Ramayana Box Office Collection Day 3: ರಣಬೀರ್ ಕಪೂರ್ (Ranbir Kapoor), ಸಾಯಿ ಪಲ್ಲವಿ (Sai Pallavi), ರವಿ ದುಬೆ (Ravie Dubey) ಮತ್ತು ಯಶ್ (Yash) ನಟನೆಯ ಬಹುನಿರೀಕ್ಷಿತ 'ರಾಮಾಯಣ: ಪಾರ್ಟ್ ಒನ್' (Ramayana: Part One) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿದೆ. ಬಿಡುಗಡೆಯಾದ ಮೊದಲ ದಿನ ಉತ್ತಮ ಆರಂಭ ಪಡೆದಿದ್ದರೂ, ಶುಕ್ರವಾರದ ಕಲೆಕ್ಷನ್ನಲ್ಲಿ ಕುಸಿತ ಕಂಡು ವಾಣಿಜ್ಯ ವಲಯದ ಲೆಕ್ಕಾಚಾರಗಳನ್ನು ಕೊಂಚ ತಲೆಕೆಳಗಾಗಿಸಿತ್ತು. ಆದರೆ ಶನಿವಾರ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಚಿತ್ರದ ಗಳಿಕೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.
ನಿತೇಶ್ ತಿವಾರಿ (Nitesh Tiwari) ನಿರ್ದೇಶನದ ಈ ಸಿನಿಮಾ ನವೆಂಬರ್ 5ರ ಗುರುವಾರ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಭರ್ಜರಿ ಓಪನಿಂಗ್ ನಿರೀಕ್ಷಿಸಲಾಗಿತ್ತು. ಆದರೆ ದೀಪಾವಳಿಗೂ ಮುನ್ನದ ಅವಧಿಯಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಇದು ಚಿತ್ರಗಳ ಕಲೆಕ್ಷನ್ ದೃಷ್ಟಿಯಿಂದ ಸವಾಲಿನ ಸಮಯವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಶುಕ್ರವಾರ ಕೆಲಸದ ದಿನವಾಗಿದ್ದರಿಂದ ಚಿತ್ರದ ಗಳಿಕೆಯಲ್ಲಿ ಇಳಿಕೆ ಕಂಡುಬಂದಿತ್ತು. ಇದರಿಂದ ಟ್ರೇಡ್ ವಿಶ್ಲೇಷಕರು ಕೊಂಚ ಆತಂಕ ವ್ಯಕ್ತಪಡಿಸಿದ್ದರು. ಆದರೆ ಶನಿವಾರದ ಗಳಿಕೆಯಲ್ಲಿನ ಭಾರಿ ಏರಿಕೆ ಚಿತ್ರದ ಬಾಕ್ಸ್ ಆಫೀಸ್ ಓಟಕ್ಕೆ ಹೊಸ ವೇಗ ನೀಡಿದೆ. ಚಿತ್ರದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದವರಿಗೆ ಈ ಕಲೆಕ್ಷನ್ ತಕ್ಕ ಉತ್ತರ ನೀಡಿದೆ ಎಂದು ವರದಿ ಹೇಳಿದೆ.
ಮೂರನೇ ದಿನವೇ 62 ಕೋಟಿ ರೂ. ಗಳಿಕೆ!
Sacnilk ವರದಿಯ ಪ್ರಕಾರ, ಶನಿವಾರ ರಾತ್ರಿ 9.03ರ ವೇಳೆಗೆ 'ರಾಮಾಯಣ' ಸಿನಿಮಾ ಒಂದೇ ದಿನ ಭಾರತದಲ್ಲಿ 62.04 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ವಿವಿಧ ಭಾಷೆಗಳಲ್ಲಿ ಚಿತ್ರ ಗಳಿಸಿದ ಮೊತ್ತ ಹೀಗಿದೆ.
ಹಿಂದಿ: 18,848 ಪ್ರದರ್ಶನಗಳಿಂದ 48.33 ಕೋಟಿ ರೂ.
ಕನ್ನಡ: 907 ಪ್ರದರ್ಶನಗಳಿಂದ 6.31 ಕೋಟಿ ರೂ.
ತೆಲುಗು: 1,556 ಪ್ರದರ್ಶನಗಳಿಂದ 5.19 ಕೋಟಿ ರೂ.
ತಮಿಳು: 654 ಪ್ರದರ್ಶನಗಳಿಂದ 2.21 ಕೋಟಿ ರೂ.
