ಮೈಸೂರು, ನವೆಂಬರ್​​ 08: ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಆಫ್‌ಲೈನ್ ದರ್ಶನ ಟಿಕೆಟ್ ವಿತರಿಸುವುದನ್ನು ಸ್ಥಗಿತಗೊಳಿಸಲಾಗಿದ್ದು, ಇನ್ಮುಂದೆ ಆನ್‌ಲೈನ್ ಮೂಲಕವೇ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದಕ್ಕಾಗಿ ದೇವಸ್ಥಾನದ ಅಧಿಕೃತ ವೆಬ್‌ಸೈಟ್ https://srichamundeshwaridevi.in ಅನ್ನು ಆರಂಭಿಸಲಾಗಿದೆ. ಮೈಸೂರು ದಸರಾ ಉತ್ಸವ ಮುಕ್ತಾಯಗೊಂಡ ಒಂದು ವಾರದ ಬಳಿಕ ಈ ಹೊಸ ವ್ಯವಸ್ಥೆ ಜಾರಿಗೆ ಬಂದಿದೆ. ಭಕ್ತರಿಗೆ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಹೆಚ್ಚು ಸುಲಭ, ಪಾರದರ್ಶಕ ಹಾಗೂ ಸುಗಮಗೊಳಿಸುವುದರ ಜೊತೆಗೆ, ಟಿಕೆಟ್ ವಿತರಣೆಯಲ್ಲಿ ನಡೆಯಬಹುದಾದ ಅಕ್ರಮ ಮತ್ತು ಹಣ ದುರುಪಯೋಗವನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ದರ್ಶನದ ವೇಳಾಪಟ್ಟಿ, ವಿವಿಧ ಸೇವೆಗಳ ಮಾಹಿತಿಯೂ ಲಭ್ಯ

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ಈ ಕುರಿತು ಮಾಹಿತಿ ನೀಡಿದ್ದು, ಹೊಸ ಡಿಜಿಟಲ್ ವೇದಿಕೆಯ ಮೂಲಕ ದೇಶ-ವಿದೇಶಗಳ ಭಕ್ತರು, ಯಾತ್ರಿಕರು ಹಾಗೂ ಪ್ರವಾಸಿಗರಿಗೆ ದೇವಸ್ಥಾನಕ್ಕೆ ಸಂಬಂಧಿಸಿದ ಅಗತ್ಯ ಮಾಹಿತಿ ಮತ್ತು ಸೇವೆಗಳು ಲಭ್ಯವಾಗಲಿವೆ ಎಂದು ತಿಳಿಸಿದ್ದಾರೆ. ಈ ವೆಬ್‌ಸೈಟ್ ಶ್ರೀ ಚಾಮುಂಡೇಶ್ವರಿ ದೇವಾಲಯ, ಚಾಮುಂಡಿ ಬೆಟ್ಟ ಹಾಗೂ ಸುತ್ತಮುತ್ತಲಿನ ಕ್ಷೇತ್ರದ ಮಾಹಿತಿಗಾಗಿ ಏಕೈಕ ಡಿಜಿಟಲ್ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ದರ್ಶನದ ವೇಳಾಪಟ್ಟಿ, ವಿವಿಧ ಸೇವೆಗಳು, ದೇವಸ್ಥಾನದ ಸಮಯ, ಉತ್ಸವಗಳು, ಭಕ್ತರಿಗೆ ನೀಡಲಾಗಿರುವ ಮಾರ್ಗಸೂಚಿಗಳು, ಸೌಲಭ್ಯಗಳು, ಸಂಪರ್ಕ ವಿವರಗಳು ಸೇರಿದಂತೆ ಪ್ರಮುಖ ಮಾಹಿತಿಗಳನ್ನು ಇಲ್ಲಿ ಪಡೆಯಬಹುದು ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ‘ಆನೆ ಯಾವುದು ಅಂತಾನೇ ಹೇಳಿಲ್ಲ ಅಂದ್ರೆ ಅಂಬಾರಿ ಯಾಕೆ ಕೊಡಬೇಕು?’: ಅಂದು ಅರ್ಜುನ ಆನೆ ಮಾಡಿದ್ದು ನೆನಪಿದೆಯಾ?

ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶ

ಭಕ್ತರು ಲಭ್ಯವಿರುವ ದರ್ಶನದ ವಿಧಗಳು ಹಾಗೂ ವಿವಿಧ ಸೇವೆಗಳ ವಿವರಗಳನ್ನು ಪರಿಶೀಲಿಸಿ, ದೇವಸ್ಥಾನದ ಕಚೇರಿಗೆ ಭೇಟಿ ನೀಡದೆಯೇ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಬಹುದು. ದೈನಂದಿನ ಸೇವೆಗಳು ಮತ್ತು ವಿಶೇಷ ಪೂಜಾ ವಿಧಿವಿಧಾನಗಳ ಬಗ್ಗೆಯೂ ಮಾಹಿತಿ ಲಭ್ಯವಿದ್ದು, ಭಕ್ತರು ತಮ್ಮ ಭೇಟಿಯನ್ನು ಮುಂಚಿತವಾಗಿಯೇ ಯೋಜಿಸಿಕೊಳ್ಳಲು ಇದು ಅನುಕೂಲವಾಗಲಿದೆ. ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಹಾಗೂ ಸಂಭಾವ್ಯ ಅಕ್ರಮಗಳನ್ನು ತಡೆಯುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡುವ ಮೊದಲು ಟಿಕೆಟ್ ಲಭ್ಯತೆ, ಸೂಚನೆಗಳು ಹಾಗೂ ಇತರ ಪ್ರಕಟಣೆಗಳಿಗಾಗಿ ಅಧಿಕೃತ ವೆಬ್‌ಸೈಟ್ ಪರಿಶೀಲಿಸುವಂತೆ ಭಕ್ತರಿಗೆ ಸಲಹೆ ನೀಡಲಾಗಿದೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.