ತುಮಕೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವಿವಿಧ ಹುದ್ದೆಗಳ ನೇಮಕಾತಿಗೆ ಈಚೆಗೆ ಅಧಿಸೂಚನೆ ಹೊರಡಿಸಿದ್ದು, ಇದರಲ್ಲಿ ‘ಪ್ರವಾಸೋದ್ಯಮ ಪ್ರಚಾರ ಅಧಿಕಾರಿ’ ಹುದ್ದೆಗೆ ನಿಗದಿಪಡಿಸಿದ ಪದವಿ ಕೋರ್ಸ್‌ ರಾಜ್ಯದ ಯಾವುದೇ ವಿಶ್ವವಿದ್ಯಾಲಯ
ದಲ್ಲಿ ಅಸ್ತಿತ್ವದಲ್ಲೇ ಇಲ್ಲ!

ಪ್ರವಾಸೋದ್ಯಮ ಇಲಾಖೆಯ ‘ಪ್ರವಾಸೋದ್ಯಮ ಪ್ರಚಾರ ಅಧಿಕಾರಿ’, ‘ಹಿರಿಯ ಪ್ರವಾಸಿ ಪ್ರವರ್ತಕರು’ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ಪ್ರಚಾರ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಪದವಿಯಲ್ಲಿ ‘ಪ್ರವಾಸೋದ್ಯಮ ಸಂವಹನ’, ‘ಇತಿಹಾಸ’, ‘ಐಡಿಯಾಲಜಿ’, ‘ಪುರಾತತ್ವ ಶಾಸ್ತ್ರ’ ಮತ್ತು ‘ಪತ್ರಿಕೋದ್ಯಮ’ ಅಥವಾ ಯಾವುದೇ ವಿಷಯದಲ್ಲಿ ಪದವಿ ಪಡೆದು, ಇದರ ಜತೆಗೆ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೊಮಾ ಮುಗಿಸಿರಬೇಕು ಎಂದು ಉಲ್ಲೇಖಿಸಲಾಗಿದೆ.

ಯುಜಿಸಿ ಮಾನ್ಯತೆ ಪಡೆದ ಯಾವುದೇ ಕಾಲೇಜಿನಲ್ಲಿ ‘ಪ್ರವಾಸೋದ್ಯಮ ಸಂವಹನ’ ಕೋರ್ಸ್‌ ಅಸ್ತಿತ್ವದಲ್ಲಿಲ್ಲ. ಇದರಿಂದಾಗಿ ಉದ್ಯೋಗಾಕಾಂಕ್ಷಿಗಳು ಕಂಗಾಲಾಗಿದ್ದಾರೆ.

ಧಾರವಾಡ, ಶಿವಮೊಗ್ಗ, ಮೈಸೂರು, ಬೆಂಗಳೂರು, ಕಲಬುರಗಿ ವಿಶ್ವವಿದ್ಯಾ
ಲಯಗಳಲ್ಲಿ 5 ವರ್ಷಗಳ ‘ಪ್ರವಾಸೋ
ದ್ಯಮ ಸ್ನಾತಕೋತ್ತರ ಆಡಳಿತ’ (ಎಂಟಿಎ) ಪದವಿ ಕೋರ್ಸ್‌ ಆರಂಭಿಸ
ಲಾಗಿದೆ. ವಿಭಾಗಕ್ಕೆ ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಪ್ರತಿ ವರ್ಷ ನೂರಾರು ಮಂದಿ ಪದವಿ ಕೋರ್ಸ್‌ ಮುಗಿಸಿಕೊಂಡು ಹೊರಬರುತ್ತಿ
ದ್ದಾರೆ. ಈಗ ಹೊರಡಿಸಿದ ಅಧಿಸೂಚನೆ
ಯಲ್ಲಿ ಎಂಟಿಎ ಕೋರ್ಸ್‌ ಪರಿಗಣನೆಗೆ ತೆಗೆದುಕೊಂಡಿಲ್ಲ.