ಈ ಅಂಕಿಅಂಶಗಳ ಪ್ರಕಾರ, ಶನಿವಾರದ ವೇಳೆಗೆ ಚಿತ್ರದ ಒಟ್ಟು ಭಾರತ ನೆಟ್ ಕಲೆಕ್ಷನ್ 174.94 ಕೋಟಿ ರೂ. ತಲುಪಿದೆ. ಭಾರತದಲ್ಲಿ ಒಟ್ಟು ಗ್ರಾಸ್ ಕಲೆಕ್ಷನ್ 208.01 ಕೋಟಿ ರೂ. ಆಗಿದೆ ಎಂದು ವರದಿ ತಿಳಿಸಿದೆ. ಆದರೆ ಇವು ರಾತ್ರಿ 9.03ರ ವೇಳೆಯ ಅಂಕಿಅಂಶಗಳಾಗಿದ್ದು, ಅಂತಿಮ ಕಲೆಕ್ಷನ್ ಇನ್ನೂ ಪ್ರಕಟವಾಗಬೇಕಿದೆ.
ಶನಿವಾರದ ಗಳಿಕೆ 80-85 ಕೋಟಿ ರೂ. ತಲುಪುವ ನಿರೀಕ್ಷೆ
ಶನಿವಾರದ ಪ್ರದರ್ಶನಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ದಿನದ ಅಂತ್ಯದ ವೇಳೆಗೆ ಭಾರತದಲ್ಲಿ 80ರಿಂದ 85 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. ಇನ್ನು ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರ ಉತ್ತಮ ಪ್ರದರ್ಶನ ಕಾಣುವ ನಿರೀಕ್ಷೆಯಿದ್ದು, ಶನಿವಾರ 60ರಿಂದ 65 ಕೋಟಿ ರೂ. ಗ್ರಾಸ್ ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಇದನ್ನು ಆಧರಿಸಿ ಶನಿವಾರದ ವಿಶ್ವಾದ್ಯಂತ ಒಟ್ಟು ಗ್ರಾಸ್ ಕಲೆಕ್ಷನ್ ಸುಮಾರು 140ರಿಂದ 150 ಕೋಟಿ ರೂ. ತಲುಪುವ ಸಾಧ್ಯತೆಯಿದೆ.
ಈ ಅಂದಾಜುಗಳ ಪ್ರಕಾರ, ಬಿಡುಗಡೆಯಾದ ಮೂರು ದಿನಗಳಲ್ಲಿ 'ರಾಮಾಯಣ' ಚಿತ್ರದ ವಿಶ್ವಾದ್ಯಂತ ಒಟ್ಟು ಗ್ರಾಸ್ ಕಲೆಕ್ಷನ್ 370ರಿಂದ 380 ಕೋಟಿ ರೂ. ತಲುಪಬಹುದು ಎಂದು ನಿರೀಕ್ಷಿಸಲಾಗಿದೆ.
ಭಾನುವಾರವೂ 50 ಕೋಟಿ ರೂ. ಗಳಿಕೆ ನಿರೀಕ್ಷೆ
ಶನಿವಾರದ ಭರ್ಜರಿ ಏರಿಕೆಯ ಬೆನ್ನಲ್ಲೇ ಭಾನುವಾರವೂ ಚಿತ್ರ ಉತ್ತಮ ಗಳಿಕೆ ಮಾಡುವ ನಿರೀಕ್ಷೆಯಿದೆ. ಭಾನುವಾರ ಭಾರತದಲ್ಲಿ 50 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಬಹುದು ಎಂದು ಅಂದಾಜಿಸಲಾಗಿದೆ. ಆದರೆ ದೀಪಾವಳಿ ಪೂಜೆಯ ಕಾರಣ ಸಂಜೆ ಮತ್ತು ರಾತ್ರಿ ಪ್ರದರ್ಶನಗಳ ವೀಕ್ಷಕರ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ಭಾನುವಾರದ ಅಂತಿಮ ಗಳಿಕೆಯ ಮೇಲೆ ಹಬ್ಬದ ಆಚರಣೆಯ ಪರಿಣಾಮವೂ ಇರಲಿದೆ.
ಇನ್ನು ಸೋಮವಾರದಿಂದ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಮತ್ತಷ್ಟು ದೊಡ್ಡ ಏರಿಕೆ ಕಂಡುಬರುವ ನಿರೀಕ್ಷೆಯಿದೆ. ವಾರದ ಆರಂಭದ ದಿನಗಳಲ್ಲಿ ಚಿತ್ರಕ್ಕೆ ಸಿಗುವ ಪ್ರತಿಕ್ರಿಯೆ 'ರಾಮಾಯಣ'ದ ಮುಂದಿನ ಬಾಕ್ಸ್ ಆಫೀಸ್ ಓಟವನ್ನು ನಿರ್ಧರಿಸಲಿದೆ.

