ಕರ್ನಾಟಕದಲ್ಲಿ ಕೆರೆಗಳ ನಿರ್ಮಾಣ ಮತ್ತು ನಿರ್ವಹಣೆಗೆ 1500 ವರ್ಷಗಳಿಗೂ ಹೆಚ್ಚಿನ ಭವ್ಯ ಪರಂಪರೆಯಿದೆ. ಬಿಜಾಪುರದ ಸುಲ್ತಾನರ ಅವಧಿಯಲ್ಲಿ ನಗರಕ್ಕೆ ನೀರೊದಗಿಸಲು ನಿರ್ಮಾಣ ಮಾಡಲಾಗಿತ್ತು. ಹತ್ತಾರು ಬಾವಡಿಗಳನ್ನು ನಗರದ ವಿವಿಧ ಭಾಗಗಳಲ್ಲಿ ಕಾಣಬಹುದು. ಅಂತರ್ಜಲ ಹಾಗೂ ದೂರದ ಕೆರೆಗಳಿಂದ ಇವುಗಳಿಗೆ ನೀರೊದಗಿಸಲಾಗುತ್ತಿತ್ತು. ತುಮಕೂರು ಹಾಗೂ ಕೋಲಾರ ಜಿಲ್ಲೆ ಕೆಲವು ಭಾಗದ ಹಳೆ ತಲೆಮಾರಿನ ರೈತರಿಗೆ ತಲಪರಿಗೆ ಅತ್ಯಂತ ಪರಿಚಿತ ತಲಪರಿಗೆ ನೀರಾವರಿ, ತಲಪರಿಗೆ ಬೇಸಾಯ. ಕರ್ನಾಟಕದ ವಿವಿಧ ಭಾಗದಲ್ಲಿ ಜನ ಸಂಗ್ರಹಣೆ ಮಾದರಿ ಜನಪ್ರಿಯವಾಗಿವೆ.

ಕರ್ನಾಟಕವು ವೈವಿಧ್ಯಮಯ ಮಳೆ ನೀರು ಸಂಗ್ರಹಣಾ ಮಾದರಿಗಳನ್ನು ಹೊಂದಿದೆ. ರಾಜ್ಯಾದ್ಯಂತ ಇರುವ ಕೆರೆಗಳು, ಬಯಲುಸೀಮೆಯ ಗೋಕಟ್ಟೆಗಳು, ಕರಾವಳಿಯ ಮದಕಗಳು, ಸುರಂಗಗಳು, ಕಟ್ಟಗಳು, ಉತ್ತರ ಕರ್ನಾಟಕದ ವರತೆಗಳು, ಗುಂಡ್ಯಗಳು, ವಿಜಯಪುರದ ಬಾವಡಿಗಳು, ತುಮಕೂರು ಭಾಗದ ತಲಪರಿಗೆ, ದೊಣೆಗಳು, ದೇವಾಲಯಗಳ ಪರಿಸರದಲ್ಲಿನ ಕಲ್ಯಾಣಿಗಳು, ಪುಷ್ಕರಣಿಗಳು, ಕುಡಿಯುವ ನೀರು ಹಾಗೂ ಕೃಷಿಗೆ ನೀರುಣಿಸುವ ತೆರೆದ ಬಾವಿಗಳು, ದಾರಿಹೋಕರ ದಾಹ ತಣಿಸುವ ಕೋಲಾರ-ಚಿಕ್ಕಬಳ್ಳಾಪುರ ಭಾಗದ ಸಿಸಿಂದ್ರಗಳು.. ಹೀಗೆ ಒಂದೇ ಎರಡೇ. ಅವುಗಳ ಹೆಸರೂ ವಿಶಿಷ್ಟ, ಬಳಕೆಯೂ ವಿಶಿಷ್ಟ.

ಚಂದ್ರವಳ್ಳಿ ಕೆರೆಯಿಂದ..

