ಶಿವಮೊಗ್ಗ, ನವೆಂಬರ್ 08: ಬಾಲ್ಯದಿಂದಲೂ ಭಾರತೀಯ ಸೇನೆಗೆ ಸೇರುವ ಕನಸು ಕಂಡಿದ್ದ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಶ್ರೇಯಾ ಎನ್. ಗೌಡಾ ಇದೀಗ ದೇಶದ ಗಮನ ಸೆಳೆದಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್ಡಿಎ) ಪ್ರವೇಶ ಪರೀಕ್ಷೆಯಲ್ಲಿ ಶ್ರೇಯಾ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿರುವ 18 ವರ್ಷದ ಶ್ರೇಯಾ ಅವರ ಸಾಧನೆಗೆ ಕುಟುಂಬಸ್ಥರು, ಶಿಕ್ಷಕರು ಹಾಗೂ ಜಿಲ್ಲೆಯ ಜನರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
8ನೇ ತರಗತಿಯಲ್ಲೇ ಸೇನೆ ಸೇರುವ ಕನಸು ಕಂಡಿದ್ದ ಶ್ರೇಯಾ
ಶ್ರೇಯಾ ಅವರಿಗೆ ಚಿಕ್ಕಂದಿನಿಂದಲೂ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುವ ಆಸೆಯಿತ್ತು. ಎಂಟನೇ ತರಗತಿಯಲ್ಲಿ ಮಹಿಳೆಯರಿಗೂ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಪ್ರವೇಶ ಪಡೆಯುವ ಅವಕಾಶವಿದೆ ಎಂಬುದನ್ನು ತಿಳಿದುಕೊಂಡ ಬಳಿಕ ತಮ್ಮ ಗುರಿಯತ್ತ ಸತತ ಪ್ರಯತ್ನ ಆರಂಭಿಸಿದರು. ಆರಂಭದಲ್ಲಿ ಪರೀಕ್ಷೆಯಲ್ಲಿ ಅಗ್ರ ಹತ್ತರೊಳಗೆ ಸ್ಥಾನ ಪಡೆಯುವ ನಿರೀಕ್ಷೆ ಹೊಂದಿದ್ದ ಅವರು, ಇದೀಗ ದೇಶಕ್ಕೇ ಪ್ರಥಮ ಸ್ಥಾನ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪ್ರಥಮ ರ್ಯಾಂಕ್ ಪಡೆದಿರುವುದು ವರ್ಣಿಸಲಾಗದ ಸಂತೋಷ ನೀಡಿದೆ ಎಂದು ಶ್ರೇಯಾ ಹೇಳಿದ್ದಾರೆ.
ಶ್ರೇಯಾ ಅವರು ಭದ್ರಾವತಿಯ ಕಾರೇಹಳ್ಳಿಯ ಬಿಜಿಎಸ್ ಸೆಂಟ್ರಲ್ ಶಾಲೆಯಲ್ಲಿ 10ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದು, ಶಾಲೆಯಲ್ಲಿ ಉತ್ತಮ ಅಂಕಗಳೊಂದಿಗೆ ತಾಲ್ಲೂಕಿಗೆ ಮೊದಲ ಸ್ಥಾನ ಪಡೆದಿದ್ದರು. ಬಳಿಕ ಬೆಂಗಳೂರಿನ ರಾಜಾಜಿನಗರದ ಬೇಸ್ ಪಿಯು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದರು. ಜೆಇಇ ಪರೀಕ್ಷೆಗೆ ನಡೆಸಿದ ಸತತ ಅಭ್ಯಾಸವೂ ಎನ್ಡಿಎ ಲಿಖಿತ ಪರೀಕ್ಷೆಗೆ ಸಾಕಷ್ಟು ನೆರವಾಗಿದೆ. ಪ್ರಸ್ತುತ ಸುರತ್ಕಲ್ನ ಎನ್ಐಟಿಕೆಯಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.
