ಬೆಂಗಳೂರು: ಕೆ.ಆರ್. ಪುರ ಟಿನ್ ಫ್ಯಾಕ್ಟರಿ ಜಂಕ್ಷನ್ ಅನ್ನು ಜನಸ್ನೇಹಿ ಹಾಗೂ ಪಾದಚಾರಿ ಸ್ನೇಹಿ ಜಂಕ್ಷನ್ ಆಗಿ ಅಭಿವೃದ್ಧಿಪಡಿಸಲು ಸಮಗ್ರ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
ವಾರ್ಡ್ ಒನ್ ಅಭಿಯಾನದ ಎರಡನೇ ಹಂತಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಜಂಕ್ಷನ್ನಲ್ಲಿ ಮೆಟ್ರೊ ಮಾರ್ಗಗಳು, ಕೆ.ಆರ್. ಪುರದಿಂದ ಐಟಿಪಿಎಲ್, ವೈಟ್ಫೀಲ್ಡ್ ಹಾಗೂ ಮಾರತಹಳ್ಳಿ ಕಡೆಗೆ ಸಂಚರಿಸುವ ವಾಹನಗಳು ಮತ್ತು ಹೊರವಲಯದಿಂದ ನಗರಕ್ಕೆ ಬರುವ ವಾಹನಗಳ ಸಂಚಾರ ಒಂದೆಡೆ ಸೇರುವುದರಿಂದ ಸಂಕೀರ್ಣ ಸಂಚಾರ ಸಮಸ್ಯೆ ಎದುರಾಗಿದೆ. ಪ್ರತಿದಿನ ಲಕ್ಷಾಂತರ ಜನರು ಈ ಜಂಕ್ಷನ್ ಮೂಲಕ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ, ವಾಹನಗಳ ಸುಗಮ ಸಂಚಾರದ ಜೊತೆಗೆ ಪಾದಚಾರಿಗಳು ಹಾಗೂ ಸಾರ್ವಜನಿಕ ಸಾರಿಗೆ ಬಳಕೆದಾರರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ನಗರದ ವಿವಿಧ ವಾರ್ಡ್ಗಳಲ್ಲಿ ಕಂಡುಬರುವ ಸಣ್ಣಪುಟ್ಟ ಮೂಲಸೌಕರ್ಯ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವ ಉದ್ದೇಶದಿಂದ ನವೆಂಬರ್ 1ರಿಂದ ವಾರ್ಡ್ ಒನ್ ಅಭಿಯಾನ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ 43 ವಾರ್ಡ್ಗಳಲ್ಲಿ ಕೈಗೊಂಡಿರುವ ಕಾರ್ಯಗಳು ಸುಮಾರು ಶೇ 90ರಷ್ಟು ಪೂರ್ಣಗೊಂಡಿವೆ. ಎರಡನೇ ಹಂತದಲ್ಲಿ ಸುಮಾರು 40 ವಾರ್ಡ್ಗಳಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ತಾತ್ಕಾಲಿಕ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸುವುದರ ಜೊತೆಗೆ, ಮೂಲಭೂತ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ನಗರದ ಒಂದು ವಾರ್ಡ್ನಲ್ಲಿರುವ ರಸ್ತೆ, ಪಾದಚಾರಿ ಮಾರ್ಗ, ಬೀದಿ ದೀಪ, ಒಳಚರಂಡಿ, ಬೆಸ್ಕಾಂ, ಅರಣ್ಯ ಹಾಗೂ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಪರಿಹರಿಸುವ ಬದಲು, ಎಲ್ಲಾ ಇಲಾಖೆಗಳು ಒಂದೇ ತಂಡವಾಗಿ ಕಾರ್ಯನಿರ್ವಹಿಸಿ ಸಮಗ್ರವಾಗಿ ಪರಿಹರಿಸುವುದು ವಾರ್ಡ್ ಒನ್ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ವಾರ್ಡ್ ಒನ್ ಅಭಿಯಾನದಡಿ ಕೈಗೊಂಡಿರುವ ಕಾಮಗಾರಿಗಳ ಕುರಿತು ಪ್ರತಿಯೊಂದು ನಗರ ಪಾಲಿಕೆಯಿಂದ ಪ್ರತ್ಯೇಕ ಅಂಕಿ-ಅಂಶಗಳನ್ನು ಸಂಗ್ರಹಿಸಲಾಗಿದೆ. ಬ್ಲ್ಯಾಕ್ ಸ್ಪಾಟ್ಗಳ ತೆರವು, ರಸ್ತೆ ಗುಂಡಿಗಳ ಮುಚ್ಚುವಿಕೆ ಹಾಗೂ ನಿರ್ಮಾಣ ತ್ಯಾಜ್ಯಗಳ ತೆರವು ಸೇರಿದಂತೆ ಕೈಗೊಂಡಿರುವ ಎಲ್ಲಾ ಕಾರ್ಯಗಳ ಸಂಪೂರ್ಣ ಮಾಹಿತಿ ಲಭ್ಯವಿದೆ. ಅಭಿಯಾನದ ಉದ್ದೇಶ ಕೇವಲ ಅಂಕಿ-ಅಂಶಗಳನ್ನು ಪ್ರಕಟಿಸುವುದಲ್ಲ. ನಗರದಲ್ಲಿರುವ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಪರಿಹಾರ ಕಲ್ಪಿಸುವ ಸಮಗ್ರ ಪ್ರಯತ್ನ ಇದಾಗಿದೆ ಎಂದು ಹೇಳಿದರು.
