ಬೆಂಗಳೂರು: ಕರ್ನಾಟಕದ ಕಬ್ಬು ಬೆಳೆಗಾರರಿಗೆ ಮಹಾರಾಷ್ಟ್ರದ ಮಾದರಿಯಲ್ಲಿ ಪ್ರತಿ ಟನ್‌ಗೆ ₹4,200 ನೀಡುವುದನ್ನು ರಾಜ್ಯ ಸರ್ಕಾರ ಖಾತ್ರಿಪಡಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಒತ್ತಾಯಿಸಿದ್ದಾರೆ.

‘ಮಹಾರಾಷ್ಟ್ರದ ಬಿಜೆಪಿ ಸರ್ಕಾರಕ್ಕೆ ರೈತರ ಹಿತ ಕಾಯಲು ಸಾಧ್ಯವಾಗಿದೆ. ಆದರೆ, ಕರ್ನಾಟಕದಲ್ಲಿನ ಕಾಂಗ್ರೆಸ್‌ ನೇತೃತ್ವದ ಸರ್ಕಾರಕ್ಕೆ ಏಕೆ ಸಾಧ್ಯವಿಲ್ಲ? ಕರ್ನಾಟಕದ ರೈತರಿಗೆ ₹3,600 ಸಿಗುತ್ತಿದೆ. ಅಂದರೆ ನೆರೆ ರಾಜ್ಯದ ಕಬ್ಬಿನ ದರಕ್ಕೆ ಹೋಲಿಸಿದರೆ ಪ್ರತಿ ಟನ್‌ಗೆ ₹600 ವ್ಯತ್ಯಾಸವಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಈ ವ್ಯತ್ಯಾಸವನ್ನು ಸರಿಪಡಿಸಬೇಕು’ ಎಂದಿದ್ದಾರೆ.

‘ಒಂದೇ ರೀತಿಯ ಬೆಳೆಗೆ, ಒಂದೇ ರೀತಿಯ ಶ್ರಮಕ್ಕೆ ನೆರೆಯ ರಾಜ್ಯದಲ್ಲಿ ಉತ್ತಮ ಬೆಲೆ ಸಿಗುತ್ತಿರುವಾಗ, ಕರ್ನಾಟಕದ ರೈತರಿಗೆ ಮಾತ್ರ ಈ ಅನ್ಯಾಯ ಏಕೆ? ರೈತರ ಹಿತ ಕಾಯಬೇಕಾದ ಸರ್ಕಾರ ಸಕ್ಕರೆ ಕಾರ್ಖಾನೆಗಳ ಮಾಲೀಕರ ಒತ್ತಡಕ್ಕೆ ಮಣಿದಿದೆಯೇ? ನ್ಯಾಯಯುತ ಬೆಲೆಗಾಗಿ ರೈತರು ಬೀದಿಗಿಳಿದು ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಲು ರಾಜ್ಯ ಸರ್ಕಾರವೇ ಹೊಣೆ’ ಎಂದು ದೂರಿದ್ದಾರೆ.

261108-4-309231704