ಬೆಂಗಳೂರು: ಆನೇಕಲ್ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಶಿವಣ್ಣ ಅವರನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷರಾಗಿ ನಾಮನಿರ್ದೇಶನ ಮಾಡಿರುವುದನ್ನು ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ವಕೀಲೆ ಸುಧಾ ಕಾಟ್ವ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಅನು ಶಿವರಾಮನ್‌ ನೇತೃತ್ವದ ದ್ವಿಸದಸ್ಯ ಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಸ್‌.ಉಮಾಪತಿ ಅವರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕೆಎಸ್‌ಪಿಸಿಬಿ ಅಧ್ಯಕ್ಷರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ. ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಲಾಗಿದೆ.

ಆಕ್ಷೇಪ ಏನು?: ‘ಜಲ ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆ–1974ರ ಕಲಂ 4(2)(ಎ) ಪ್ರಕಾರ, ಅಧ್ಯಕ್ಷ ಹುದ್ದೆ ಅಲಂಕರಿಸುವವರು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಜ್ಞಾನ ಅಥವಾ ಪ್ರಾಯೋಗಿಕ ಅನುಭವವನ್ನು ಹೊಂದಿರಬೇಕು. ಇಲ್ಲವೇ ಅಂತಹ ವಿಷಯಗಳನ್ನು ನಿರ್ವಹಿಸುವ ಸಂಸ್ಥೆಗಳ ಆಡಳಿತದಲ್ಲಿ ಜ್ಞಾನ ಮತ್ತು ಅನುಭವ ಪಡೆದಿರಬೇಕು. ಈ ಪ್ರಕರಣದಲ್ಲಿ ನಾಮನಿರ್ದೇಶನಕ್ಕೂ ಮುನ್ನ ಶಿವಣ್ಣ ಅವರಿಗೆ ಈ ಅರ್ಹತೆಗಳು ಇವೆಯೇ ಹೇಗೆ ಎಂಬುದನ್ನು ಸಮರ್ಪಕವಾಗಿ ಪರಿಶೀಲಿಸಿಲ್ಲ’ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

‘ಕೆಎಸ್‌ಪಿಸಿಬಿ ಅಧ್ಯಕ್ಷ, ಸದಸ್ಯರ ನಾಮನಿರ್ದೇಶನ ಹಾಗೂ ಸದಸ್ಯ ಕಾರ್ಯದರ್ಶಿಯ ನೇಮಕಾತಿಗೆ ಸಂಬಂಧಿಸಿದ 2024ರ ನಿಯಮಗಳ ಪ್ರಕಾರ, ಆಯ್ಕೆ ಸಮಿತಿಯು, ಕನಿಷ್ಠ ಮೂರು ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ (ಅವುಗಳಲ್ಲಿ ಒಂದು ಕನ್ನಡ) ಮುಕ್ತ ಜಾಹೀರಾತು ನೀಡಬೇಕು. ಆದರೆ, ಈ ಕಡ್ಡಾಯ ಕ್ರಮವನ್ನು ಅನುಸರಿಸಲಾಗಿದೆಯೇ ಎಂಬುದನ್ನು ನಾಮ ನಿರ್ದೇಶನದಲ್ಲಿ ಸ್ಪಷ್ಟಪಡಿಸಿಲ್ಲ’ ಎಂದು ದೂರಲಾಗಿದೆ.

‘ಹಿಂದಿನ ಅಧ್ಯಕ್ಷರ ರಾಜೀನಾಮೆ ಯಿಂದ ಉಂಟಾದ ಖಾಲಿ ಹುದ್ದೆ ಯನ್ನು ಭರ್ತಿ ಮಾಡಲು ಈ ನಾಮ ನಿರ್ದೇಶನ ಮಾಡಿದ್ದರೆ, ಕಾಯ್ದೆಯ ಕಲಂ 5(6)ರ ಅನ್ವಯ ಹೊಸದಾಗಿ ನಾಮನಿರ್ದೇಶನಗೊಂಡ ವ್ಯಕ್ತಿಯಅಧಿಕಾರಾವಧಿ ಹಿಂದಿನ ಅಧ್ಯಕ್ಷರಉಳಿದ ಅವಧಿಗೆ ಮಾತ್ರ ಸೀಮಿತವಾಗಿ ರುತ್ತದೆ. ಹೊಸದಾಗಿ ಪೂರ್ಣ ಮೂರು ವರ್ಷಗಳ ಅವಧಿಗೆ ನೀಡಲಾಗುವುದಿಲ್ಲ’ ಎಂಬ ಅಂಶವನ್ನೂ ಅರ್ಜಿದಾರರು ಮುನ್ನೆಲೆಗೆ ತಂದಿದ್ದಾರೆ.

261106-51-878228190