ಬೆಂಗಳೂರು: ‘ಸರ್ಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳಿಗೆ ದತ್ತು ನೀಡುವ ಹೆಸರಿನಲ್ಲಿ ಖಾಸಗೀಕರಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ನಿರ್ಧಾರ ಶಿಕ್ಷಣದ ಮೇಲಿನ ಸಾರ್ವಜನಿಕ ಹಕ್ಕನ್ನು ಬಂಡವಾಳದ ಹಿತಾಸಕ್ತಿಗೆ ಒಪ್ಪಿಸುವ ಪ್ರಯತ್ನ’ ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್) ಟೀಕಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಸಂಘಟನೆ ರಾಜ್ಯ ಸಮಿತಿ ಸದಸ್ಯ ಯಮನೂರು ಈಳಿಗನೂರು ಅವರು, ‘ಶಿಕ್ಷಣ ಪ್ರತಿಯೊಬ್ಬರಿಗೂ ಸಮಾನವಾಗಿ ಸಿಗಬೇಕು. ಸಾಮಾಜಿಕ ಹಕ್ಕಾಗಿ ನೋಡುವ ಬದಲು, ಲಾಭ ಗಳಿಸುವ ಮಾರುಕಟ್ಟೆಯ ಸರಕಾಗಿ ಪರಿವರ್ತಿಸಬಾರದು. ಇಂತಹ ಧೋರಣೆ ಬಂಡವಾಳಶಾಹಿ ನೀತಿಯ ಭಾಗ. ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಹಂತಹಂತವಾಗಿ ದುರ್ಬಲಗೊಳಿಸಿ, ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಹುನ್ನಾರ’ ಎಂದು ದೂರಿದ್ದಾರೆ.
‘ಶಿಕ್ಷಣದ ಖಾಸಗೀಕರಣ ಶ್ರೀಮಂತ ವರ್ಗದ ಮಕ್ಕಳಿಗೆ ಅನುಕೂಲ ಮಾಡಿಕೊಡುತ್ತದೆ. ಕಾರ್ಮಿಕರು, ಬಡವರು, ದಲಿತರು, ಆದಿವಾಸಿಗಳು ಹಾಗೂ ಶೋಷಿತ ಸಮುದಾಯಗಳ ಮಕ್ಕಳು ದುರ್ಬಲ ಶಿಕ್ಷಣ ವ್ಯವಸ್ಥೆಯನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಶಿಕ್ಷಣದಲ್ಲಿನ ವರ್ಗ ಅಸಮಾನತೆ ಮತ್ತಷ್ಟು ತೀವ್ರಗೊಳ್ಳಲಿದೆ’ ಎಂದಿದ್ದಾರೆ.
261106-51-1754655030

