ಬೆಂಗಳೂರು: ‘ಜಾತಿ, ಸೇಡಿನ ರಾಜಕಾರಣ ಬಿಟ್ಟು, ರಾಜ್ಯದ ಜನರಿಗೋಸ್ಕರ ಪ್ರಾಮಾಣಿಕವಾಗಿ ಒಳ್ಳೆಯ ಕೆಲಸ ಮಾಡಿದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಬೆಂಬಲ ನೀಡುವ ಜತೆಗೆ ಸನ್ಮಾನವನ್ನೂ ಮಾಡುತ್ತೇನೆ’ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು,‘ರಾಜ್ಯ ಸರ್ಕಾರ ಬಹುತೇಕಪ್ರಕರಣಗಳಲ್ಲಿ ಎಸ್ಐಟಿಯನ್ನುದುರ್ಬಳಕೆ ಮಾಡಿಕೊಂಡು ಪ್ರತಿಪಕ್ಷಗಳನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಇಂತಹ ವರ್ತನೆಗಳನ್ನು ಬದಲಾಯಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿಗೆ ಬೆಂಬಲವಾಗಿ ನಿಂತಿದ್ದೆ ಎಂದು ಶಿವಕುಮಾರ್ ಹೇಳಿದ್ದಾರೆ. ಆಗ, ಹೈದರಾಬಾದ್‌ನ ಗುತ್ತಿಗೆದಾರರನ್ನು ಸಂಪರ್ಕಿಸಿ ಏನೇನು ಮಾಡಿದ್ದರು. ಈಗ ಅವರನ್ನೇ ಮುಂದಿಟ್ಟುಕೊಂಡು ಏನು ಮಾಡುತ್ತಿದ್ದಾರೆ ಎಲ್ಲವೂ ಗೊತ್ತಿದೆ. ‘ಪ್ಯಾಕೇಜ್‌ ಸಿಸ್ಟಮ್‌' ಜಾರಿಗೆ ತಂದು ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ ಆಂಧ್ರಪ್ರದೇಶ, ಉತ್ತರ ಪ್ರದೇಶದವರಿಗೆ ಗುತ್ತಿಗೆ ನೀಡಲಾಗುತ್ತಿದೆ. ರಾಜ್ಯದ ಗುತ್ತಿಗೆದಾರರ ಖಾತೆಗಳು ಎನ್‌ಪಿಎ ಆಗುತ್ತಿವೆ’ ಎಂದು ದೂರಿದರು.

ಕೆಪಿಎಸ್‌ಸಿ ಪರೀಕ್ಷೆ ಮುಂದೂಡಿ: ‘ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನ.15ರಂದು ನಡೆಸುತ್ತಿರುವ 319 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲಾ ನೇಮಕಾತಿ ಪರೀಕ್ಷೆಗಳನ್ನು ಮುಂದೂಡಬೇಕು. 3-4 ವರ್ಷಗಳಿಂದ ನಡೆದಿರುವ ಪರೀಕ್ಷೆ, ನೇಮಕಾತಿ ಅಕ್ರಮಗಳ ಬಗ್ಗೆ ಇ.ಡಿ, ಸಿಐಡಿ ತನಿಖೆಗಳು ನಡೆಯುತ್ತಿವೆ. ಹೈಕೋರ್ಟ್‌ ಸೂಚನೆಯಂತೆ ಎಸ್ಐಟಿ ರಚಿಸಲಾಗಿದೆ. ಹಣದ ವಹಿವಾಟು ನಡೆದಿರುವುದು ಸಾಬೀತಾಗಿದೆ. ಸಂಸ್ಥೆ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ಪರೀಕ್ಷೆ ನಡೆಸಿ ನೇಮಕಾತಿ ಮಾಡುತ್ತದೆ ಎಂಬ ನಂಬಿಕೆ ಕಳೆದುಕೊಂಡಿದೆ. ಉದ್ಯೋಗಾಕಾಂಕ್ಷಿಗಳ ದೂರು ಇದೇ ಆಗಿದೆ’ ಎಂದರು.

‘ಸಂಸ್ಥೆಯನ್ನು ಸುಧಾರಿಸಲು ಆರ್.ವಿ. ದೇಶಪಾಂಡೆ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿ ವರದಿ ನೀಡಿಲ್ಲ. ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂತಹ ಗೊಂದಲದ ವಾತಾವರಣದಲ್ಲಿ ಪರೀಕ್ಷೆ ನಡೆಸಿದರೆ ಪ್ರಾಮಾಣಿಕ, ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ಸಂಸ್ಥೆಯನ್ನು ಸಂಪೂರ್ಣವಾಗಿ ಶುದ್ಧೀಕರಿಸಿ, ಪಾರದರ್ಶಕತೆ ತಂದ ನಂತರವೇ ಪರೀಕ್ಷೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ನೇಗಿಲ ಬದಲು ಜಾಗ ಹೊಡೆದ ಮಣ್ಣಿನ ಮಕ್ಕಳು’

