ಮಂಗಳೂರು (ನ.8): ರಾಜ್ಯದ 4 ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಐವಿಎಫ್ ಸೆಂಟರ್ (ಬಂಜೆತನ ಚಿಕಿತ್ಸಾ ಕೇಂದ್ರ) ಮಾಡಬೇಕೆಂದು ತೀರ್ಮಾನಿಸಲಾಗಿದ್ದು, ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಮೊದಲು ಆರಂಭಿಸಿ, ಬಳಿಕ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಅಥವಾ ಬೆಳಗಾವಿ ಭಾಗದಲ್ಲಿ ಮಾಡಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದರು.
ಬಡವರ ಅನುಕೂಲಕ್ಕೆ ಸರ್ಕಾರಿ ಆಸ್ಪತ್ರೆಯಲ್ಲೇ ಐವಿಎಫ್ ಕೇಂದ್ರ
ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿ, ಬಹಳಷ್ಟು ಮಂದಿ ಬಡವರು ಇಂತಹ ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ. ಅವಮಾನಕ್ಕೊಳಗಾಗಿದ್ದಾರೆ. ಖಾಸಗಿಯಲ್ಲಿ ಲಕ್ಷಾಂತರ ವೆಚ್ಚ ಮಾಡಬೇಕಾಗುತ್ತದೆ. ಅದಕ್ಕಾಗಿ ಜನಸಾಮಾನ್ಯರಿಗಾಗಿ ಕಡಿಮೆ ದರದಲ್ಲಿ, ಉತ್ತಮ ಸೇವೆ ನೀಡಲಾಗುವುದು. ಇದರ ಅಂತಿಮ ಪಕ್ರಿಯೆ ಹಂತದಲ್ಲಿದೆ. ಒಂದು ಕೇಂದ್ರಕ್ಕೆ 5 ಕೋಟಿ ರು. ವೆಚ್ಚಬೇಕಾಗುತ್ತದೆ. ತಜ್ಞರ ಸಮಿತಿ ಮಾಡಲಾಗಿದೆ. ಎಬಿಎಆರ್ಕೆಯಲ್ಲೂ ಇದಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಖಾಸಗಿಯವರು ಮುಂದೆ ಬರಲಿಲ್ಲ. ಈ ಕಾರಣದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಮಾಡಲಾಗುತ್ತದೆ. ಇನ್ನು 2-3 ತಿಂಗಳಲ್ಲಿ ಯೋಜನೆ ಆರಂಭಿಸಲಾಗುತ್ತದೆ ಎಂದರು.
ಔಷಧ ಬೆಲೆ ನಿಗದಿ ಮಾಡೋದು ಕೇಂದ್ರ ಸರ್ಕಾರ
ಅಗತ್ಯ ಔಷಧಗಳ ಬೆಲೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾವುದೆಲ್ಲ ಕ್ಯಾನ್ಸರ್ಗೆ ಸಂಬಂಧಿಸಿದ ಔಷಧಗಳು ಎಂದು ನಿಗದಿಪಡಿಸುವುದು ಕೇಂದ್ರ ಆರೋಗ್ಯ ಸಚಿವಾಲಯ. ಕೇಂದ್ರ ಆರೋಗ್ಯ ಇಲಾಖೆ ಸುಮಾರು 137 ಔಷಧಗಳನ್ನು ಆಯ್ಕೆ ಮಾಡಿತ್ತು. ಇದಕ್ಕೆ ಶೇ.30ರಷ್ಟು ಕ್ಯಾಪಿಂಗ್ ಮಾಡಿದೆ. ನವೆಂಬರ್ನಲ್ಲಿ ದರ ನಿಗದಿ ಮಾಡಲು ತಿಳಿಸಲಾಗಿದೆ. ಅದರಂತೆ ಪ್ರಕ್ರಿಗಳು ನಡೆಯುತ್ತಿದೆ ಎಂದರು.