ಕರ್ನಾಟಕದ ಕೆರೆಗಳು ಕೇವಲ ನೀರು ಸಂಗ್ರಹಿಸುವ ಜಲಮೂಲಗಳಷ್ಟೇ ಅಲ್ಲ, ಅವು ನಮ್ಮ ರಾಜ್ಯದ ಗ್ರಾಮೀಣ ಸಂಸ್ಕೃತಿ ಮತ್ತು ಜೀವಪರಿಸರ ವ್ಯವಸ್ಥೆಯ ಜೀವನಾಡಿಗಳಾಗಿವೆ. ಕರ್ನಾಟಕದಲ್ಲಿ ಕೆರೆಗಳ ನಿರ್ಮಾಣ ಮತ್ತು ನಿರ್ವಹಣೆಗೆ ಸುಮಾರು 1500 ವರ್ಷಗಳಿಗೂ ಹೆಚ್ಚಿನ ಭವ್ಯ ಪರಂಪರೆಯಿದೆ.

ರಾಜ್ಯದಲ್ಲಿ ಮೊದಲು ಕಟ್ಟಿರುವ ಚಂದವಳ್ಳಿಯ ಕೆರೆ, ರಾಜ್ಯದ ಅತಿದೊಡ್ಡ ಚನ್ನಗಿರಿ ಬಳಿಯ ಸೂಳೆಕೆರೆ, ಬದಾಮಿ ಬಳಿಯ ತಟಾಕ, ಹೊಸಪೇಟೆ ಬಳಿ ಕೃಷ್ಣದೇವರಾಯ ಕಟ್ಟರುವ ಹಾಗೂ ಪ್ರಸ್ತುತ ಹಾಳಾಗಿರುವ ರಾಯರ ಕೆರೆ, ಬೆಂಗಳೂರಿಗೆ ನೀರುಣಿಸುತ್ತಿದ್ದ ಹೆಸರಘಟ್ಟ ಮತ್ತು ತಿಪ್ಪಗೊಂಡನಹಳ್ಳಿ ಕೆರೆಗಳು . . ಹೀಗೆ ಹೇಳುತ್ತಾ ಹೋದರೆ ಒಂದೊಂದು ಕೆರೆಯೂ ವಿಶಿಷ್ಟ ಹಾಗೂ ಮಹತ್ವದ್ದು.

ಕದಂಬರು, ಗಂಗರು, ಚೋಳರು, ಚಾಲುಕ್ಯರು, ಸುಲ್ತಾನರು, ಒಡೆಯರು, ಬ್ರಿಟೀಷರು . ಹೀಗೆ ಇಲ್ಲಿ ಆಳ್ವಿಕೆ ನಡೆಸಿದವರು ಕೆರೆಗಳ ಮಹತ್ವವನ್ನು ಮನಗಂಡಿದ್ದರು. ಇವರೆಲ್ಲರ ಶ್ರಮದಿಂದ ಕಟ್ಟಿದ 36000 ಕೆರೆಗಳನ್ನು ನಮ್ಮ ರಾಜ್ಯದಲ್ಲಿ ದಾಖಲಿಸಲಾಗಿದೆ. ಆಳರಸರಲ್ಲದೆ ಜನಸಾಮಾನ್ಯರು ಸಹ ಕೆರೆಗಳ ನಿರ್ಮಾಣಕ್ಕೆ ಕೊಡುಗೆ ನೀಡಿರುವುದನ್ನು ಗಮನಿಸಬಹುದು. ನೂರಾರು ಶಾಸನಗಳು ಕೆರೆಗಳ ನಿರ್ಮಾಣ ಹಾಗೂ ದುರಸ್ತಿಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ನೀಡುತ್ತವೆ.

ಬಯಲು ಸೀಮೆ, ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಬೃಹದಾಕಾರದ ಕೆರೆಗಳಿದ್ದರೆ ಮಲೆನಾಡು ಹಾಗೂ ಕರಾವಳಿಯಲ್ಲಿ ಕೆರೆಗಳ ವ್ಯಾಪ್ತಿ ಚಿಕ್ಕದು. ಒಂದು ಕೆರೆ ತುಂಬಿ ಕೋಡಿ ಹರಿದರೆ ಆ ನೀರು ಮತ್ತೊಂದು ಕೆರೆಯನ್ನು ಸೇರುವ ಸರಣಿ ಕೆರೆಗಳು ದೊಡ್ಡ ಪ್ರಮಾಣದಲ್ಲಿವೆ.

