ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಹಾಗೂ ಹಾಲು, ಮೊಸರು ಬೆಲೆ ಏರಿಕೆ ವಾಪಸ್‌ಗೆ ಆಗ್ರಹಿಸಿ ಸಿಪಿಎಂ, ಕೆಆರ್‌ಎಸ್ ಪಕ್ಷ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಪ್ರತಿಭಟನೆ ನಡೆಸಿದವು.

ನಂದಿನಿ ಹಾಲಿನ ದರ ಹಾಗೂ ಬಸ್ ಪ್ರಯಾಣ ದರವನ್ನು ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಜನವಿರೋಧಿ ನಿರ್ಧಾರವನ್ನು ಖಂಡಿಸಿ,ದರ ಏರಿಕೆಯನ್ನು ಕೂಡಲೇ ಹಿಂಪಡೆಯ ಬೇಕು ಎಂದು ಆಗ್ರಹಿಸಿದವು. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರ ಹಾಗೂ ಜೀವನ ನಿರ್ವಹಣೆಯ ವೆಚ್ಚದಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರು, ಮಧ್ಯಮ ವರ್ಗದವರು, ಸಾಮಾನ್ಯ ಜನರು ಮತ್ತು ರೈತರಿಗೆ ಮತ್ತಷ್ಟು ಹೊರೆಯಾಗಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಸಂಘಟನಾ ಕಾರ್ಯದರ್ಶಿ ಆರೋಗ್ಯ ಸ್ವಾಮಿ, ‘ರೈತರಿಗೆ ಹಾಲಿನ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ನ್ಯಾಯಯುತ ಬೆಲೆ ನೀಡುವಲ್ಲಿ ವಿಫಲವಾಗಿರುವ ಹಾಲು ಒಕ್ಕೂಟಗಳ ಆಡಳಿತಾತ್ಮಕ ಅವ್ಯವಹಾರ, ಅಕ್ರಮ ಹಾಗೂ ಭ್ರಷ್ಟಾಚಾರಗಳನ್ನು ಸರಿಪಡಿಸುವ ಬದಲು ಹಾಲಿನ ದರ ಏರಿಕೆ ಮೂಲಕ ಗ್ರಾಹಕರ ಮೇಲೆ ಹೊರೆ ಹಾಕುತ್ತಿರುವುದು ಖಂಡನೀಯ. ಅದೇ ರೀತಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳಲ್ಲಿನ ಭ್ರಷ್ಟಾಚಾರ, ಅವ್ಯವಹಾರ, ಅನಗತ್ಯ ವೆಚ್ಚ ಹಾಗೂ ಆಡಳಿತಾತ್ಮಕ ಲೋಪಗಳನ್ನು ಸರಿಪಡಿಸಿ ಸಂಸ್ಥೆಗಳನ್ನು ಆರ್ಥಿಕವಾಗಿ ಸದೃಢಗೊಳಿಸುವ ಬದಲು ಪ್ರಯಾಣ ದರ ಏರಿಕೆ ಮಾಡಿರುವುದು ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ’ ಎಂದು ಹೇಳಿದರು.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕಾರ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ,‘ಸಾರ್ವಜನಿಕ ಸಂಪನ್ಮೂಲಗಳನ್ನುಸಮರ್ಪಕವಾಗಿ ಕ್ರೋಢೀಕರಿಸುವ ಮೂಲಕ ಸಾರಿಗೆ ಸಂಸ್ಥೆಗಳನ್ನು ಮತ್ತು ಹಾಲು ಒಕ್ಕೂಟಗಳನ್ನು ಆರ್ಥಿಕವಾಗಿ ಸದೃಢಗೊಳಿಸಬೇಕು.ನಂದಿನಿ ಹಾಲು ಮತ್ತು ಬಸ್ ಪ್ರಯಾಣ ದರ ಏರಿಕೆ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆ ನಡೆಸಿದ ನಂತರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಎಲ್. ಜೀವನ್, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಆರೋಗ್ಯ ಸ್ವಾಮಿ, ಕೃಷ್ಣ ವಿ.ಬಿ., ಆನಂದ, ರಘುನಂದನ, ಸಿಪಿಎಂ ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಕಾರ್ಯದರ್ಶಿ ಎನ್.ಪ್ರತಾಪ್ ಸಿಂಹ, ದಕ್ಷಿಣ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಿ.ಎನ್.ಮಂಜುನಾಥ್ ಅವರು ಭಾಗವಹಿಸಿದ್ದರು.

261108-4-676093259