ಬೆಂಗಳೂರು: ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಯೋಜನೆ ಮತ್ತು ಕಾರ್ಯಕ್ರಮಗಳ ಮಾಹಿತಿ ಜನರಿಗೆ ಲಭ್ಯವಾಗಲಿ ಎಂಬ ಉದ್ದೇಶದಿಂದ ನಿಗಮಕ್ಕಾಗಿಯೇ ಹೊಸ ಜಾಲತಾಣ ಆರಂಭಿಸಲಾಗಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ದೇವರಾಜ ಅರಸು ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಿಗಮದ ಜಾಲತಾಣವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
‘ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದ್ದು, ನಿಗಮಕ್ಕೆ ಅಗತ್ಯ ಅನುದಾನ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸುವೆ. ಶ್ರೀ ನಾರಾಯಣ ಗುರುಗಳ ಆಶಯದಂತೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ನಾರಾಯಣ ಗುರುಗಳ ಚಿಂತನೆ ಹಾಗೂ ಆದರ್ಶಗಳನ್ನು ಸಾಕಾರಗೊಳಿಸಲು ಎಲ್ಲರೂ ಕೈಜೋಡಿಸಬೇಕು’ ಎಂದರು.
ಆರೋಗ್ಯ ಸಚಿವ ಯು.ಟಿ.ಖಾದರ್, ‘ನಿಗಮದ ಯೋಜನೆಗಳ ಫಲಾನುಭವಿಗಳಾಗಲು ಜನರು ಅಲೆಯಬೇಕಿಲ್ಲ. ಜಾಲತಾಣದಲ್ಲೇ ಸಮಗ್ರ ಮಾಹಿತಿ ಲಭ್ಯವಿದ್ದು, ಅದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು.
ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ, ಶಾಸಕ ಬಸನಗೌಡ ತುರವೀಹಾಳ, ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಹಿಂದುಳಿದ ಸಮುದಾಯದ ಮುಖಂಡ ರವಿ ಬೋಸರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
261106-51-950489266