ಕೆರೆಗಳೊಂದಿಗೆ ಥಳುಕು ಹಾಕಿಕೊಂಡ ಜನಪದ ಕಥೆ, ಲಾವಣಿ, ಒಗಟು, ಪದ, ಹಾಡು, ಬಯಲಾಟ, ನಂಬಿಕೆಗಳ ದೊಡ್ಡ ಭಂಡಾರವೇ ನಮ್ಮಲ್ಲಿದೆ. ಇದು ಕೆರೆ ಪರಂಪರೆ ನಮ್ಮ ಜನಮಾನಸದಲ್ಲಿ ಹಾಸುಹೊಕ್ಕಾಗಿರುವುದರ ದ್ಯೋತಕ.

ಆರ್ಥಿಕತೆಯ ಮೂಲ ಕೆರೆಗಳು

ಕರ್ನಾಟಕದಲ್ಲಿ ಶೇ 90ಕ್ಕಿಂತ ಹೆಚ್ಚು ಕೆರೆಗಳು ಸಣ್ಣ ಅಚ್ಚುಕಟ್ಟು ಪ್ರದೇಶ ಹೊಂದಿರುವ ಗ್ರಾಮೀಣ ಕೆರೆಗಳಾಗಿವೆ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮುಂತಾದ ಬಯಲುಸೀಮೆ ಜಿಲ್ಲೆಗಳಲ್ಲಿ ನದಿಗಳಿಲ್ಲದ ಕಾರಣ ಇಡೀ ಗ್ರಾಮೀಣ ಆರ್ಥಿಕತೆಯೇ ಈ ಕೆರೆಗಳ ಮೇಲೆ ಆಧಾರಿತವಾಗಿತ್ತು.

ಕೆರೆಗಳು ಕೇವಲ ನೀರಾವರಿಗೆ ಮಾತ್ರ ಮೀಸಲಾಗಿರಲಿಲ್ಲ; ಮೀನುಗಾರಿಕೆ, ಜಾನುವಾರುಗಳ ಕುಡಿಯುವ ನೀರು, ಬಟ್ಟೆ ತೊಳೆಯುವುದು ಹಾಗೂ ಗ್ರಾಮದ ಧಾರ್ಮಿಕ ಉತ್ಸವಗಳ ಕೇಂದ್ರಗಳಾಗಿದ್ದವು. ನೀರಗಂಟಿ, ತಲಾಟಿ ಮುಂತಾದ ಸಾಂಪ್ರದಾಯಿಕ ವ್ಯವಸ್ಥೆಗಳು ನೀರನ್ನು ನ್ಯಾಯಯುತವಾಗಿ ಹಂಚುತ್ತಿದ್ದವು.

ಕರ್ನಾಟಕದ ಭೂಪ್ರಕೃತಿಗೆ ತಕ್ಕಂತೆ ಒಂದು ಕೆರೆ ತುಂಬಿ ಕೋಡಿ ಬಸಿದಾಗ, ಆ ನೀರು ನೈಸರ್ಗಿಕ ಕಾಲುವೆಗಳ ಮೂಲಕ ಹರಿದು ಕೆಳಗಿನ ಮತ್ತೊಂದು ಕೆರೆಯನ್ನು ಸೇರುವ ಅದ್ಭುತ ಎಂಜಿನಿಯರಿಂಗ್ ವ್ಯವಸ್ಥೆ ನಮ್ಮಲ್ಲಿದೆ. ಕೆರೆಯ ನೀರನ್ನು ನಿಯಂತ್ರಿಸಲು ಕಲಾ ನೈಪುಣ್ಯತೆಯಿಂದ ಕೂಡಿದ 'ತೂಬು'ಗಳನ್ನು ಮತ್ತು ಹೆಚ್ಚುವರಿ ನೀರು ಹೊರಹೋಗಲು ಕಲ್ಲುಗಳಿಂದ 'ಕೋಡಿ'ಗಳನ್ನು ನಿರ್ಮಿಸಲಾಗುತ್ತಿತ್ತು.

