ಚಂಡೀಗಢ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬಾಲಾ ಕಂಟೋನ್ಮೆಂಟ್ನಲ್ಲಿ 1857ರಲ್ಲಿ ಬ್ರಿಟಿಷರ ಆಡಳಿತದ ವಿರುದ್ಧ ಹೋರಾಡಿದ ಸೈನಿಕರ ಸ್ಮರಣಾರ್ಥ ನಿರ್ಮಿಸಲಾಗಿರುವ ‘ಶಹೀದ್ ಸ್ಮಾರಕ’ವನ್ನು ಉದ್ಘಾಟಿಸಿದರು.
1857ರ ಘಟನೆಗಳನ್ನು ಸ್ವಾತಂತ್ರ್ಯ ಸಂಗ್ರಾಮವೆಂದು ಪರಿಗಣಿಸುವ ಬದಲು ದಂಗೆ ಎಂದು ಬಣ್ಣಿಸಿದ ಬ್ರಿಟಿಷ್ ವಸಾಹತುಶಾಹಿ ಚಿಂತನೆ ಮತ್ತು ಎಡಪಂಥೀಯ ಸಿದ್ಧಾಂತಗಳಿಂದ ಪ್ರಭಾವಿತರಾದ ಇತಿಹಾಸಕಾರರನ್ನು ಅವರು ಟೀಕಿಸಿದರು.
ವೀರ್ ಸಾವರ್ಕರ್ ಅವರ ವ್ಯಾಖ್ಯಾನವನ್ನು ಉಲ್ಲೇಖಿಸಿದ ಅಮಿತ್ ಶಾ, ‘ದಂಗೆ’ ಎಂಬ ಪದ ಬ್ರಿಟಿಷರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಆದರೆ ಭಾರತೀಯರ ಪಾಲಿಗೆ ಆ ಹೋರಾಟ ಸ್ವಾತಂತ್ರ್ಯ ಸಂಗ್ರಾಮವಾಗಿತ್ತು ಎಂದು ಹೇಳಿದರು.
'ರಾಹುಲ್ ಗಾಂಧಿ ವಿದೇಶ ಪ್ರವಾಸ ಬಗ್ಗೆ ತಿಳಿದುಕೊಳ್ಳುವ ಹಕ್ಕು ಜನರಿಗಿದೆ, ಬಹಿರಂಗಪಡಿಸಬೇಕು': ಅಮಿತ್ ಶಾಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, 1857ರ ಸ್ವಾತಂತ್ರ್ಯ ಸಂಗ್ರಾಮ ನಡೆದ ಮೇ 10ರ ಆ ಮಣ್ಣಿಗೆ ನಾನು ಮತ್ತೆ ಮತ್ತೆ ತಲೆಬಾಗುತ್ತೇನೆ. ಈ ಘಟನೆ ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವನ್ನೇ ನಡುಗಿಸಿತ್ತು. ಆ ಸಾಮ್ರಾಜ್ಯದಲ್ಲಿ ಸೂರ್ಯ ಎಂದಿಗೂ ಮುಳುಗುವುದಿಲ್ಲ ಎಂದು ಹೇಳಲಾಗುತ್ತಿತ್ತು. 1857ರಿಂದ 1947ರವರೆಗಿನ 90 ವರ್ಷಗಳ ಸುದೀರ್ಘ ಹೋರಾಟದಲ್ಲಿ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರು ತ್ಯಾಗ, ಬಲಿದಾನ ಮಾಡಿದ್ದಾರೆ. ಅವರ ತ್ಯಾಗದ ಫಲವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ದ ಕನಸಿನಡಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ಆಶಯಕ್ಕೆ ಭದ್ರ ಬುನಾದಿ ದೊರೆತಿದೆ. ಅವರ ತ್ಯಾಗದ ಅಡಿಪಾಯದ ಮೇಲೆ ಕಳೆದ ಹಲವು ವರ್ಷಗಳಿಂದ ನಮ್ಮ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಬಲಪಡಿಸುತ್ತಿದ್ದೇವೆ. ಇಂದು ಇಡೀ ವಿಶ್ವದ ಮುಂದೆ ನಾವು ಹೆಮ್ಮೆಯಿಂದ ತಲೆ ಎತ್ತಿ ನಿಂತಿದ್ದೇವೆ ಎಂದು ಹೇಳಿದರು.
