ಕರ್ನಾಟಕದ ಜಾನಪದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆ ನೀಡಿದವರಲ್ಲಿ ಡಾ. ಎಸ್.ಕೆ. ಕರೀಂಖಾನ್ ಪ್ರಮುಖರು. ಸ್ವಾತಂತ್ರ್ಯ ಹೋರಾಟಗಾರರಾಗಿ, ಜಾನಪದ ತಜ್ಞರಾಗಿ, ಗೀತರಚನಕಾರರಾಗಿ ಹಾಗೂ ಸಾಹಿತಿಯಾಗಿ ಗುರುತಿಸಿಕೊಂಡ ಅವರು ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿಯ ಅಧ್ಯಯನಕ್ಕೆ ತಮ್ಮ ಬದುಕನ್ನು ಮೀಸಲಿಟ್ಟಿದ್ದರು. ಔಪಚಾರಿಕ ಶಿಕ್ಷಣ ಕಡಿಮೆಯಿದ್ದರೂ ಸ್ವಂತ ಅಧ್ಯಯನದಿಂದ ಇತಿಹಾಸ, ಪುರಾಣ, ಸಾಹಿತ್ಯ ಮತ್ತು ಜಾನಪದ ಕ್ಷೇತ್ರಗಳಲ್ಲಿ ಅಪಾರ ಜ್ಞಾನ ಸಂಪಾದಿಸಿದ್ದರು.
ಕಾಬೂಲ್ ಮೂಲದ ದಂಪತಿಯ ಮಗ
1908ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಜನಿಸಿದ ಎಸ್.ಕೆ. ಕರೀಂಖಾನ್ ಅವರು ಆಫ್ಗಾನಿಸ್ತಾನದ ಕಾಬೂಲ್ ಮೂಲದ ಅಬ್ದುಲ್ ರೆಹಮಾನ್ ಖಾನ್ ಮತ್ತು ಅರಬ್ ಮೂಲದ ಜೈನಬಿ ದಂಪತಿಯ ಪುತ್ರ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಅವರು ಅಣ್ಣನ ಆಶ್ರಯದಲ್ಲಿ ಬೆಳೆದರು. ಹಾಸನದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಪಡೆದ ಅವರು ಎಂಟನೇ ತರಗತಿಯವರೆಗೆ ಮಾತ್ರ ಓದಿದರು.
ಆಚಂಗಿ ನಾರಾಯಣಶಾಸ್ತ್ರಿಯವರ ಶಿಷ್ಯರಾಗಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಧ್ಯಯನ ಮಾಡಿದರು. ಮನೆಯಲ್ಲಿ ಉರ್ದು ಭಾಷೆ ಬಳಕೆಯಲ್ಲಿದ್ದರೂ ಕನ್ನಡ ಮತ್ತು ಸಂಸ್ಕೃತದಲ್ಲಿ ಪಾಂಡಿತ್ಯ ಗಳಿಸಿದರು. ಭಗವದ್ಗೀತೆ, ಭಾಗವತ, ಶಿವಪುರಾಣ, ವಿಷ್ಣುಪುರಾಣ ಸೇರಿದಂತೆ ಹಲವು ಧಾರ್ಮಿಕ ಗ್ರಂಥಗಳ ಪರಿಚಯ ಹೊಂದಿದ್ದರು. ಇತಿಹಾಸ, ಪುರಾಣ ಮತ್ತು ಮಹಾಕಾವ್ಯಗಳ ಕುರಿತು ಆಳವಾದ ತಿಳಿವಳಿಕೆ ಹೊಂದಿದ್ದ ಅವರು ಚಾರಿತ್ರಿಕ ಸಂಗತಿಗಳನ್ನು ನಿರರ್ಗಳವಾಗಿ ವಿವರಿಸುತ್ತಿದ್ದರು.
