ಬೆಂಗಳೂರು: ಒಂದೇ ಕುಟುಂಬದ ಏಳು ಜನರ ಹತ್ಯೆ ಪ್ರಕರಣ ಸಂಬಂಧ ಮೃತದೇಹಗಳ ಪತ್ತೆ ಕಾರ್ಯ ಚುರುಕುಗೊಂಡಿದ್ದು, ಸೇಲಂ ಸಮೀಪದ ಏರ್ಕಾಡ್‌ ಅರಣ್ಯ ಪ್ರದೇಶದಲ್ಲಿ ಆರೋಪಿ ಇಂದುಶೇಖರ್‌ನ ಪತ್ನಿ ಸುನಿತಾ ಹಾಗೂ ಅತ್ತೆ ರೂಪವತಿ ಅವರ ಶವಗಳು ಪತ್ತೆಆಗಿವೆ.

ಶವಗಳು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದವು. ಶವಗಳನ್ನು ಗುರುತಿಸಲು ಮೃತರ ಸಂಬಂಧಿಕರನ್ನು ಸೇಲಂಗೆ ಕರೆದೊಯ್ಯಲಾಗಿತ್ತು. ಶವಗಳ ಮೇಲಿದ್ದ ಬಟ್ಟೆಗಳನ್ನು ನೋಡಿ ಗುರುತಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹಗಳನ್ನು ಹಸ್ತಾಂತರಿಸುವ ಕಾರ್ಯ ನಡೆದಿದೆ.

ಸೇಲಂನಿಂದ ಮೃತದೇಹಗಳನ್ನು ಬೆಂಗಳೂರಿಗೆ ತಂದು ಅಂತಿಮ ವಿಧಿವಿಧಾನಗಳನ್ನು ನಡೆಸಲು ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹದಿನೈದು ಪೊಲೀಸ್ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಎಂಟು ತಾಸು ಶೋಧ ನಡೆಸಿ, ಶವಗಳನ್ನು ಪತ್ತೆ ಮಾಡಿದ್ದಾರೆ.

ಆರೋಪಿಯ ಬಾಮೈದರಾದ ಶಿವಕುಮಾರ್‌, ಶಂಕರ್‌ ಹಾಗೂ ನಾದಿನಿಯರಾದ ದಿವ್ಯಾ, ನಳಿನಿ ಶವ ಪತ್ತೆಯಾಗಿಲ್ಲ. ಇವರ ಶವಗಳನ್ನು ಶಿರಾಡಿ ಘಾಟ್‌, ಚಾರ್ಮಾಡಿ ಘಾಟ್‌ ಅಥವಾ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹಗಳ ಪತ್ತೆಗಾಗಿ ಪ್ರತ್ಯೇಕ ಪೊಲೀಸ್‌ ತಂಡಗಳನ್ನು ರಚಿಸಲಾಗಿದೆ.

ಒಂದು ತಂಡವು ತಮಿಳುನಾಡಿನಲ್ಲಿ ಸಕ್ರಿಯವಾಗಿದ್ದರೆ, ಮತ್ತೊಂದು ತಂಡ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಶವಗಳ ಹುಡುಕಾಟದಲ್ಲಿ ನಿರತವಾಗಿದೆ. ಇನ್ನೊಂದು ತಂಡ ಚಾರ್ಮಾಡಿ ಘಾಟ್‌ ಬಳಿ ತೆರಳಿದೆ ಎಂದು ಮೂಲಗಳು ತಿಳಿಸಿವೆ.

ಪುನೀತ್ ಅಂತ್ಯಕ್ರಿಯೆ: ಕೊಲೆಯಾದ ಏಳು ವರ್ಷದ ಬಾಲಕ ಪುನೀತ್‌ನ ಅಂತಿಮ ಸಂಸ್ಕಾರವನ್ನು ಹರಿಶ್ಚಂದ್ರ ಘಾಟ್‌ ರುದ್ರಭೂಮಿಯಲ್ಲಿ ಕುಟುಂಬದ ಸದಸ್ಯರು ಶುಕ್ರವಾರ ರಾತ್ರಿ ನೆರವೇರಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ತಪ್ಪಲಿನಲ್ಲಿ ಪುನೀತ್‌ನ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯ ಬಳಿಕ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿತ್ತು.

ಮಿದುಳಿನಲ್ಲಿ ರಕ್ತಸ್ರಾವ: ‘ಬಾಲಕ ಪುನೀತ್‌ನ ತಲೆಗೆ ಭಾರವಾದ ಕಲ್ಲಿನಿಂದ ಹೊಡೆದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ. ಹಣೆಯ ಭಾಗ ಹಾಗೂ ತಲೆಬುರುಡೆಯ ಮುಂಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಮಿದುಳಿನಲ್ಲಿ ರಕ್ತಸ್ರಾವವಾಗಿ ಬಾಲಕ ಮೃತಪಟ್ಟಿದ್ದಾನೆ’ ಎಂದು ವೈದ್ಯರು ತಿಳಿಸಿದ್ದಾರೆ.

‘ಮುಖ, ಹಣೆಯ ಭಾಗ, ತುಟಿ ಹಾಗೂ ತಲೆಯ ಮುಂಭಾಗದಲ್ಲಿ ಹಲವು ಗಾಯಗಳಾಗಿವೆ. ಭಾರವಾದ ಕಲ್ಲಿನಿಂದ ಹೊಡೆದ ಪರಿಣಾಮ ಈ ಗಾಯಗಳಾಗಿವೆ. ಹತ್ಯೆಗೂ ಮುನ್ನ ಬಾಲಕನಿಗೆ ನಿದ್ರೆ ಮಾತ್ರೆ ಅಥವಾ ಮತ್ತು ಬರುವ ಅಂಶ ನೀಡಲಾಗಿತ್ತೆ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಬರಬೇಕಿದೆ’ ಎಂದು ಮೂಲಗಳು ಹೇಳಿವೆ.

‘ಮೃತದೇಹ ಕೊಳೆತಿದ್ದರಿಂದ ಸಾವಿನ ನಿಖರ ಸಮಯ ನಿರ್ಧರಿಸುವುದು ಕಷ್ಟವಾಗಿದೆ. ಹಲ್ಲೆ ವೇಳೆ ಬಾಲಕ ಪ್ರತಿರೋಧ ತೋರಿದ್ದನೇ ಅಥವಾ ಗಾಯಗೊಂಡ ಬಳಿಕ ಎಷ್ಟು ಸಮಯ ಬದುಕಿದ್ದ ಎಂಬುದನ್ನು ತಿಳಿಯುವುದೂ ಕಷ್ಟ’ ಎಂದು ಹೇಳಿವೆ.

261108-51-213841912