‘ಅಸ್ತಿತ್ವದಲ್ಲಿ ಇಲ್ಲದ ಶೈಕ್ಷಣಿಕ ವಿದ್ಯಾರ್ಹತೆ ನಿಗದಿ ಪಡಿಸಿರುವು
ದರಿಂದ ಅರ್ಹರಿಗೆ ಅವಕಾಶ ಸಿಗದಂತಾ
ಗಿದೆ. ತಿದ್ದುಪಡಿ ಮಾಡದಿದ್ದರೆ ಪ್ರವಾಸೋ
ದ್ಯಮ ಪದವಿ ಪಡೆದ ಹಲವರಿಗೆ ಅನ್ಯಾಯವಾಗುತ್ತದೆ’ ಎಂದು ಎಂಟಿಎ ಪದವೀಧರ ಭರತ್‌ ತೀರ್ಥಹಳ್ಳಿ
ಪ್ರತಿಕ್ರಿಯಿಸಿದರು.

ಎಂಟಿಎ ಪದವಿ ಪಡೆದವರು ಹೋಟೆಲ್‌, ರೆಸಾರ್ಟ್‌, ಹೋಮ್‌ಸ್ಟೇಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆಗೆ ಸೇರಬೇಕು ಎಂಬ ಕನಸಿನ ಜತೆಗೆ ಸರ್ಕಾರದ ಅಧಿಸೂಚನೆಗಾಗಿ ಕಾದು ಕುಳಿತಿದ್ದವರಿಗೆ ನಿರಾಸೆಯಾಗಿದೆ. ಶಿಕ್ಷಣ ಪಡೆದರೂ ಪ್ರಯೋಜನ ಇಲ್ಲದಂತಾಗಿದೆ ಎಂದು ಉದ್ಯೋಗ ಆಕಾಂಕ್ಷಿಗಳು ಹೇಳುತ್ತಾರೆ.

‘ಡೀಮ್ಡ್‌, ಖಾಸಗಿ ವಿಶ್ವವಿದ್ಯಾಲಯದಲ್ಲೂ ‘ಪ್ರವಾಸೋದ್ಯಮ ಸಂವಹನ’ ಎಂಬ ಕೋರ್ಸ್‌ ಇಲ್ಲ. ಸರ್ಕಾರವೇ ಆರಂಭಿಸಿದ ಎಂಟಿಎ ಪದವಿ ಪಡೆದವರಿಗೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ಉದ್ಯೋಗಕ್ಕೆ ನಿಗದಿಪಡಿಸಿದ ಅರ್ಹತೆಯನ್ನು ಬದಲಾವಣೆ ಮಾಡಬೇಕು. ತಿದ್ದುಪಡಿ ಆದೇಶ ಹೊರಡಿಸಬೇಕು’ ಎಂದು ಸ್ಪರ್ಧಾರ್ಥಿಯೊಬ್ಬರು ಒತ್ತಾಯಿಸಿದರು.

ಅರ್ಹರು ಎಲ್ಲಿಗೆ ಹೋಗಬೇಕು?

‘ಅ. 29ರಂದು ಅಧಿಸೂಚನೆ ಹೊರಡಿಸಿದ್ದು, 30ರಿಂದ ನ. 26ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಧಿಸೂಚನೆ ಹೊರಡಿಸುವ ಮುನ್ನ ಹುದ್ದೆಗೆ ನಿಗದಿ ಪಡಿಸಿದ ಕೋರ್ಸ್‌ ಯಾವ ವಿಶ್ವವಿದ್ಯಾಲಯದಲ್ಲಿದೆ ಎಂಬುವುದನ್ನು ಪರಿ
ಶೀಲಿಸಬೇಕಿತ್ತು. ಯಾರನ್ನೂ ಕೇಳದೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅರ್ಹತೆ ಇದ್ದವರು ಎಲ್ಲಿಗೆ ಹೋಗಬೇಕು’ ಎಂದು ಸ್ಪರ್ಧಾರ್ಥಿಯೊಬ್ಬರು ಪ್ರಶ್ನಿಸಿದರು.