ಜಾನಪದ ಸಂಗ್ರಹ ಮತ್ತು ಸಂರಕ್ಷಣೆ
ಕರೀಂಖಾನ್ ಅವರ ಪ್ರಮುಖ ಆಸಕ್ತಿಯ ಕ್ಷೇತ್ರ ಜಾನಪದ ಸಾಹಿತ್ಯ. ಹಳ್ಳಿಹಳ್ಳಿಗಳಿಗೆ ಕಾಲ್ನಡಿಗೆಯಲ್ಲಿ ತೆರಳಿ ಜನಪದ ಗೀತೆಗಳು, ಕಥೆಗಳು, ಸಂಪ್ರದಾಯಗಳು ಮತ್ತು ಮೌಖಿಕ ಪರಂಪರೆಯನ್ನು ಸಂಗ್ರಹಿಸುತ್ತಿದ್ದರು. ಅಜ್ಞಾತ ಕವಿಗಳ ನೂರಾರು ಹಾಡುಗಳನ್ನು ಸಂಗ್ರಹಿಸಿ ಪ್ರಕಟಿಸುವ ಮೂಲಕ ಅವುಗಳು ಕಣ್ಮರೆಯಾಗದಂತೆ ನೋಡಿಕೊಂಡರು.
ಕರ್ನಾಟಕ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕಗೊಂಡ ಅವರು, ಆರಂಭದಲ್ಲಿ ತಮ್ಮ ನೇಮಕದ ಬಗ್ಗೆ ವ್ಯಕ್ತವಾದ ಟೀಕೆಗಳಿಂದ ಮನನೊಂದು ರಾಜೀನಾಮೆ ನೀಡಲು ಮುಂದಾದರು. ನಂತರ ಸರ್ಕಾರದ ಮನವೊಲಿಕೆಯಿಂದ ಅಧಿಕಾರ ಸ್ವೀಕರಿಸಿದರು. ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸುಮಾರು ಎಂಟು ಸಾವಿರ ಕಿಲೋಮೀಟರ್ ಸಂಚರಿಸಿ ಜನಪದ ಪ್ರದರ್ಶನ ಕಲೆಗಳ ಕುರಿತು 240 ಗಂಟೆಗಳ ವಿಡಿಯೋ ಚಿತ್ರೀಕರಣ ಮಾಡಿಸಿದರು.
ಹಸಲರು, ಹಾಲಕ್ಕಿಗಳು, ಸಿದ್ಧಿಗಳು, ಎರವರು, ಕಾಡುಕುರುಬರು ಮತ್ತು ಸೋಲಿಗರು ಸೇರಿದಂತೆ ವಿವಿಧ ಬುಡಕಟ್ಟು ಸಮುದಾಯಗಳ ಜೀವನಶೈಲಿ, ಕಲೆ ಮತ್ತು ಸಂಪ್ರದಾಯಗಳನ್ನು ದಾಖಲಿಸಿದರು. ಶಿವಮೊಗ್ಗ ಜಿಲ್ಲೆಯ ಮೇಘಾನೆಯ ಕುಣುಬಿಗೊಂಡ ಬುಡಕಟ್ಟು ಜನಾಂಗದ ಅಧ್ಯಯನಕ್ಕೂ ಕಾಲ್ನಡಿಗೆಯ ಕಾರ್ಯಕ್ರಮ ಹಮ್ಮಿಕೊಂಡರು. ಹಿರಿಯಡ್ಕದ ಸಿರಿ ಜಾತ್ರೆ, ಮಾಸ್ಯಾಳದ ಚೌಡೇಶ್ವರಿ ಜಾತ್ರೆ ಮತ್ತು ಮೈಲಾರಲಿಂಗನ ಜಾತ್ರೆಗಳ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಚಿತ್ರೀಕರಿಸಿದರು. ಗಿರಿಜನ ಕಲಾವಿದರನ್ನು ಪ್ರೋತ್ಸಾಹಿಸಲು ವಿಶೇಷ ಪ್ರಶಸ್ತಿಯನ್ನೂ ರೂಪಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಪಾತ್ರ
ಕರೀಂಖಾನ್ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದ್ದರು. ತಮ್ಮ ಕಂಚಿನ ಕಂಠದ ಹಾಡುಗಳು ಮತ್ತು ಭಾಷಣಗಳ ಮೂಲಕ ಹೋರಾಟಗಾರರಲ್ಲಿ ದೇಶಪ್ರೇಮದ ಉತ್ಸಾಹ ತುಂಬುತ್ತಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡ ಕಾರಣ ಏಳು ಬಾರಿ ಜೈಲುವಾಸ ಅನುಭವಿಸಿದರು.
ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಸಕ್ರೀಯ
ಸ್ವಾತಂತ್ರ್ಯಾನಂತರ ಕರ್ನಾಟಕ ಏಕೀಕರಣ ಚಳವಳಿಯಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ, ಕನ್ನಡ ಭಾಷಿಕ ಪ್ರದೇಶಗಳ ಏಕೀಕರಣಕ್ಕಾಗಿ ಹೋರಾಡಿದರು. ಈ ಸಂದರ್ಭದಲ್ಲಿ ಕೂಡ ಸೆರೆವಾಸ ಅನುಭವಿಸಿದರು. ಮಹಾತ್ಮ ಗಾಂಧೀಜಿಯವರು ವಿಶ್ರಾಂತಿಗಾಗಿ ನಂದಿಬೆಟ್ಟಕ್ಕೆ ಬಂದಿದ್ದಾಗ ಅವರನ್ನು ಭೇಟಿಯಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲಾಗುತ್ತಿದ್ದ ಪಿಂಚಣಿಯನ್ನೂ ಅವರು ತಿರಸ್ಕರಿಸಿದ್ದರು.
ಸಾಹಿತ್ಯ ಮತ್ತು ಕನ್ನಡ ಚಿತ್ರರಂಗದ ಕೊಡುಗೆ
ಕರೀಂಖಾನ್ ಅವರು ಕಥೆ, ಕಾದಂಬರಿ, ನಾಟಕ, ಗೀತೆ, ಚಿತ್ರಕಥೆ ಮತ್ತು ಸಂಭಾಷಣೆ ಸೇರಿದಂತೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ರಚನೆ ಮಾಡಿದ್ದಾರೆ. ಉರ್ದು ಕವಿಗಳಾದ ಗಾಲಿಬ್ ಮತ್ತು ಇಕ್ಬಾಲ್ ಅವರ ಸಾಹಿತ್ಯದಿಂದ ಪ್ರಭಾವಿತರಾಗಿದ್ದ ಅವರು ಹಿಂದೂ-ಮುಸ್ಲಿಂ ಸೌಹಾರ್ದವನ್ನು ಸಾರುವ ಕಥೆಗಳನ್ನು ರಚಿಸಿದರು.
'ನಿವಾರ', 'ನೀಹಾರ', 'ಬಲಿದಾನಿ ಹುಸೇನ್' ಮತ್ತು 'ಮಾತೃಶಾಪ' ಅವರ ಪ್ರಮುಖ ಕೃತಿಗಳು. 'ನಿರ್ದೋಷಿ', 'ಶ್ರೀಕೃಷ್ಣಲೀಲೆ', 'ಹುಮಾಯೂನ್', 'ಅಂಬರನಾಥ', 'ಮಹಾಪ್ರಭು ಮಾಗಡಿ ಕೆಂಪೇಗೌಡ' ಮೊದಲಾದ ನಾಟಕಗಳನ್ನೂ ರಚಿಸಿದ್ದಾರೆ. ತೆಲುಗಿನ ಪೋತನನ ಭಾಗವತವನ್ನು ನಾಟಕ ರೂಪಕ್ಕೆ ತರುವ ಪ್ರಯತ್ನವನ್ನೂ ಮಾಡಿದ್ದರು.
ಕನ್ನಡ ಚಿತ್ರರಂಗದಲ್ಲಿಯೂ ಅವರು ಚಿತ್ರಸಾಹಿತಿಯಾಗಿ ಗುರುತಿಸಿಕೊಂಡಿದ್ದರು. ಮದರಾಸಿನಲ್ಲಿ ಸುಮಾರು ಹತ್ತು ವರ್ಷಗಳ ಕಾಲ ನೆಲೆಸಿ ಅನೇಕ ಚಿತ್ರಗಳಿಗೆ ಕಥೆ, ಸಂಭಾಷಣೆ ಮತ್ತು ಗೀತೆಗಳನ್ನು ಬರೆದರು. ಮುನ್ನೂರಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ ಅವರು 1962ರ 'ಸ್ವರ್ಣಗೌರಿ' ಚಿತ್ರಕ್ಕೆ ಕಥೆ, ಸಂಭಾಷಣೆ ಹಾಗೂ ಗೀತೆಗಳನ್ನು ಒದಗಿಸಿದ್ದರು. ಈ ಚಿತ್ರದ ಹಾಡುಗಳಿಂದ ಅವರಿಗೆ ಹೆಚ್ಚಿನ ಜನಪ್ರಿಯತೆ ದೊರೆಯಿತು.