87ನೇ ವಯಸ್ಸಿನಲ್ಲಿಯೂ ಬ್ರಿಟಿಷ್ ಪಡೆಗಳನ್ನು ಎದುರಿಸಿದ್ದ ಬಾಬು ಕುವರ್ ಸಿಂಗ್ ಅವರ ಅಪ್ರತಿಮ ಧೈರ್ಯವನ್ನು ಸ್ಮರಿಸಿದ ಅಮಿತ್ ಶಾ, ಗುಂಡು ಅವರ ಎಡಗೈಗೆ ತಗುಲಿದಾಗ, ಗಾಯಗೊಂಡ ಕೈಯನ್ನು ಬಲಗೈಯಿಂದ ಕತ್ತರಿಸಿ ಹಾಕಿ ಹೋರಾಟವನ್ನು ಮುಂದುವರಿಸಿದ್ದರು. ಅಂತಿಮವಾಗಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದರು. ಅವರ ಧೈರ್ಯವು ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು ವ್ಯಾಖ್ಯಾನಿಸಿದ ಅಸಾಧಾರಣ ತ್ಯಾಗದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ನಾನಾ ಸಾಹೇಬ್ ಪೇಶ್ವೆ, ಮಹಾರಾಣಿ ಲಕ್ಷ್ಮೀಬಾಯಿ, ತಾತ್ಯಾ ಟೋಪೆ, ಅಜೀಮುಲ್ಲಾ ಖಾನ್, ಬೇಗಂ ಹಜರತ್ ಮಹಲ್, ಬಹಾದ್ದೂರ್ ಷಾ ಜಫರ್ ಸೇರಿದಂತೆ ಹಲವು “ಪ್ರತಿಷ್ಠಿತ ವೀರ ಯೋಧರಿಗೆ ಅಮಿತ್ ಶಾ ಗೌರವ ನಮನ ಸಲ್ಲಿಸಿದರು.
#WATCH | Ambala, Haryana | Union Home Minister Amit Shah says, "Ambala is the very ground where the freedom struggle of 1857 began on May 10th. This struggle shook the foundations of the British Empire... The revolution of 1857 was not just a rebellion, but a genuine struggle for… pic.twitter.com/otrojkk1ma
— ANI (@ANI) November 5, 2026
ತನ್ನ ಸ್ವಾತಂತ್ರ್ಯಕ್ಕಾಗಿ ತೆತ್ತ ಬೆಲೆಯನ್ನು ಗುರುತಿಸದ ಮತ್ತು ಅದಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸದ ರಾಷ್ಟ್ರವು ಎಂದಿಗೂ ಶಾಶ್ವತ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಹುತಾತ್ಮರ ಕಥೆಗಳನ್ನು ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಿಸಬೇಕು. ‘ಆಜಾದಿ ಕಿ ಪೆಹಲಿ ಲಡಾಯಿ (1857) ಕಾ ಶಹೀದ್ ಸ್ಮಾರಕ’ವು ದೇಶದಾದ್ಯಂತದ ಯುವಜನರಿಗೆ ದೇಶಭಕ್ತಿಯ ಸ್ಫೂರ್ತಿ ನೀಡುವ ಪ್ರಮುಖ ಕೇಂದ್ರವಾಗಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.
22 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ‘ಆಜಾದಿ ಕಿ ಪೆಹಲಿ ಲಡಾಯಿ ಕಾ ಶಹೀದ್ ಸ್ಮಾರಕ’ದಲ್ಲಿ 1857ರ ಹೋರಾಟಕ್ಕೆ ಸಂಬಂಧಿಸಿದ ಐತಿಹಾಸಿಕ ಘಟನೆಗಳನ್ನು 22 ಗ್ಯಾಲರಿಗಳ ಮೂಲಕ ಪ್ರದರ್ಶಿಸಲಾಗಿದೆ. ಇದೇ ವೇಳೆ, 1,260 ಕೋಟಿ ರೂ. ವೆಚ್ಚದ 23 ಕಿ.ಮೀ. ಉದ್ದದ ಜಲ್ಬೆಹ್ರಾ–ಶಹಾಬಾದ್ (NH-152G) ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನೂ ಅಮಿತ್ ಶಾ ಉದ್ಘಾಟಿಸಿದರು.