ಶಾಸಕ ಬೈರತಿ ಬಸವರಾಜ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್, ಹೆಚ್ಚುವರಿ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್ ಉಪಸ್ಥಿತರಿದ್ದರು.
ಕೆ.ಆರ್.ಪುರ: ಕ್ಷೇತ್ರದಲ್ಲಿ ಅಭಿವೃದ್ಧಿ ವಿಚಾರ ಸಂಬಂಧ ಸಚಿವ ಕೃಷ್ಣ ಬೈರೇಗೌಡ ಅವರ ಎದುರೇ ಬಿಜೆಪಿ ಶಾಸಕ ಬೈರತಿ ಬಸವರಾಜ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ನಾರಾಯಣಸ್ವಾಮಿ ನಡುವೆ ಮಾತಿನ ಚಕಮಕಿ ನಡೆಯಿತು.
ಟಿನ್ ಫ್ಯಾಕ್ಟರಿ ಜಂಕ್ಷನ್ ಬಳಿ ಕೃಷ್ಣ ಬೈರೇಗೌಡ ಹಾಗೂ ಬೈರತಿ ಬಸವರಾಜ ಅವರು ಅಧಿಕಾರಿಗಳೊಂದಿಗೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಸ್ಥಳೀಯರೊಬ್ಬರು, ‘ರಸ್ತೆ ಗುಂಡಿ ಮುಚ್ಚಿಲ್ಲ’ ಎಂದಾಗ, ಎಂ.ನಾರಾಯಣಸ್ವಾಮಿ ಅವರು, ‘ಸ್ಥಳೀಯ ಶಾಸಕರು ಕೆ.ಆರ್.ಪುರ ಕ್ಷೇತ್ರದಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ’ ಎಂದು ಆರೋಪಿಸಿದರು.
ಸಿಟ್ಟಿಗೆದ್ದ ಬಸವರಾಜ ಅವರು ನಾರಾಯಣಸ್ವಾಮಿ ಅವರನ್ನು ಕರಾಟೆಗೆ ತೆಗೆದುಕೊಂಡರು. ಈ ವೇಳೆ ಪರಸ್ಪರ ಇಬ್ಬರೂ ಏಕವಚನದಲ್ಲಿ ಬೈದಾಡಿಕೊಂಡರು. ‘ನಿನ್ನನ್ನು ವಿಧಾನ ಪರಿಷತ್ ಸದಸ್ಯ ಮಾಡಿದ್ದು ನಾನು. ನನ್ನ ಮೇಲೆಯೇ ಗಲಾಟೆಗೆ ಬರುತ್ತಿಯಾ’ ಎಂದರು.
‘ಸಚಿವರ ಆಹ್ವಾನದ ಮೇರೆಗೆ ಸ್ಥಳಕ್ಕೆ ಬಂದಿದ್ದೆ. ಸಚಿವರ ಮುಂದೆ ಸ್ಥಳೀಯರೊಬ್ಬರು ಸಮಸ್ಯೆಯನ್ನು ಹೇಳಿಕೊಳ್ಳಲು ಹೋದರೆ ನಾರಾಯಣಸ್ವಾಮಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಜನರು ಕಷ್ಟ ಸುಖ ಹೇಳಿಕೊಳ್ಳಬಾರದಾ? ದೌರ್ಜನ್ಯ ಎಷ್ಟು ಸರಿ? ದೌರ್ಜನ್ಯ ಮಾಡಲು ಹಕ್ಕು ಕೊಟ್ಟವರು ಯಾರು? ಸಚಿವರು ಸ್ಥಳಕ್ಕೆ ಬಂದಾಗ ಶಾಸಕರು ಬರಬಾರದಾ? ನಮ್ಮನ್ನು ಯಾಕೆ ಆಹ್ವಾನ ನೀಡಿದ್ದಿರಿ’ ಎಂದು ಬಸವರಾಜ ಆಕ್ರೋಶ ವ್ಯಕ್ತಪಡಿಸಿದರು.
ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ, ಕೃಷ್ಣ ಬೈರೇಗೌಡ ಮಧ್ಯ ಪ್ರವೇಶಿಸಿ, ಇಬ್ಬರನ್ನೂ ಶಾಂತಗೊಳಿಸಿದರು. ಬೈರತಿ ಬಸವರಾಜ ಅವರ ಮೇಲೆ ದೌರ್ಜನ್ಯ ಖಂಡಿಸಿ ಬಿಜೆಪಿ ಕಾರ್ಯಕರ್ತರು ರಾಮಮೂರ್ತಿನಗರದ ಉತ್ತಮ ಸಾಗರ್ ಹೋಟೆಲ್ ನಿಂದ ರಾಮಮೂರ್ತಿನಗರ ಠಾಣೆವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಠಾಣೆಗೆ ಮುತ್ತಿಗೆ ಹಾಕಿದರು.
261108-4-686820275