'ನುಡಿಮನ ಶಿವಗುಣ', 'ನಟವರ ಗಂಗಾಧರ', 'ಬಾರೇ ನೀ ಚೆಲುವೆ' ಅವರ ಜನಪ್ರಿಯ ಗೀತೆಗಳಲ್ಲಿ ಕೆಲವು. 'ಜೀವನ ತರಂಗ', 'ಗಂಗೆ ಗೌರಿ', 'ಬೇವು ಬೆಲ್ಲ', 'ಚಂದ್ರಕುಮಾರ', 'ದೇವಮಾನವ', 'ದೊಂಬರಕೃಷ್ಣ', 'ರಾಜೇಶ್ವರಿ' ಸೇರಿದಂತೆ ಹಲವು ಚಿತ್ರಗಳಿಗೆ ಸಾಹಿತ್ಯ ನೀಡಿದ್ದಾರೆ. ಭಕ್ತಿಗೀತೆಗಳಿಂದ ಹಿಡಿದು ಶೃಂಗಾರ ಗೀತೆಗಳವರೆಗೆ ವಿವಿಧ ಪ್ರಕಾರಗಳಲ್ಲಿ ರಚನೆ ಮಾಡಿದ್ದರು. ಧರ್ಮಸ್ಥಳ ಮಂಜುನಾಥನ ಕುರಿತ 'ಮಂದಾರ ಧರ್ಮಸ್ಥಳ' ಧ್ವನಿಸುರಳಿಯನ್ನೂ ಹೊರತಂದಿದ್ದರು.
ಪ್ರತ್ರಿಕೋದ್ಯಮದಲ್ಲೂ ಸೇವೆ
ಪತ್ರಿಕೋದ್ಯಮದಲ್ಲಿಯೂ ಸೇವೆ ಸಲ್ಲಿಸಿದ ಅವರು ಧಾರವಾಡದ 'ಲೋಕಮಿತ್ರ' ಮತ್ತು ಉಡುಪಿಯ 'ಅಂತರಂಗ' ಪತ್ರಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ಇದಕ್ಕೂ ಮೊದಲು ರಾಯಲ್ ಇಂಡಿಯನ್ ನೇವಿಯಲ್ಲಿ ಕೆಲಸ ಮಾಡಿದ್ದರು.
ಪ್ರಶಸ್ತಿ ಮತ್ತು ಗೌರವಗಳು:
ಸಾಹಿತ್ಯ ಮತ್ತು ಜಾನಪದ ಕ್ಷೇತ್ರದ ಸೇವೆಯನ್ನು ಗುರುತಿಸಿ ಅವರಿಗೆ ಹಲವು ಪ್ರಶಸ್ತಿಗಳು ಸಂದಿವೆ. 1989ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. 1995ರಲ್ಲಿ ಜಾನಪದಶ್ರೀ, 1997ರಲ್ಲಿ ನಾಡೋಜ ಹಾಗೂ 2004ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತು. ಜಾನಪದ ಅಕಾಡೆಮಿ ಗೌರವ, ಹಂಸರತ್ನ, ಜಾನಪದ ಜಂಗಮ, ಕೆಂಪೇಗೌಡ ಪ್ರಶಸ್ತಿ ಮತ್ತು 2000ರಲ್ಲಿ ಚಿ. ಉದಯಶಂಕರ್ ಚಿತ್ರಸಾಹಿತ್ಯ ಪ್ರಶಸ್ತಿಯನ್ನೂ ಪಡೆದಿದ್ದರು.
