್ರ ಕೋಚಿಂಗ್

ವಿದ್ಯಾರ್ಥಿಗಳ ಮೇಲಿನ ಮಾನಸಿಕ ಒತ್ತಡವನ್ನು ತಗ್ಗಿಸಲು ಕೋಚಿಂಗ್ ತರಗತಿಗಳ ಅವಧಿಯನ್ನು ಪ್ರತಿದಿನ ಗರಿಷ್ಠ ಐದು ಗಂಟೆಗಳಿಗೆ (ಪರೀಕ್ಷೆ ಮತ್ತು ರಿವಿಷನ್ ಸೇರಿದಂತೆ) ಮಿತಿಗೊಳಿಸಲಾಗಿದೆ. ಈ ಕೇಂದ್ರಗಳು ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ಮಾತ್ರ ಕಾರ್ಯನಿರ್ವಹಿಸಬೇಕು ಹಾಗೂ ಮುಖ್ಯ ಶಾಲೆ ಅಥವಾ ಕಾಲೇಜು ಅವಧಿಯಲ್ಲಿ ಯಾವುದೇ ತರಗತಿಗಳನ್ನು ನಡೆಸುವಂತಿಲ್ಲ. ಇದರೊಂದಿಗೆ, ಪ್ರತಿ ಕ್ಯಾಂಪಸ್‌ನಲ್ಲಿ ಕಡ್ಡಾಯವಾಗಿ ಮಾನಸಿಕ ಆರೋಗ್ಯ ಸಲಹೆಗಾರರನ್ನು ನೇಮಿಸಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್; ಎಫ್​ಡಿಎ , ಎಸ್​ಡಿಎ ಇಲಾಖೆಗಳಲ್ಲಿ 5,431 ಹುದ್ದೆಗಳ ಭರ್ತಿಗೆ ಅಧಿಸೂಚನೆ

ನಾಲ್ಕು ಸಮಾನ ಕಂತುಗಳಲ್ಲಿ ಶುಲ್ಕ ಪಾವತಿಸಲು ಅವಕಾಶ

ಹಣಕಾಸಿನ ವಿಚಾರದಲ್ಲೂ ಮಹತ್ವದ ಬದಲಾವಣೆ ತರಲಾಗಿದ್ದು, ಪೂರ್ಣ ಕೋರ್ಸ್ ಶುಲ್ಕವನ್ನು ಒಂದೇ ಬಾರಿಗೆ ಮುಂಗಡವಾಗಿ ಪಡೆಯುವುದನ್ನು ನಿಷೇಧಿಸಲಾಗಿದೆ. ಪೋಷಕರು ಕನಿಷ್ಠ ನಾಲ್ಕು ಸಮಾನ ಕಂತುಗಳಲ್ಲಿ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಬೇಕು. ಒಂದು ವೇಳೆ ವಿದ್ಯಾರ್ಥಿಗಳು ಮಧ್ಯದಲ್ಲೇ ಕೋರ್ಸ್ ತೊರೆದಲ್ಲಿ, ಉಳಿದ ಅವಧಿಯ ಶುಲ್ಕವನ್ನು 10 ದಿನಗಳ ಒಳಗೆ ವಾಪಸ್ ನೀಡಬೇಕು ಎಂದು ಕಡ್ಡಾಯಗೊಳಿಸಲಾಗಿದೆ.

ಮಾರ್ಗಸೂಚಿ ಉಲ್ಲಂಘಿಸುವ ಮತ್ತು ನೋಂದಣಿ ಮಾಡಿಕೊಳ್ಳದ ಸಂಸ್ಥೆಗಳಿಗೆ ಭಾರೀ ದಂಡ ವಿಧಿಸುವುದರ ಜೊತೆಗೆ, ಗರಿಷ್ಠ 5 ಲಕ್ಷ ರೂಪಾಯಿಗಳವರೆಗೆ ದಂಡ ಅಥವಾ ಸಂಸ್ಥೆಯನ್ನು ಸೀಲ್ ಮಾಡುವ ಎಚ್ಚರಿಕೆಯನ್ನು ಸರ್ಕಾರ ನೀಡಿದೆ. ಈ ಕರಡು ನಿಯಮಗಳ ಕುರಿತು ಸಾರ್ವಜನಿಕರು 15 ದಿನಗಳೊಳಗೆ ತಮ್ಮ ಸಲಹೆ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