ಬೆಂಗಳೂರು: ವಿಶೇಷ ಸಮಗ್ರ ಪರಿಷ್ಕರಣೆಯ ಅಂತಿಮ ಮತದಾರರ ಪಟ್ಟಿಯಿಂದ ಹೊರಗಿಡಲಾದ 75.53 ಲಕ್ಷ ಮತದಾರರು ಯಾರು ಎಂಬ ಪ್ರಶ್ನೆ ಈಗ ಎದುರಾಗಿದ್ದರೆ, ಇವರಲ್ಲಿ ಬಹುತೇಕರು ಹೊರರಾಜ್ಯದ ಮತದಾರರು ಎನ್ನುತ್ತಾರೆ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು.
ಈ ಹೊರರಾಜ್ಯದ ಮತದಾರರು ರಾಜ್ಯದಲ್ಲಿ ಚುನಾವಣೆ ವೇಳೆಗೆ ಮತ್ತೆ ಇಲ್ಲಿ ನೋಂದಣಿ ಮಾಡಿಸಬಹುದು ಎಂಬ ಅನುಮಾನ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಗಳಿಗೂ ಇದೆ.
ಎಸ್ಐಆರ್ನ ಭಾಗವಾಗಿ ಆಗಸ್ಟ್ 24ರಂದು ಪ್ರಕಟವಾದ ಕರಡು ಮತದಾರರ ಪಟ್ಟಿಯಿಂದ 1.08 ಕೋಟಿ ಮತದಾರರನ್ನು ಎಎಸ್ಡಿಡಿಒ (ಪತ್ತೆಯಾಗದ, ಶಾಶ್ವತ ಸ್ಥಳಾಂತರ, ಮೃತ, ಒಂದಕ್ಕಿಂತ ಹೆಚ್ಚು ಕಡೆ ನೋಂದಣಿ ಮಾಡಿಸಿದ ಮತ್ತು ಗಣತಿ ನಮೂನೆಗೆ ಸಹಿ ಮಾಡದ) ಎಂದು ವರ್ಗೀಕರಿಸಿ, ಹೊರಗಿಡಲಾಗಿತ್ತು. ಈ ಪೈಕಿ 16.39 ಲಕ್ಷ ಮತದಾರರನ್ನು ಮೃತ ಮತ್ತು 7.09 ಲಕ್ಷ ಮಂದಿಯನ್ನು ಒಂದಕ್ಕಿಂತ ಹೆಚ್ಚುಕಡೆ ನೋಂದಣಿ ಎಂದು ವರ್ಗೀಕರಿಸಲಾಗಿತ್ತು. ಇದರ ಹೊರತಾಗಿ 19.09 ಲಕ್ಷ ಪತ್ತೆಯಾಗದ, 65.45 ಲಕ್ಷ ಶಾಶ್ವತ ಸ್ಥಳಾಂತರ ಎಂದು ಗುರುತಿಸಲಾಗಿತ್ತು. ಈ ಎರಡು ವರ್ಗದ ಮತದಾರರ ಸಂಖ್ಯೆ 84.46 ಲಕ್ಷದಷ್ಟಿತ್ತು.
‘ಪತ್ತೆಯಾಗದ ಮತ್ತು ಶಾಶ್ವತ ಸ್ಥಳಾಂತರವಾದ ಎಂದು ವರ್ಗೀಕರಿಸಿದವರು ನೈಜ ಮತದಾರರೇ ಆಗಿದ್ದರೆ, ಮರು ಸೇರ್ಪಡೆಗೆ ಅರ್ಜಿ ಸಲ್ಲಿಸಬೇಕಿತ್ತು. ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಕನಿಷ್ಠ 80 ಲಕ್ಷ ಮತದಾರರಾದರೂ ಅರ್ಜಿ ಸಲ್ಲಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಹೊಸ ನೋಂದಣಿ, ವಿವರ ತಿದ್ದುಪಡಿ ಮತ್ತು ಪಟ್ಟಿಯಿಂದ ಕೈಬಿಡುವಂತೆ ಸಲ್ಲಿಕೆಯಾಗಿದ್ದು ಒಟ್ಟು 26.23 ಲಕ್ಷ ಅರ್ಜಿಗಳಷ್ಟೆ. ಈ ಪೈಕಿ ಅಂತಿಮ ಪಟ್ಟಿಗೆ ಸೇರಿಸಲು ಸಾಧ್ಯವಾಗಿದ್ದು 10.08 ಲಕ್ಷ ಮಂದಿಯನ್ನು ಮಾತ್ರ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ.