ಕರುನಾಡೋತ್ಸವ: ತುಳುನಾಡಲ್ಲಿ ಕನ್ನಡದ ದೀಪ ಬೆಳಗಿಸಿದ ಕಯ್ಯಾರ ಕಿಞ್ಞಣ್ಣ ರೈಕರುನಾಡೋತ್ಸವ: ರಾ.ನಂ. ಚಂದ್ರಶೇಖರ ಎಂಬ ‘ನಿತ್ಯೋತ್ಸವದ ಕನ್ನಡಿಗ’ಅವರ ಸ್ಮರಣಾರ್ಥ ಬೆಂಗಳೂರಿನ ಇಂದಿರಾನಗರದ 100 ಅಡಿ ರಸ್ತೆಯ 12ನೇ ಮುಖ್ಯರಸ್ತೆಯಲ್ಲಿ ಸ್ಮಾರಕ ಸ್ಥಾಪಿಸಲಾಗಿದೆ. 2014ರಲ್ಲಿ ಈ ರಸ್ತೆಗೆ ಡಾ. ಕರೀಂಖಾನ್ ಅವರ ಹೆಸರನ್ನಿಡಲಾಯಿತು.
ಬೇರೆಯವರಿಗೆ ಕೆಡುಕು ಬಯಸದಿರುವುದು ಮತ್ತು ಕೆಟ್ಟ ಆಲೋಚನೆಗಳಿಂದ ದೂರವಿರುವುದೇ ತಮ್ಮ ಆರೋಗ್ಯದ ಗುಟ್ಟು ಎಂದು ಹೇಳುತ್ತಿದ್ದ ಕರೀಂಖಾನ್ ಅವರಿಗೆ ಇಳಿವಯಸ್ಸಿನಲ್ಲಿ ದೀರ್ಘಕಾಲದ ಅನಾರೋಗ್ಯ ಕಾಡಿತು. ಜೀವನದುದ್ದಕ್ಕೂ ಸ್ವಾಭಿಮಾನದಿಂದ ಬದುಕಿದ ಅವರು ಯಾರ ಮುಂದೆಯೂ ಕೈಚಾಚದೆ ತಮ್ಮ ಆದರ್ಶಗಳನ್ನು ಪಾಲಿಸಿದರು. ಜನರ ಪ್ರೀತಿಗೆ 'ಕರೀಮಜ್ಜ' ಎಂದೇ ಪರಿಚಿತರಾಗಿದ್ದರು. 2006ರ ಜುಲೈ 29ರಂದು ಬೆಂಗಳೂರಿನ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ನಿಧನರಾದರು.
ಧರ್ಮದ ಗಡಿಗಳನ್ನು ಮೀರಿ ಕನ್ನಡ ಭಾಷೆ, ನಾಡು-ನುಡಿ ಮತ್ತು ಸಂಸ್ಕೃತಿಯನ್ನು ಪ್ರೀತಿಸಿದ ಕರೀಂಖಾನ್ ಅವರ ಬದುಕು ಸೌಹಾರ್ದ ಮತ್ತು ಮಾನವೀಯತೆಗೆ ಮಾದರಿಯಾಗಿದೆ. ಸ್ವಾತಂತ್ರ್ಯ ಹೋರಾಟಗಾರನಾಗಿ ದೇಶಕ್ಕಾಗಿ ದುಡಿದು, ಜಾನಪದ ತಜ್ಞನಾಗಿ ಜನಸಂಸ್ಕೃತಿಯನ್ನು ಉಳಿಸಿ, ಸಾಹಿತಿಯಾಗಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅವರ ಕೊಡುಗೆ ಅನನ್ಯ. ಅಕ್ಷರಶಃ ಜನರ ನಡುವೆ ಬದುಕಿ, ಜನರ ಹಾಡುಗಳಲ್ಲೇ ತಮ್ಮ ಬದುಕಿನ ಅರ್ಥ ಕಂಡುಕೊಂಡ ಈ ಅಲೆಮಾರಿ ಗಾರುಡಿಗನ ಹೆಸರು ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಸದಾ ಸ್ಮರಣೀಯ.