ಬೆಂಗಳೂರು: ‘ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವವರು ಎಲ್ಲೂ ನೇಗಿಲು ಹೊಡೆದಿಲ್ಲ, ಬರೀ ಜಾಗ ಹೊಡೆದಿದ್ದಾರೆ. ಲೋಕಾಯುಕ್ತದ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಎ1, ಎ2 ಯಾರಿದ್ದಾರೆ ಎಂಬುದು ಜನರಿಗೆ ಗೊತ್ತಿದೆ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

‘ಮಲ್ಲಿಕಾರ್ಜುನ ಖರ್ಗೆ ಕುಟುಂಬವು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿ ಆಗಿದ್ದಾಗ ಅವರು ದಾಖಲೆಗಳನ್ನು ಏಕೆ ಬಹಿರಂಗಪಡಿಸಲಿಲ್ಲ? ನನ್ನ ಕುಟುಂಬದ ಪ್ರತಿಯೊಂದು ಆಸ್ತಿಯ ದಾಖಲೆಗಳನ್ನು ತರಲು ನಾನು ಸಿದ್ಧ. ಅವರು ತಮ್ಮ ಕುಟುಂಬದ ಆಸ್ತಿ ದಾಖಲೆಗಳನ್ನು ತರಲಿ’ ಎಂದು ಸವಾಲು ಹಾಕಿದರು.

ಕಲಬುರಗಿಯ ಬುದ್ಧ ಮಂದಿರದ ಕುರಿತು ಪ್ರತಿಕ್ರಿಯಿಸಿದ ಅವರು, ‘ಅಲ್ಲಿ ನಿರ್ಮಿಸಿರುವುದು ಯಾವುದೇ ರಿಯಲ್ ಎಸ್ಟೇಟ್ ಲೇಔಟ್ ಅಲ್ಲ, ಬದಲಿಗೆ ಬುದ್ಧ ಮಂದಿರ. ನಮ್ಮ ಕಡೆ ಇರುವ ಏಕೈಕ ಕೇಂದ್ರ ನಿಮ್ಮ ಕಣ್ಣಿಗೆ ಕುಕ್ಕುತ್ತಿದೆಯೇ’ ಎಂದು ಪ್ರಶ್ನಿಸಿದರು.

‘60 ವರ್ಷಗಳ ಹಳೆಯ ಯಂಗ್ ಇಂಡಿಯಾ ಟ್ರಸ್ಟ್ ಪ್ರಕರಣದಲ್ಲೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಲುಕಿಸಲು ಯತ್ನಿಸಲಾಯಿತು. ಈಗಲೂ ಕೆಪಿಎಸ್‌ಸಿ ಪ್ರಕರಣಗಳಲ್ಲಿ ಸಿದ್ದರಾಮಯ್ಯ ಹಾಗೂ ಪ್ರಿಯಾಂಕ್ ಖರ್ಗೆ ಹೆಸರು ಹೇಳುವಂತೆ ತನಿಖಾ ಸಂಸ್ಥೆಗಳಿಗೆ ಕಿರುಕುಳ ನೀಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಕೆಪಿಎಸ್‌ಸಿ ಅಕ್ರಮದ ಪಿತಾಮಹ’

‘ತಮ್ಮ ಆಡಳಿತಾವಧಿಯಲ್ಲಿ ಹಣ ಪಡೆದು ಕೆಪಿಎಸ್‌ಸಿ ಅಧ್ಯಕ್ಷರನ್ನು ನೇಮಕ ಮಾಡಿದ್ದೇ ಇವರು. ಇವರು ನೇಮಿಸಿದವರೆಲ್ಲರೂ ಜೈಲಿಗೆ ಹೋಗಿ ಬಂದಿದ್ದಾರೆ. ವಿರೋಧ ಪಕ್ಷಗಳ ನಾಯಕರು ಕೆಪಿಎಸ್‌ಸಿ ಹಗರಣಗಳ ಪಿತಾಮಹರು’ ಎಂದು ಪ್ರಿಯಾಂಕ್ ಕಿಡಿಕಾರಿದರು.

‘ಯುವಕರ ಭವಿಷ್ಯವನ್ನು ಮಾರಾಟಕ್ಕಿಟ್ಟು ತಮ್ಮ ರಾಜಕೀಯ ಭವಿಷ್ಯವನ್ನು ಕಟ್ಟಿಕೊಂಡಿದ್ದಾರೆ. ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅವರ ಬಗ್ಗೆ ಕುಮಾರಸ್ವಾಮಿಯಾಗಲಿ ಅಥವಾ ಬಿಜೆಪಿ-ಜೆಡಿಎಸ್ ನಾಯಕರಾಗಲಿ ಏಕೆ ಮಾತಾಡುತ್ತಿಲ್ಲ? ಶೀಘ್ರದಲ್ಲೇ ಕೆಲವು ಪ್ರಶ್ನೆಗಳು ಹೊರಬರಲಿದ್ದು, ಅವರು ಅದಕ್ಕೆ ಉತ್ತರ ನೀಡಲಿ’ ಎಂದು ಸವಾಲು ಹಾಕಿದರು.

261108-51-393336563