ಇಂದಿಗೂ ಸಹ ಕೆರೆಗಳು ಕರ್ನಾಟಕದಲ್ಲಿ ಮಳೆ ನೀರು ಸಂಗ್ರಹಿಸುವ ಅತಿದೊಡ್ಡ ರಚನೆಗಳಾಗಿವೆ. ಇತ್ತೀಚಿನ ವರ್ಷಗಳಲ್ಲಿ ನದಿ ನೀರನ್ನು ತುಂಬಿಸುವ ಸಲುವಾಗಿಯೂ ಇವು ಬಳಕೆಯಾಗುತ್ತಿರುಉದನ್ನು ಕಾಣಬಹುದು.

ತಲಪರಿಗೆಗಳ ತಲೆಮಾರು

ನೆಲದಲ್ಲಿ ಇಂಗಿದ ಮಳೆ ನೀರನ್ನು ಅಗತ್ಯವಿದ್ದಾಗ ನೀಡುವ ತಲಪರಿಗೆಗಳು ಕರ್ನಾಕಟಕದ ಕೆಲವೇ ಜಿಲ್ಲೆಗಳ್ಲಿರುವ ವಿಶಿಷ್ಟ ಜಲಮೂಲ. ನೋಡಿದ ತಕ್ಷಣ ಒಂದು ಸಾಧಾರಣ ನೀರಿನ ಗುಂಡಿ ಇಲ್ಲವೇ ಪುಟ್ಟ ಬಾವಿ ಎನಿಸುತ್ತದೆ. ಕಲ್ಯಾಣಿ, ಪುಷ್ಕರಣಿಗಳಂತೆ ಭವ್ಯ ಆಕಾರವಾಗಲೀ, ಕಲಾತ್ಮಕ ಕಲ್ಲು ಕಟ್ಟಣೆಯಾಗಲೀ ಇರುವುದಿಲ್ಲ, ತೆರೆದ ಬಾವಿಗಳಿಗಿರುವ ಉದ್ದ-ಅಗಲ, ಆಳವೂ ಇರುವುದಿಲ್ಲ. ಆದರೆ ಆ ಪುಟ್ಟ-ಪುಟ್ಟ ಜಲಸಂಗ್ರಹಾಗಾರಗಳು ನೂರಾರು ಎಕರೆಗೆ ನೀರುಣಿಸುವ ಸಾಮರ್ಥ್ಯವುಳ್ಳವು. ಬೇಸಿಗೆ ಬೆಳೆಗೆ ಮತ್ತು ಇತರ ಉಪಯೋಗಗಳಿಗೆ ಅವೇ ಆಧಾರ. ತುಮಕೂರು ಜಿಲ್ಲೆಯ ಪಾವಗಡ, ಮಧುಗಿರಿ, ಕೊರಟಗೆರೆ, ಶಿರಾ ಹಾಗೂ ಕೋಲಾರ ಜಿಲ್ಲೆಗಳ ಕೆಲವು ಭಾಗದ ಹಳೆ ತಲೆಮಾರಿನ ರೈತರಿಗೆ ತಲಪರಿಗೆ ಅತ್ಯಂತ ಪರಿಚಿತ ಪದ. ‘ತಲಪರಿಗೆ ನೀರಾವರಿ, ತಲಪರಿಗೆ ಬೇಸಾಯ’ ಎಂಬ ಪದವೇ ಈ ಭಾಗದಲ್ಲಿ ಚಾಲ್ತಿಯಲ್ಲಿದೆ. ʼತಲಪರಿಗೆʼ ಹೆಸರಿನ ಒಂದು ಹಳ್ಳಿಯನ್ನೂ ತುಮಕೂರಿನ ಹೊರವಲಯದಲ್ಲಿ ಕಾಣಬಹುದು. ಆಂಧ್ರದ ಅನಂತಪುರ, ಕಡಪ, ಕಲ್ಯಾಣ ದುರ್ಗಗಳಲ್ಲಿಯೂ ಸಹ ತಲಪರಿಗೆಗಳಿರುವ ಮಾಹಿತಿ ಇದೆ.

ಕಟ್ಟಗಳ ಸುತ್ತಾ..

