ಉಡುಪಿ, ಅ.30: ಕರಾವಳಿ ಹಾಗೂ ಮಲೆನಾಡು ಭಾಗದ ರೈಲ್ವೆ ಪ್ರಯಾಣಿಕರ ದೀರ್ಘಕಾಲದ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಬಹುನಿರೀಕ್ಷಿತ ಬೆಂಗಳೂರು-ಕಾರವಾರ ಹಾಗೂ ಮಡಗಾಂವ್ ವಂಡೇ ಭಾರತ್ (Vande Bharat) ರೈಲುಗಳ ಸಂಚಾರಕ್ಕೆ ಮುಂಬರುವ ನವೆಂಬರ್ ಮೂರನೇ ವಾರದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಚಾಲನೆ ನೀಡಲಿದ್ದಾರೆ. ನವದೆಹಲಿಯಲ್ಲಿ ರೈಲ್ವೆ ಸಚಿವರನ್ನು ಭೇಟಿ ಮಾಡಿದ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಚಿವರು ಈ ಭರವಸೆ ನೀಡಿದ್ದಾರೆ.
ರೈಲ್ವೆ ಭವನದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿಗೆ ವಂಡೇ ಭಾರತ್ ರೈಲು ಸೇವೆ ಘೋಷಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಸಚಿವರಿಗೆ ಶಾಲೂ ಹೊದಿಸಿ, ಹೂಗುಚ್ಛ ನೀಡಿ ಆತ್ಮೀಯವಾಗಿ ಅಭಿನಂದಿಸಿದರು.
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್:
ಬೆಂಗಳೂರಿನಿಂದ ಮಂಗಳೂರು, ಉಡುಪಿ ಮಾರ್ಗವಾಗಿ ಕಾರವಾರ, ಮಡಗಾಂವ್ ತಲುಪಲಿರುವ ಬಹುದಿನ ನಿರೀಕ್ಷಿತ ವಂದೇ ಭಾರತ್ ರೈಲನ್ನು ನವೆಂಬರ್ ಮೂರನೇ ವಾರದೊಳಗೆ ಮಂಗಳೂರಿಗೆ ಬಂದು ಚಾಲನೆ ನೀಡುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದಾರೆ. https://t.co/28xQrplLxJ
— Kota Shrinivas Poojari (@KotasBJP) October 30, 2026
ಕೊಂಕಣ ರೈಲ್ವೆ ವಿಲೀನ ಪ್ರಸ್ತಾವನೆ ಹಾಗೂ ಇತರ ಪ್ರಮುಖ ಬೇಡಿಕೆಗಳು:
ಭೇಟಿಯ ವೇಳೆ ಕರಾವಳಿ ಭಾಗದ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಗಂಭೀರ ವಿಷಯಗಳನ್ನು ಸಂಸದರು ಸಚಿವರ ಗಮನಕ್ಕೆ ತಂದರು. ಕೊಂಕಣ ರೈಲ್ವೆ ನಿಗಮ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟಿನಿಂದಾಗಿ ಮಾರ್ಗದ ದ್ವಿಪಥೀಕರಣ (Doubling) ಹಾಗೂ ಮೂಲಸೌಕರ್ಯ ಅಭಿವೃದ್ಧಿ ವಿಳಂಬವಾಗುತ್ತಿದೆ. ಹೀಗಾಗಿ ಕೇರಳ, ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳೊಂದಿಗೆ ಚರ್ಚಿಸಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವಂತೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಕೋಟ ಮನವಿ ಮಾಡಿದರು.
ಇದನ್ನೂ ಓದಿ: ಮಾರ್ಗಮಧ್ಯೆ ತುಂಬು ಗರ್ಭಿಣಿಗೆ ಹೆರಿಗೆ ನೋವು: ನೇರ ಆಸ್ಪತ್ರೆಗೆ ಬಸ್ ಚಲಾಯಿಸಿ ಸಮಯಪ್ರಜ್ಞೆ ಮೆರೆದ ಚಾಲಕ ರಾಜೇಶ್
ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಈಗಾಗಲೇ ವಿಲೀನ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿರುವುದಾಗಿ ಸಂಸದರು ಸಚಿವರಿಗೆ ಮಾಹಿತಿ ನೀಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಈ ಪ್ರಕ್ರಿಯೆಗೆ ವಿಶೇಷ ಗಮನಹರಿಸುವುದಾಗಿ ಭರವಸೆ ನೀಡಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಚಿಕ್ಕಮಗಳೂರು ಮತ್ತು ಬೆಂಗಳೂರು ನಡುವೆ ದಿನನಿತ್ಯದ ಇಂಟರ್ಸಿಟಿ ರೈಲು ಆರಂಭಿಸುವ ಬೇಡಿಕೆಗೂ ತಕ್ಷಣವೇ ಕ್ರಮಕೈಗೊಳ್ಳುವುದಾಗಿ ರೈಲ್ವೆ ಸಚಿವರು ಭೇಟಿ ವೇಳೆ ಭೇಟಿ ನೀಡಿದ್ದಾರೆ. ಅಲ್ಲದೆ, ಚಿಕ್ಕಮಗಳೂರು ಜಿಲ್ಲೆಯ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ನಡೆಯುತ್ತಿರುವ ಕೆಳಸೇತುವೆ ಹಾಗೂ ಮೇಲ್ಸೇತುವೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆಯೂ ಮನವಿ ಮಾಡಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