‘20.38 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸೆಪ್ಟೆಂಬರ್ 23ರ ಗಡುವಿಗಿಂತ ಮೊದಲು ಸಲ್ಲಿಕೆಯಾದ 10.08 ಲಕ್ಷ ಅರ್ಜಿಗಳಷ್ಟೇ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಉಳಿದ ಅರ್ಜಿಗಳನ್ನು ಮುಂದಿನ ಪರಿಷ್ಕರಣೆಗಾಗಿ ಕಾಯ್ದಿರಿಸಲಾಗಿದೆ. ಇದರ ಹೊರತಾಗಿ 3.30 ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 2.55 ಲಕ್ಷ ಅರ್ಜಿಗಳನ್ನು ತಡೆಹಿಡಿಯಲಾಗಿದೆ. ಈ ಎಲ್ಲ ಅರ್ಜಿಗಳನ್ನು ಪರಿಗಣಿಸಿದರೂ, ಒಂದು ಕೋಟಿ ಮತದಾರರ ಪೈಕಿ 75 ಲಕ್ಷದಷ್ಟು ಮತದಾರರು ಅರ್ಜಿಯನ್ನು ಸಲ್ಲಿಸಿಯೇ ಇಲ್ಲ. ಇದರಲ್ಲಿ, 5 ಲಕ್ಷದಷ್ಟು ಮತದಾರರು ಮಾಹಿತಿ ಕೊರತೆಯ ಕಾರಣಕ್ಕೆ ಅರ್ಜಿ ಸಲ್ಲಿಸಿಲ್ಲ ಎಂದು ಪರಿಗಣಿಸಿದರೂ, 70 ಲಕ್ಷದಷ್ಟು ಮತದಾರರು ಪತ್ತೆಯಾಗಿಯೇ ಇಲ್ಲ’ ಎಂದು ಮಾಹಿತಿ ನೀಡಿವೆ.
‘ಹೊಸ ಸೇರ್ಪಡೆ, ವಿವರ ತಿದ್ದುಪಡಿಗಾಗಿ ಸಲ್ಲಿಸಲಾದ ಅರ್ಜಿಗಳಲ್ಲಿ ತಿರಸ್ಕರಿಸಲಾದ ಮತ್ತು ತಡೆ ಹಿಡಿಯಲಾದ ಅರ್ಜಿಗಳ ಪೈಕಿ ಬಹುತೇಕವು ಸುಳ್ಳು ಹಾಗೂ ತಪ್ಪು ಮಾಹಿತಿಯಿಂದ ಕೂಡಿದ್ದವು. ಮತದಾರರು ಇಲ್ಲದೇ ಇದ್ದ ವಿಳಾಸ, ಮನೆಗಳೇ ಇಲ್ಲದ ನಿವೇಶನಗಳ ವಿಳಾಸ ನೀಡಿ ಅರ್ಜಿ ಸಲ್ಲಿಸಲಾಗಿತ್ತು. ಬೇರೆ ರಾಜ್ಯಗಳಲ್ಲಿ ಈಗಾಗಲೇ ನೋಂದಣಿಯಾಗಿರುವವರ ಅರ್ಜಿಗಳನ್ನೂ ಸಲ್ಲಿಸಲಾಗಿತ್ತು. ಒಟ್ಟಾರೆಯಾಗಿ ಅನರ್ಹ ಮತದಾರರನ್ನು ಮತ್ತೆ ಪಟ್ಟಿಗೆ ಸೇರಿಸಲು ಯತ್ನಿಸಲಾಗಿತ್ತು. ಪ್ರತಿ ಅರ್ಜಿಗಳ ಜತೆಗೆ ಇರುವ ದಾಖಲೆಗಳನ್ನು ಪರಿಶೀಲಿಸಿ, ಮನೆಗೆ ಭೇಟಿ ನೀಡಿದ ಕಾರಣಕ್ಕೆ ಅವರು ನೈಜ ಮತದಾರರಲ್ಲ ಎಂಬುದು ಪತ್ತೆಯಾಗಿತ್ತು. ಹೊಸದಾಗಿ ನೋಂದಣಿ ಮಾಡಿಸಲು ಸಲ್ಲಿಸಲಾಗಿದ್ದ ಅರ್ಜಿಗಳ ಪೈಕಿ ಇಂತಹ 83 ಸಾವಿರ ಅರ್ಜಿಗಳನ್ನು ಗುರುತಿಸಲಾಗಿದೆ’ ಎಂದು ವಿವರಿಸಿವೆ.