ವ್ಯಕ್ತಿತ್ವ ವಿಕಸನಕ್ಕೂ ಹೆಚ್ಚಿನ ಒತ್ತು ನೀಡಿದ್ದ ಸಾಧಕಿ
ಶ್ರೇಯಾ ಕೇವಲ ಪಠ್ಯಪುಸ್ತಕದ ಓದಿಗೆ ಸೀಮಿತವಾಗಿರಲಿಲ್ಲ. ಚರ್ಚಾ ಸ್ಪರ್ಧೆ, ಚಿತ್ರಕಲೆ, ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ರಾಜ್ಯಮಟ್ಟದ ಚರ್ಚಾ ಸ್ಪರ್ಧೆಯಲ್ಲೂ ಪ್ರಥಮ ಬಹುಮಾನ ಪಡೆದಿದ್ದರು. ಎನ್ಡಿಎ ಆಯ್ಕೆಯ ಪ್ರಕ್ರಿಯೆಯಲ್ಲಿ ಐದು ದಿನಗಳ ಎಸ್ಎಸ್ಬಿ ಸಂದರ್ಶನ ಅತ್ಯಂತ ಸವಾಲಿನದ್ದಾಗಿತ್ತು ಎಂದು ಅವರು ಹೇಳಿದ್ದಾರೆ. ನಾಯಕತ್ವ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ತಂಡದೊಂದಿಗೆ ಕೆಲಸ ಮಾಡುವ ಗುಣಗಳನ್ನು ಈ ಸಂದರ್ಶನದಲ್ಲಿ ಪರೀಕ್ಷಿಸಲಾಗುತ್ತದೆ. ಇದಕ್ಕಾಗಿ ಪ್ರತಿದಿನ ಓಟದ ಅಭ್ಯಾಸ, ಪತ್ರಿಕೆಗಳ ಓದು ಹಾಗೂ ದೇಶ-ವಿದೇಶದ ಬೆಳವಣಿಗೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ನಾಗಪುರದಲ್ಲಿ 14 ದಿನಗಳ ವಿಶೇಷ ತರಬೇತಿಯನ್ನೂ ಪಡೆದಿದ್ದರು.
LIVE TVತಂದೆ-ತಾಯಿಯ ಪ್ರೋತ್ಸಾಹವೇ ಯಶಸ್ಸಿನ ಶಕ್ತಿ
ಶ್ರೇಯಾ ಅವರ ತಂದೆ ಜೆ. ನಾಗೇಂದ್ರ ಅವರು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ (VISL) ಉದ್ಯೋಗಿಯಾಗಿದ್ದು, ತಾಯಿ ಬಿ.ಎಂ. ಆಶಾ ಉಪನ್ಯಾಸಕರಾಗಿದ್ದಾರೆ. ಮಗಳ ಕನಸಿಗೆ ಪೋಷಕರು ಸದಾ ಬೆಂಬಲವಾಗಿ ನಿಂತಿದ್ದಾರೆ. ಅಂಕಗಳ ವಿಚಾರದಲ್ಲಿ ಒತ್ತಡ ಹೇರದೆ, ತನಗೆ ಇಷ್ಟವಾದ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ತಂದೆ ಸ್ವಾತಂತ್ರ್ಯ ನೀಡಿದ್ದರು ಎಂದು ಶ್ರೇಯಾ ಸ್ಮರಿಸಿದ್ದಾರೆ.
ಇದೀಗ ಸುರತ್ಕಲ್ನ ಎಂಜಿನಿಯರಿಂಗ್ ವ್ಯಾಸಂಗವನ್ನು ಬಿಟ್ಟು ಪುಣೆಯ ಖಡಕ್ವಾಸ್ಲಾದ ಎನ್ಡಿಎಗೆ ಸೇರಿ ಮೂರು ವರ್ಷಗಳ ತರಬೇತಿ ಪಡೆಯುವ ಉದ್ದೇಶ ಹೊಂದಿದ್ದಾರೆ. ಭಾರತೀಯ ಸೇನೆಯ ರಕ್ಷಣಾ ತಂತ್ರಜ್ಞಾನ ಮತ್ತು ಮಿಸೈಲ್ ವಿಭಾಗದಲ್ಲಿ ಸೇವೆ ಸಲ್ಲಿಸುವುದು ಅವರ ಮುಂದಿನ ಗುರಿಯಾಗಿದೆ. ಯುವತಿಯರು ತಮ್ಮ ಕನಸನ್ನು ಧೈರ್ಯವಾಗಿ ಹೇಳಿಕೊಳ್ಳಬೇಕು, ಗುರಿ ಸಾಧನೆಗೆ ಆದ್ಯತೆ ನೀಡಬೇಕು ಎಂಬುದು ಶ್ರೇಯಾ ಅವರ ಸಂದೇಶವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

