ಬೆಂಗಳೂರು: ಕಾಮನ್ವೆಲ್ತ್ ಮಹಿಳಾ ಸಂಸದರ ಸಮ್ಮೇಳನವನ್ನು ಇದೇ ಮೊದಲ ಬಾರಿ ಕರ್ನಾಟಕದಲ್ಲಿ ಆಯೋಜಿಸಲಾಗುತ್ತಿದ್ದು, ವಿಧಾನಸೌಧದಲ್ಲಿ ನ.17 ಮತ್ತು 18ರಂದು ಎರಡು ದಿನ ನಡೆಯಲಿದೆ.
ಲೋಕಸಭೆ, ರಾಜ್ಯಸಭೆ, ವಿವಿಧ ರಾಜ್ಯಗಳ ವಿಧಾನಸಭೆ ಹಾಗೂ ವಿಧಾನಪರಿಷತ್ನ 177 ಮಹಿಳಾ ಸದಸ್ಯರು ಭಾಗವಹಿಸಲಿದ್ದಾರೆ. ವಿಶ್ವಸಂಸ್ಥೆಯ ಪ್ರತಿನಿಧಿಗಳು, ಕಾಮನ್ವೆಲ್ತ್ ವ್ಯಾಪ್ತಿಯ ಕೆಲ ದೇಶಗಳ ಗಣ್ಯರು ಉಪಸ್ಥಿತರಿರುತ್ತಾರೆ. ಲೋಕಸಭೆ ಸ್ವೀಕರ್ ಓಂ ಬಿರ್ಲಾ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ.
ಕರ್ನಾಟಕದ ವಿಧಾನಪರಿಷತ್ ಸಭಾಪತಿ ಸಲೀಂ ಅಹಮದ್, ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಅತಿಥಿಗಳನ್ನು ಬರ ಮಾಡಿಕೊಳ್ಳಲಿದ್ದಾರೆ. ಸಮ್ಮೇಳನ ಕುರಿತು ಒಂದು ವಾರದಿಂದ ಅಧಿಕಾರಿಗಳ ಜತೆ ಸಭೆಗಳನ್ನು ನಡೆಸಿದ್ದು, ಅಂತಿಮ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಸಂಸತ್ತಿನ ಮಹಿಳಾ ಸಬಲೀಕರಣ ಸಮಿತಿ ಅಧ್ಯಕ್ಷರೂ ಆದ ಕಾಮನ್ವೆಲ್ತ್ ಮಹಿಳಾ ಸಂಸದೀಯ ಒಕ್ಕೂಟದ ಅಧ್ಯಕ್ಷೆ ದಗ್ಗುಬಾಟಿ ಪುರಂದರೇಶ್ವರಿ, ರಾಜ್ಯಸಭೆ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್, ರಾಜ್ಯಪಾಲರಾದ ಸುಧಾ ಯಾದವ್, ಉತ್ತರಾಖಂಡ ವಿಧಾನಸಭೆಯ ಮೊದಲ ಮಹಿಳಾ ಸಭಾಧ್ಯಕ್ಷರಾದ ರಿತು ಖಂಡೂರಿ ಭೂಷಣ್, ಒಡಿಶಾ ವಿಧಾನಸಭಾಧ್ಯಕ್ಷೆ ಸುರಮಾ ಪಾದಿ, ಆಂಧ್ರಪ್ರದೇಶ ಉಪಸಭಾಪತಿ ತುಮತಿ ಮಾಧವ ರಾವ್, ಕರ್ನಾಟಕದ ಉಪಸಭಾಪತಿ ಉಮಾಶ್ರೀ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಅ.17ರಂದು ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದ್ದು, ಸಮ್ಮೇಳನ ಸಭಾಂಗಣ ಸೇರಿದಂತೆ ವಿವಿಧೆಡೆ ಹಲವು ವಿಚಾರಗೋಷ್ಠಿಗಳು ಎರಡು ದಿನ ನಡೆಯಲಿವೆ. 18ರಂದು ಸಂಜೆ ಸಮ್ಮೇಳನ ಸಮಾರೋಪಗೊಳ್ಳಲಿದೆ.
ರಾಜ್ಯದಲ್ಲಿ ಇದೇ ಮೊದಲ ಬಾರಿ ಈ ಸಮಾವೇಶ ಆಯೋಜಿಸಲಾಗುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮಾವೇಶಕ್ಕೆ ಅಗತ್ಯವಾದ ಎಲ್ಲ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ
ಸಲೀಂ ಅಹ್ಮದ್, ಸಭಾಪತಿ, ವಿಧಾನ ಪರಿಷತ್
261108-4-555267086