ಕರಾವಳಿಯಲ್ಲಿ ಪರಿಚಿತವಾದ ಕಟ್ಟಗಳ ಬಗ್ಗೆ ಹೇಳುವುದಾದರೆ; ನದಿ, ಹಳ್ಳಗಳಲ್ಲಿ ನೀರಿನ ಹರಿವು ಕಡಿಮೆಯಾದಾಗ ಅವುಗಳಿಗೆ ಅಡ್ಡಲಾಗಿ ಸ್ಥಳಿಯವಾಗಿ ಸಿಗುವ ಮರದ ದಿಮ್ಮಿಗಳು, ಮರಳಿನ ಚೀಲ, ಬಿದಿರಿನ ತಡಿಕೆ ಇತ್ಯಾದಿಗಳನ್ನು ಬಳಸಿ ನೀರಿಗೆ ತಡೆ ಹಾಕಲಾಗುತ್ತದೆ. ಹೆಚ್ಚಿನ ನೀರು ಹರಿದು ಹೋಗಲು ವ್ಯವಸ್ಥೆ ಇರುತ್ತದೆ. ಈ ನೀರನ್ನು ಕಾಲುವೆಗಳ ಮೂಲಕ ಹರಿಸಿ ಕೃಷಿ, ತೋಟಗಳಿಗೆ ಬಳಸುತ್ತಾರೆ. ಬೇಸಿಗೆ ಕಾಲದಲ್ಲಿ ಇವುಗಳ ಬಳಕೆಯಾಗುತ್ತದೆ. ಮುಂದಿನ ವರ್ಷದ ಮಳೆಗಾಲಲ್ಲಿ ನೀರಿನ ಹರಿವು ಹೆಚ್ಚಾದಾಗ ಕಟ್ಟಗಳನ್ನು ತೆಗೆಯಲಾಗುತ್ತದೆ ಅಥವಾ ಅವು ನೀರಿನಲ್ಲಿ ಕೊಚ್ಚಿ ಹೋಗುತ್ತವೆ.

ಈ ವಿಶಿಷ್ಟ ಪಾರಂಪರಿಕ ಜಲತಂತ್ರಜ್ಞಾನವು ಸಮುದಾಯ ಆಧಾರಿತ. ಇತ್ತೀಚಿನ ವರ್ಷಗಳಲ್ಲಿ ನರೇಗಾ ಯೋಜನೆಯಡಿ ಕಟ್ಟಗಳನ್ನು ನಿರ್ಮಾಣ ಮಾಡುವ ಪ್ರಯತ್ನಗಳೂ ನಡೆಯುತ್ತಿವೆ.

ಗೋಕಟ್ಟೆ: ಗೋಕಟ್ಟೆಗಳು ರಾಜ್ಯದ ವಿವಿಧ ಭಾಗಗಳಲ್ಲಿ ಕಂಡುಬರುತ್ತವೆ. ಹೆಸರೇ ಹೇಳುವಂತೆ ಜಾನುವಾರುಗಳಿಗೆ ನೀರುಣಿಸುವುದು ಇವುಗಳ ಕೆಲಸ. ಕಾಡು, ಬಯಲು, ಹುಲ್ಲುಗಾವಲು, ಹಳ್ಳಿಗಳ ಹತ್ತಿರ ಇವುಗಳು ಹೆಚ್ಚಾಗಿರುತ್ತವೆ. ಪುಟ್ಟ ಕೆರೆಯಂತಹ ರಚನೆಗಳು. ಜಾನುವಾರುಗಳು ಇಳಿಯಲು ಸಹಾಯವಾಗುವಂತೆ ನಿರ್ಮಿಸಲಾಗಿರುತ್ತದೆ.

