ವಿದೇಶಗಳಿಂದ ಅಧ್ಯಯನಕ್ಕೆ ಬರುವವರು, ಇಂಗ್ಲಿಷ್ ಭಾಷೆಯಲ್ಲೇ ಮಾಹಿತಿ ಹೆಕ್ಕಲು ಪ್ರಯತ್ನಿಸುತ್ತಾರೆ. ಆದರೆ, ಅಮೆರಿಕದ ವಿಕ್ಕಿ ಬೆಲ್ಟರ್ ಎಂಬ ಮಹಿಳೆ ಅವರೆಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ.

ಬೆಂಗಳೂರಿನ ಕೆರೆಗಳ ಸಂಶೋಧನೆಗೆಂದು ಪ್ರವಾಸ ಕೈಗೊಂಡಿದ್ದ ಅವರು, ಇಲ್ಲಿನ ಜನರ ಜೊತೆ ಬೆರೆಯಲು ಕನ್ನಡದಲ್ಲಿ ಓದಲು, ಬರೆಯಲು, ಮಾತನಾಡಲು ಕಲಿತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾದ ವರದಿ ತಿಳಿಸಿದೆ.

ಬೆಂಗಳೂರಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್, ಹಿಂದಿ ಸೇರಿದಂತೆ ಹಲವು ಭಾಷೆಗಳು ಬಳಕೆಯಲ್ಲಿವೆ. ಆದರೆ, ಕನ್ನಡ ನೆಲದಲ್ಲಿ ವಾಸಿಸುವವರು ಕನ್ನಡ ಕಲಿಯಬೇಕು ಎಂಬ ಚರ್ಚೆ ನಡೆಯುತ್ತಿರುವಾಗ, ವಿದೇಶದಿಂದ ಬಂದ ಮಹಿಳೆಯೊಬ್ಬರು ಕನ್ನಡ ಕಲಿಯಲು ತೋರಿದ ಆಸಕ್ತಿ ಗಮನ ಸೆಳೆಯುತ್ತಿದೆ.

ಅಮೆರಿಕದ ಟೆಕ್ಸಾಸ್‌ನ ಆಸ್ಟಿನ್ ಮೂಲದ ವಿಕಿ, ತಮ್ಮ ಶೈಕ್ಷಣಿಕ ಸಂಶೋಧನೆಯ ಭಾಗವಾಗಿ ಬೆಂಗಳೂರಿಗೆ ಬಂದವರು. ಕೆರೆಗಳ ಅಧ್ಯಯನದಲ್ಲಿ ಆಸಕ್ತಿ ಹೊಂದಿರುವ ಅವರು, ಬೆಂಗಳೂರಿನ ಬೆನ್ನಿಗಾನಹಳ್ಳಿ ಕೆರೆಯ ಕುರಿತು ಸಂಶೋಧನೆ ನಡೆಸುವ ಸಂದರ್ಭದಲ್ಲಿ ಇಲ್ಲಿನ ಜನಜೀವನ, ಸಂಸ್ಕೃತಿ ಮತ್ತು ಭಾಷೆಯೊಂದಿಗೆ ನಂಟು ಬೆಳೆಸಿಕೊಂಡರು.

ಸ್ಥಳೀಯರೊಂದಿಗೆ ನಂಟು

ಬೆಂಗಳೂರಿಗೆ ಬರುವ ಮೊದಲು ವಿಕಿ ಅವರಿಗೆ ಕನ್ನಡದ ಒಂದೇ ಒಂದು ಪದವೂ ಗೊತ್ತಿರಲಿಲ್ಲ. ಆದರೆ, ಸ್ಥಳೀಯರೊಂದಿಗೆ ಸಂವಹನ ನಡೆಸಲು ಕನ್ನಡ ಕಲಿಯುವುದು ಅಗತ್ಯ ಎಂಬುದನ್ನು ಅವರು ಅರಿತುಕೊಂಡರು.ಈ ನಿಟ್ಟಿನಲ್ಲಿ ಬೆಂಗಳೂರಿನ ನೈಲ್ ಇನ್‌ಸ್ಟಿಟ್ಯೂಟ್ ಆಫ್ ಲ್ಯಾಂಗ್ವೇಜಸ್ ಆ್ಯಂಡ್ ಎಜುಕೇಷನ್‌ನಲ್ಲಿ ಭಾಷೆ ಕಲಿಯಲು ಆರಂಭಿಸಿದರು. ಸುಮಾರು ಮೂರು ತಿಂಗಳಲ್ಲಿ ಮಾತನಾಡುವುದನ್ನು ಕಲಿತರು. ಆನ್‌ಲೈನ್ ಭಾಷಾ ಕಲಿಕಾ ವೇದಿಕೆಗಳ ನೆರವನ್ನೂ ಪಡೆದರು. ಈಗ ಕನ್ನಡದಲ್ಲಿ ಮಾತನಾಡುವುದಷ್ಟೇ ಅಲ್ಲದೆ, ಓದುವ ಮತ್ತು ಬರೆಯುವುದನ್ನೂ ರೂಢಿಸಿಕೊಂಡಿದ್ದಾರೆ.

