ಸೋಲಾಪುರ: ಜಿಲ್ಲೆಯ ಪ್ರತಿಯೊಬ್ಬ ರೋಗಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಕಡ್ಡಾಯ. ಸರ್ಕಾರ ನೀಡಿರುವ ವೈದ್ಯಕೀಯ ಉಪಕರಣಗಳು, ಔಷಧಗಳು ಹಾಗೂ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು. ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಬಾರದು ಎಂದು ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಪ್ರಕಾಶ್ ಅಬಿಟ್ಕರ್ ಸೂಚಿಸಿದರು.

ಜಿಲ್ಲೆಯಲ್ಲಿರುವ ನಕಲಿ ವೈದ್ಯರ ವಿರುದ್ಧ ಎಂಟು ದಿನಗಳೊಳಗೆ ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸೋಲಾಪುರದಲ್ಲಿ ನಡೆದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಅಗತ್ಯ ಸೌಲಭ್ಯ ಮತ್ತು ಗುಣಮಟ್ಟದ ಚಿಕಿತ್ಸೆ ಒದಗಿಸಬೇಕು. ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಬಡವರಿಗೆ ಉಚಿತ ಆರೋಗ್ಯ ಸೇವೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದರು.

'ನನ್ನ ಗ್ರಾಮ, ಆರೋಗ್ಯವಂತ ಗ್ರಾಮ' ಅಭಿಯಾನದ ಯಶಸ್ಸಿಗೆ ಜನ ಆರೋಗ್ಯ ಸಮಿತಿಗಳು, ಜನಪ್ರತಿನಿಧಿಗಳು ಮತ್ತು ಆರೋಗ್ಯ ಇಲಾಖೆ ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ಕಂಡುಬಂದರೆ ಯಾರನ್ನೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು.

ಸಭೆಯಲ್ಲಿ ಉಪಜಿಲ್ಲಾ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಆರೋಗ್ಯ ಉಪಕೇಂದ್ರಗಳ ಕಾರ್ಯನಿರ್ವಹಣೆ ಪರಿಶೀಲಿಸಲಾಯಿತು.

ಆಸ್ಪತ್ರೆಗಳಿಗೆ ಭೇಟಿ: ಸಚಿವರು ಜಿಲ್ಲಾ ಸಾಮಾನ್ಯ ಆಸ್ಪತ್ರೆ ಮತ್ತು ಮಹಿಳಾ ಆಸ್ಪತ್ರೆಗೆ ಭೇಟಿ ನೀಡಿ ನೂತನ ಕ್ಯಾಥ್‌ಲ್ಯಾಬ್, ತೀವ್ರ ನಿಗಾ ಘಟಕ ಹಾಗೂ ವಿವಿಧ ವಿಭಾಗಗಳ ಕಾರ್ಯವೈಖರಿ ಪರಿಶೀಲಿಸಿದರು. ರೋಗಿಗಳೊಂದಿಗೆ ಮಾತನಾಡಿ ಚಿಕಿತ್ಸೆ, ಔಷಧ ಮತ್ತು ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಆಯುಷ್ಮಾನ್ ಭಾರತ್ ಹಾಗೂ ಮಹಾತ್ಮ ಫುಲೆ ಜನ ಆರೋಗ್ಯ ಯೋಜನೆಯ ಫಲಾನುಭವಿಗಳೊಂದಿಗೂ ಸಂವಾದ ನಡೆಸಿದರು.

261106-26-1106134465