‘ಗಣತಿ ನಮೂನೆ ವಿತರಣೆ ಹಂತದಲ್ಲಿಯೇ ಲಕ್ಷಾಂತರ ಮತದಾರರು ಹೊರ ರಾಜ್ಯಗಳಲ್ಲಿ ನೋಂದಣಿ ಆಗಿರುವುದು ಪತ್ತೆಯಾಗಿತ್ತು. ಕೆಲವು ಮತದಾರರು ಮೂರು–ನಾಲ್ಕು ರಾಜ್ಯಗಳಲ್ಲಿ ಎಪಿಕ್ ಸಂಖ್ಯೆ ಹೊಂದಿದ್ದರು. ತಾಂತ್ರಿಕ ಕಾರಣಗಳಿಂದ ಅವರನ್ನು ‘ಒಂದಕ್ಕಿಂತ ಹೆಚ್ಚು ಕಡೆ ನೋಂದಣಿ’ ಎಂದು ವರ್ಗೀಕರಿಸಲು ಸಾಧ್ಯವಾಗಿಲ್ಲ. ಅಂತಹವರನ್ನು ‘ಪತ್ತೆಯಾಗದ ಮತ್ತು ಶಾಶ್ವತ ಸ್ಥಳಾಂತರ’ ಎಂದೇ ವರ್ಗೀಕರಿಸಬೇಕಾಯಿತು. ವಾಸ್ತವದಲ್ಲಿ ಅವರೆಲ್ಲರೂ ಹೆಚ್ಚು ಕಡೆ ನೋಂದಣಿ ಮಾಡಿಸಿರುವ ಮತದಾರರೇ ಆಗಿದ್ದಾರೆ’ ಎಂದು ತಿಳಿಸಿವೆ.
‘ಹಾವೂ ಸಾಯಬಾರದು, ಕೋಲೂ ಮುರಿಯಬಾರದು’
‘ಎಸ್ಐಆರ್ಗೂ ಮೊದಲು ಇಂತಹ ಮತದಾರರನ್ನು ಪತ್ತೆಮಾಡಲು ಸಾಧ್ಯವಿರಲಿಲ್ಲ. ಎಸ್ಐಆರ್ಗಾಗಿ ರೂಪಿಸಿದ ತಂತ್ರಾಂಶದಲ್ಲಿ ಅಂತಹವರನ್ನು ಪತ್ತೆಮಾಡಲು ಅವಕಾಶವಿದೆ. ಆದರೆ ಇಲ್ಲೂ ಒಂದು ಲೋಪವಿದೆ. ಈ ಮತದಾರರು ತಮ್ಮ ರಾಜ್ಯಗಳಲ್ಲಿ ಚುನಾವಣೆ ನಡೆದಾಗ ಅಲ್ಲಿ ಮತದಾನ ಮಾಡುತ್ತಾರೆ. ಅಲ್ಲಿ ಮತಚೀಟಿಯನ್ನು ಡಿಲೀಟ್ ಮಾಡಿಸಿ, ಮತ್ತೆ ಇಲ್ಲಿ ನೋಂದಣಿ ಮಾಡಿಸುವ ಸಾಧ್ಯತೆ ಇದೆ. ಇಲ್ಲಿ ಜಿಬಿಎ ಚುನಾವಣೆಗೂ ಮುನ್ನವೇ ಲಕ್ಷಾಂತರ ಮತದಾರರು ಹೊಸ ನೋಂದಣಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಯೊಬ್ಬರು ಸಂಶಯ ವ್ಯಕ್ತಪಡಿಸಿದರು.
‘ಒಬ್ಬರೇ ಮತದಾರರು ಒಂದು ರಾಜ್ಯದಲ್ಲಿ ಮತದಾನ ಮಾಡಿದ ಬಳಿಕ, ಪಟ್ಟಿಯಿಂದ ತೆಗೆದುಹಾಕುವ ಮತ್ತು ನಂತರ ಬೇರೊಂದು ರಾಜ್ಯದಲ್ಲಿ ನೋಂದಣಿ ಮಾಡಿಸುವುದನ್ನು ಪತ್ತೆ ಮಾಡುವ ಯಾವುದೇ ವ್ಯವಸ್ಥೆ ಈಗ ಚುನಾವಣಾ ಆಯೋಗದ ಬಳಿ ಇಲ್ಲ. ಈ ಒಂದು ಲೋಪದ ಕಾರಣಕ್ಕೆ ಇಡೀ ಎಸ್ಐಆರ್ ಪ್ರಕ್ರಿಯೆಯೇ ವ್ಯರ್ಥ
ವಾದಂತಾಗುತ್ತದೆ. ಇಡೀ ಎಸ್ಐಆರ್ ಒಂದು ರೀತಿಯಲ್ಲಿ ‘ಹಾವೂ ಸಾಯಬಾರದು, ಕೋಲೂ ಮುರಿಯಬಾರದು’ ಎಂಬಂತಿದೆ’ ಎಂದು ಹೇಳಿದರು.