ಪೋಸ್ಟ್ ಆಫೀಸ್‌ನಲ್ಲಿ ಕನ್ನಡದ ಸಿಹಿ

ಅಮೆರಿಕದಲ್ಲಿರುವ ಅವರ ತಾಯಿ ಬೆಂಗಳೂರಿಗೆ ಪಾರ್ಸೆಲ್ ಕಳುಹಿಸಿದ್ದರು. ಅದನ್ನು ಪಡೆಯಲು ವಿಕಿ ಅಂಚೆ ಕಚೇರಿಗೆ ತೆರಳಿದ್ದರು. ಆಗ ಅಲ್ಲಿನ ಸಿಬ್ಬಂದಿಯೊಂದಿಗೆ ಕನ್ನಡದಲ್ಲೇ ಮಾತನಾಡಲು ಆರಂಭಿಸಿದ್ದರು. ಅಮೆರಿಕದ ಮಹಿಳೆಯೊಬ್ಬರು ಇಷ್ಟು ಚೆನ್ನಾಗಿ ಕನ್ನಡ ಮಾತನಾಡುತ್ತಿರುವುದನ್ನು ಕಂಡು ಸಿಬ್ಬಂದಿ ಅಚ್ಚರಿಗೊಂಡಿದ್ದರು. ಸಿಹಿ ನೀಡಿ ಸತ್ಕರಿಸಿದ್ದರು.

ಆಟೊ ಚಾಲಕರೊಂದಿಗೂ ಕನ್ನಡದಲ್ಲೇ ಮಾತು

ಯಾವುದೇ ಒಂದು ಭಾಷೆ ಕಲಿಯುವ ಸಂದರ್ಭ ಆರಂಭದಲ್ಲಿ ತಪ್ಪುಗಳಾಗಬಹುದು ಎಂಬ ಭಯ ಸಹಜ. ಆದರೆ, ಆ ಭಯವನ್ನು ಬದಿಗಿಟ್ಟು ಮಾತನಾಡಲು ಪ್ರಯತ್ನಿಸುವುದು ಮುಖ್ಯ ಎಂಬುದು ವಿಕಿ ಅವರ ಅಭಿಪ್ರಾಯ. ತಪ್ಪುಗಳಾದರೂ ಅದನ್ನು ತಿದ್ದುವ ಮೂಲಕ ಬೆಂಗಳೂರಿನ ಜನ ಪ್ರೋತ್ಸಾಹಿಸಿದರು.ಈಗ ಆಟೊ ಚಾಲಕರು ಸೇರಿದಂತೆ ಎಲ್ಲರ ಜೊತೆ ಸ್ಥಳೀಯರ ರೀತಿಯೇ ಕನ್ನಡ ಮಾತನಾಡಲು ಕಲಿತಿದ್ದೇನೆ ಎಂದಿದ್ದಾರೆ.

ವಿಕಿ ಕನ್ನಡ ಕಲಿಕೆಯ ಕಥೆ ಇತರರಿಗೂ ಪ್ರೇರಣೆಯಾಗಿದೆ. ಬೆನ್ನಿಗಾನಹಳ್ಳಿ ಕೆರೆ ಸಮುದಾಯ ಅಭಿವೃದ್ಧಿ ಟ್ರಸ್ಟ್‌ ಜೊತೆ ಕೆಲಸ ಮಾಡುತ್ತಿದ್ದ ಪರಿಸರ ಕಾರ್ಯಕರ್ತ ಎನ್.ಎಚ್. ಸುಬ್ರಮಣಿಯನ್, ವಿಕಿ ಅವರ ಕನ್ನಡ ಪ್ರೀತಿಯಿಂದ ಪ್ರಭಾವಿತರಾಗಿದ್ದಾರೆ.ಈ ಮೂಲಕ ತಮ್ಮ ಬಡಾವಣೆಯ ಇತರ ಕನ್ನಡೇತರರಿಗೂ ಕನ್ನಡ ಕಲಿಸುವ ಕಾಯಕ ಶುರು ಮಾಡಿದ್ದಾರೆ.

ಜಯನಗರ ಗ್ಯಾರೇಜ್‌ನಲ್ಲಿ ಹುಟ್ಟಿದ ಆಲೋಚನೆ: WildCraft ಬ್ರಾಂಡ್ ಬೆಳೆದಿದ್ದೇ ರೋಚಕಕನ್ನಡಿಗನ ಸಾಧನೆ; ಸಮಸ್ಯೆಯನ್ನೇ ಅವಕಾಶ ಮಾಡಿಕೊಂಡು ಕಟ್ಟಿದ ‘ಬೌನ್ಸ್’