ಬೆಂಗಳೂರು, ನವೆಂಬರ್ 08: ರಾಜಧಾನಿ ಬೆಂಗಳೂರಲ್ಲಿ ನಡೆದಿರುವ ಒಂದೇ ಕುಟುಂಬದ 7 ಜನರ ಹತ್ಯೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪುಟ್ಟ ಮಗು ಸೇರಿದಂತೆ ಕುಟುಂಬವನ್ನೇ ಬರ್ಬರವಾಗಿ ಕೊಲೆ ಮಾಡಿರೋದನ್ನು ಸೈಕೋ ಇಂದುಶೇಖರ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದ್ದು, ಈ ಸಂಬಂಧ ತನಿಖೆ ಮುಂದುವರಿದಿದೆ. ಈ ಎಲ್ಲದರ ನಡುವೆ ಮತ್ತೊಂದು ಸ್ಫೋಟಕ ವಿಚಾರ ಬಯಲಾಗಿದೆ. ಇಂದುಶೇಖರ್ ಬೆಳತೂರು ರಮೇಶ್ ಕಾಡುಗೋಡಿಯ ನಟೋರಿಯಸ್ ರೌಡಿಶೀಟರ್ ರಮೇಶ್ನ ಸಹೋದರ ಎಂಬುದು ತಿಳಿದುಬಂದಿದೆ. ಎಂಟು ವರ್ಷಗಳ ಹಿಂದೆ ಆಸ್ತಿಗಾಗಿ ರಮೇಶ್ ಮಾಡಿದ್ದ ಡಬಲ್ ಮರ್ಡರ್ ಪ್ರಕರಣ ಕೂಡ ರಾಜ್ಯವನ್ನೆ ಬೆಚ್ಚಿಬೀಳಿಸಿತ್ತು.
15 ಕೋಟಿ ಮೌಲ್ಯದ ಜಾಗಕ್ಕಾಗಿ ನಡೆಸಿದ್ದ ಅವಳಿ ಕೊಲೆ
ಹೌದು, ಎಂಟು ವರ್ಷಗಳ ಹಿಂದೆ 15 ಕೋಟಿ ಮೌಲ್ಯದ 1.8 ಎಕರೆ ಜಾಗಕ್ಕಾಗಿ ಇಬ್ಬರನ್ನು ಸಿನಿಮಾ ಸ್ಟೈಲ್ನಲ್ಲಿ ರಮೇಶ್ ಹತ್ಯೆ ಮಾಡಿದ್ದ. ಬೆಂಗಳೂರಿನ ಬೆಳತೂರು ಸಮೀಪ ಜಾಗ ಹೊಂದಿದ್ದ ನಂಜಪ್ಪ ಎಂಬವರು ವಯೋಸಹಜವಾಗಿ ಮೃತಪಟ್ಟಿದ್ದರು. ಅವರ ಅನಾಥ ಕೋಟಿ ಮೌಲ್ಯದ ಜಾಗದ ಮೇಲೆ ರಮೇಶ್ ಕಣ್ಣುಹಾಕಿದ್ದ. ಇದಕ್ಕಾಗಿ ವೆಂಕಟರಮಣ ಎಂಬುವನನ್ನ ಕರೆತಂದು ನಂಜಪ್ಪ ಎಂದು ಬಿಂಬಿಸಿದ್ದ. ಆತನ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಿಲ್ ಬರೆಸಿಕೊಂಡಿದ್ದ. ನಂತರ ಕೃಷ್ಣಪ್ಪ ಎಂಬ ಮತ್ತೊಬ್ಬ ವ್ಯಕ್ತಿಯನ್ನು ಕರೆತಂದಿದ್ದ. ನಕಲಿ ನಂಜಪ್ಪನನ್ನಾಗಿ ಬಿಂಬಿಸಿದ್ದ ಆತನಿಗೆ ಭೇದಿ ಮಾತ್ರೆ ನೀಡಿ ಕೊಲೆ ಮಾಡಿದ್ದ. ಕೃಷ್ಣಪ್ಪ ಸತ್ತ ನಂತರ ನಂಜಪ್ಪ ಹೆಸರಿನಲ್ಲಿ ನಕಲಿ ಮರಣ ಪ್ರಮಾಣಪತ್ರ ಮಾಡಿಸಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಒಂದೇ ಕುಟುಂಬದ 7 ಜನರ ಹತ್ಯೆ ಪ್ರಕರಣ: ಖತರ್ನಾಕ್ ಪ್ಲ್ಯಾನ್ ಮಾಡಿ ಶವಗಳನ್ನು ಸಾಗಿಸಿದ್ದ ಆರೋಪಿ ಇಂದುಶೇಖರ್!
ಇನ್ನು ಈ ಕೊಲೆ ಸಂದರ್ಭದಲ್ಲಿ ರಮೇಶ್ ಜೊತೆಗಿದ್ದ ಆತನ ತೋಟದ ಸೆಕ್ಯೂರಿಟಿ ವೆಂಕಟಸ್ವಾಮಿ ಈ ವಿಚಾರವನ್ನು ತನ್ನ ಪತ್ನಿ ಸುಧಾರಾಣಿಗೆ ಹೇಳಿದ್ದ. ಕೊಲೆಯನ್ನ ಸುಧಾರಾಣಿ ವಿರೋಧಿಸಿದ್ದ ಕಾರಣ ಆಕೆಗೆ ಬೆಂಕಿಹಚ್ಚಿ ಮನೆಯಲ್ಲೇ ಕೊಲೆ ಮಾಡಲಾಗಿತ್ತು. ಬಳಿಕ ಘಟನೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತು. ಆದರೆ ತನಿಖೆಯಲ್ಲಿ ಸುಧಾರಾಣಿಯದ್ದು ಕೊಲೆ ಎಂದು ಪತ್ತೆಯಾಗಿತ್ತು. ನಂತರ ಬೆಳತೂರು ರಮೇಶ್ ಮತ್ತು ವೆಂಕಟಸ್ವಾಮಿಯನ್ನ ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದರು. ಮೂರು ವರ್ಷ ಜೈಲಲ್ಲಿದ್ದ ರಮೇಶ್ 2021ರಲ್ಲಿ ಜೈಲಿನಲ್ಲೇ ಸಾವಿಗೀಡಾಗಿದ್ದ. ವರ್ತೂರು ಭಾಗದಲ್ಲಿ ಭೂ ಮಾಫಿಯಾವನ್ನು ಕೂಡ ರಮೇಶ್ ನಡೆಸಿದ್ದ. ನಕಲಿ ದಾಖಲೆ ಸೃಷ್ಟಿ, ಧಮ್ಕಿ ಸೇರಿ ಹಲವು ಪ್ರಕರಣದಲ್ಲಿ ಈತನ ಹೆಸರು ಕೇಳಿಬಂದಿತ್ತು. ಈ ಹಿನ್ನಲೆ ರಮೇಶ್ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟ್ ಕೂಡ ಓಪನ್ ಆಗಿತ್ತು. ಈಗ ಸಹೋದರನಂತೆಯೇ ಇಂದುಶೇಖರ್ ಕೂಡ ಅಂತಹುದ್ದೇ ಕೃತ್ಯ ಮಾಡಿ ಸುದ್ದಿಯಾಗಿದ್ದಾನೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