ಜೀವಾದಿಗಳ ಬಾಯಾರಿಕೆ ತಣಿಸುವುದು, ಅಂತರ್ಜಲ ಮರುಪೂರಣಗೊಳಿಸುವುದು ಗೋಕಟ್ಟೆಗಳ ಮುಖ್ಯ ಕೆಲಸವಾದರೂ ಸಹ ಕೆಲವೆಡೆ ಅವುಗಳಿಂದ ಸಣ್ಣ ಪ್ರಮಾಣದ ಕೃಷಿಯನ್ನೂ ಮಾಡುತ್ತಾರೆ. ಕಟ್ಟೆಯ ನೀರು ಹೊತ್ತೊಯ್ದು ತರಕಾರಿ, ಸೊಪ್ಪು, ಹೂ ಬೆಳೆಸುತ್ತಾರೆ. ತುಮಕೂರು ಭಾಗದಲ್ಲಿ ಕರೆಮಗೆಯಲ್ಲಿ ನೀರು ಹೊತ್ತೊಯ್ದು ತೆಂಗಿನ ಸಸಿ ಹಾಗೂ ಎಲೆ ತೋಟ ಉಳಿಸಿಕೊಂಡ ಉದಾಹರಣೆಗಳನ್ನೂ ಕಾಣಬಹುದು.

ಕಲ್ಯಾಣಿಗಳ ವ್ಯವಸ್ಥೆ

ಕಲ್ಯಾಣಿಗಳು ಬಹುತೇಕ ದೇವಾಲಯಗಳು, ಮಠಗಳು ಅಥವಾ ಶ್ರದ್ಧಾಕೇಂದ್ರಗಳ ಬಳಿ ಕಂಡುಬರುತ್ತವೆ. ಇವುಗಳ ನೀರು ದೇವರ ಕೆಲಸಕ್ಕೆ ಹಾಗೂ ಕುಡಿಯುವ ಸಲುವಾಗಿ ಬಳಸುವುದು ಹೆಚ್ಚು. ರಾಜ್ಯದಲ್ಲಿ ಸಾವಿರಾರು ಕಲ್ಯಾಣಿಗಳಿವೆ. ಕೆಲವೆಡೆ ಪುಷ್ಕರಣಿ ಹಾಗೂ ಹೊಂಡ ಎಂಬ ಹೆಸರಿನಲ್ಲೂ ಕರೆಯುತ್ತಾರೆ. ಚೌಕಾಕಾರದ ರಚನೆಗಳು. ಕಲ್ಲು ಚಪ್ಪಡಿಗಳಿಂದ ಕಟ್ಟಲ್ಪಟ್ಟಿರುತ್ತವೆ. ನೋಡಲು ಆಕರ್ಷಕ. ಕೆಲವು ಅಂತರ್ಜಲವನ್ನು ಆಧರಿಸಿದ್ದರೆ ಇನ್ನು ಕೆಲವು ಮಳೆ ನೀರು ಪಡೆಯುವ ವ್ಯವಸ್ಥೆ ಇರುತ್ತದೆ. ಹಂಪೆಯ ಮಹಾನವಮಿ ದಿಬ್ಬದ ಬಳಿ ಇರುವ ʼಪುಷ್ಕರಣಿʼ ಅತ್ಯಂತ ಪ್ರಸಿದ್ಧ. ಹಾಗೆಯೇ ಚಿತ್ರದುರ್ಗದ ಕೋಟೆಯಲ್ಲಿರುವ ಸರಣಿ ಕಲ್ಯಾಣಿಗಳು ಮತ್ತು ಮೇಲುಕೋಟೆಯ ಸರಣಿ ಕಲ್ಯಾಣಿಗಳು ಗಮನಸೆಳೆಯುತ್ತವೆ.

ಕಲ್ಯಾಣಿಗಳನ್ನೂ ಸಹ ರಾಜ್ಯದ ವಿವಿಧ ಇಲಾಖೆಗಳು ನಿರ್ವಹಣೆ ಮಾಡುತ್ತಿದ್ದು ಅವುಗಳ ಪರಿಸ್ಥಿತಿ ಉತ್ತಮವಾಗಿದೆ ಎನ್ನಬಹುದು. ಮುಚ್ಚಿಹೋಗಿದ್ದ ಎಷ್ಟೋ ಕಲ್ಯಾಣಿ ಮತ್ತು ಪುಷ್ಕರಣಿಗಳನ್ನು ಕಳೆದ ಕೆಲವು ದಶಕಗಳಲ್ಲಿ ಉತ್ಖನನ ಮಾಡಲಾಗಿದೆ.

