ಬೆಂಗಳೂರು, ಅಕ್ಟೋಬರ್ 30: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಪ್ರತಿಷ್ಠಿತ ಗ್ಯಾರಂಟಿ ಯೋಜನೆಗಳು ಹಾಗೂ ಇತರೆ ಜನಪರ ಕಾರ್ಯಕ್ರಮಗಳು ಸಾರ್ವಜನಿಕರ ಜೀವನಮಟ್ಟದ ಮೇಲೆ ಬೀರಿರುವ ಪರಿಣಾಮವನ್ನು ತಿಳಿಯಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಉದ್ದೇಶಕ್ಕಾಗಿ ಒಟ್ಟು 14 ಕೋಟಿ ರೂ.ವೆಚ್ಚದಲ್ಲಿ ಸಮಗ್ರ ಕ್ಷೇತ್ರ ಅಧ್ಯಯನ ಹಾಗೂ ಸಮೀಕ್ಷೆಗಳನ್ನು ನಡೆಸಲು ರಾಜ್ಯ ಸಚಿವ ಸಂಪುಟ ಅಧಿಕೃತ ಅನುಮೋದನೆ ನೀಡಿದೆ. ಆದರೆ, ವಿರೋಧ ಪಕ್ಷಗಳ ಆರೋಪದಂತೆ ಇದಕ್ಕೂ ಯಾವುದೇ ಚುನಾವಣೆಗೂ ಸಂಬಂಧವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಏನಿದು ಸಮೀಕ್ಷೆ?

‘ಪ್ರೊಜೆಕ್ಟ್ ಕೆ-ಮಾನಿಟರ್’ ಹೆಸರಿನಲ್ಲಿ ನಡೆಯಲಿರುವ ಈ ಅಧ್ಯಯನದ ಮೂಲಕ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳು ತಳಮಟ್ಟದಲ್ಲಿ ಯಾವ ರೀತಿಯ ಫಲ ನೀಡುತ್ತಿವೆ ಎಂಬುದನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಲಾಗುತ್ತದೆ. ಯೋಜನೆಗಳ ಹಣ ಸರಿಯಾದ ಫಲಾನುಭವಿಗಳಿಗೆ ತಲುಪುತ್ತಿದೆಯೇ ಮತ್ತು ಇದರಿಂದ ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆ ಹೇಗಾಗಿದೆ ಎಂಬುದನ್ನು ಈ ಸಮೀಕ್ಷೆ ಹೊರಹಾಕಲಿದೆ.

LIVE TV

ಇದು ಚುನಾವಣೆಗಾಗಿ ಜನರನ್ನು ಸೆಳೆಯುವ ತಂತ್ರವಲ್ಲ!

ಕೆಲವು ರಾಜಕೀಯ ವಲಯಗಳಿಂದ ಈ ಹೆಜ್ಜೆಯನ್ನು ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಫಲಾನುಭವಿಗಳನ್ನು ಸೆಳೆಯುವ ತಂತ್ರ ಎಂದು ಟೀಕಿಸಲಾಗುತ್ತಿದ್ದು, ಸರ್ಕಾರದ ಸ್ಪಷ್ಟನೆಯು ಇದಕ್ಕೆ ತಿರುಗೇಟು ನೀಡಿದೆ. ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು, ಯೋಜನೆಗಳ ಕಾರ್ಯಕ್ಷಮತೆ ಸೂಚ್ಯಂಕವನ್ನು ಸುಧಾರಿಸಲು ಮತ್ತು ಅಗತ್ಯವಿರುವ ಕಡೆಗಳಲ್ಲಿ ಸರಿಪಡಿಸಲು ಕ್ರಮಗಳನ್ನು ಕೈಗೊಳ್ಳಲು ಈ ವೈಜ್ಞಾನಿಕ ಆಡಿಟ್ ಅತ್ಯಗತ್ಯ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