ರಾಜ್ಯ ಎಲ್ಲಾ ಭಾಗಗಳಲ್ಲಿ ಇಂತಹ ನೂರಾರು ಮಳೆ ನೀರು ಸಂಗ್ರಹಣೆಯ ಜಲಮೂಲಗಳನ್ನು ಕಾಣಬಹುದು. ಇವುಗಳ ರಕ್ಷಣೆ ಮತ್ತು ಬಳಕೆಗೆ ಇನ್ನಷ್ಟು ಉತ್ತೇಜನ ಸಿಗಬೇಕಿದೆ. ಮುಖ್ಯವಾಗಿ ಗುರುತಿಸುವ, ದಾಖಲಿಸುವ ಮತ್ತು ಪುನಃಶ್ಚೇತನಗೊಳಿಸುವ ಕೆಲಸ ನಡೆಯಬೇಕಿದೆ.

(ಲೇಖಕರು: ಅಭಿವೃದ್ದಿ ಪರ ಪತ್ರಕರ್ತ)

ವಿಜಯಪುರದ ಬಾವಡಿಗಳು ಅತ್ಯಂತ ಕಲಾತ್ಮಕ ಹಾಗೂ ಉತ್ಕ್ರಷ್ಟ ಮಾದರಿ ಜಲಸಂಗ್ರಹಾಗಾರಗಳಾಗಿವೆ. ಬಿಜಾಪುರದ ಸುಲ್ತಾನರ ಅವಧಿಯಲ್ಲಿ ನಗರಕ್ಕೆ ನೀರೊದಗಿಸಲು ನಿರ್ಮಾಣ ಮಾಡಲಾಗಿತ್ತು. ಹತ್ತಾರು ಬಾವಡಿಗಳನ್ನು ನಗರದ ವಿವಿಧ ಭಾಗಗಳಲ್ಲಿ ಕಾಣಬಹುದು. ಅಂತರ್ಜಲ ಹಾಗೂ ದೂರದ ಕೆರೆಗಳಿಂದ ಇವುಗಳಿಗೆ ನೀರೊದಗಿಸಲಾಗುತ್ತಿತ್ತು. ಸರ್ಕಾರದ ವತಿಯಿಂದ ಹಲವು ಬಾವಡಿಗಳನ್ನು ಪುನರ್ನಿರ್ಮಾಣ ಮಾಡಲಾಗಿದೆ. ರಚನಾ ವೈಶಿಷ್ಟ್ಯ ಹಾಗೂ ಬಳಕೆಯ ದೃಷ್ಟಿಯಿಂದ ಗಮನಸೆಳೆಯುವ ಇವು ಪಾರಂಪರಿಕ ಜಲಮೂಲಗಳಿಗೆ ಉತ್ತಮ ಉದಾಹರಣೆ.ಬಾವಡಿಗಳಿಗೆ ಜೀವದಾನಕರುನಾಡೋತ್ಸವ | ಇಹದ ಪರಿಮಳದ ಹಾದಿ: ಎಂ.ಎಸ್. ಆಶಾದೇವಿ ಲೇಖನಪ್ರಜಾವಾಣಿ ಕರುನಾಡೋತ್ಸವ| ಲಕ್ಷ್ಮೀಶ ಕವಿಯ 'ದೇವನೂರು'ಕರುನಾಡೋತ್ಸವ: ಕರಾವಳಿ ಅಡುಗೆಮನೆಗಳ ಕಥೆ ಹೇಳುವ ಪುರಾತನ ಇಡ್ಲಿ ಪಾತ್ರೆಗಳುಕರುನಾಡೋತ್ಸವ: ಸಹ್ಯಾದ್ರಿ ಕಣಿವೆ ಅರ್ಥೈಸಿಕೊಳ್ಳಲು ನಾವು ಸೋಲುತ್ತಿರುವುದೆಲ್ಲಿ?ಪ್ರಜಾವಾಣಿ ಕರುನಾಡೋತ್ಸವ| ‘ಭರತೇಶ ವೈಭವ’ಕ್ಕೆ ಪ್ರೇರಣೆಯಾದ ‘ನಗರೇಶ್ವರ’ಕರುನಾಡೋತ್ಸವ: ಕೆನಡಾದಿಂದ ಕನ್ನಡದವರೆಗೆ....