ಹಾವೇರಿ: ‘ಹುಟ್ಟು ಅಂಗವಿಕಲ ಮತ್ತು ಮಾನಸಿಕ ಅಸ್ವಸ್ಥನಾದ 42 ವರ್ಷ ವಯಸ್ಸಿನ ಮಗನಿಗೆ ಬರುತ್ತಿದ್ದ ಮಾಸಾಶನ, ಮೂರು ವರ್ಷದಿಂದ ಸ್ಥಗಿತವಾಗಿದೆ. ನೆಲ ಬಿಟ್ಟು ಮೇಲೇಳದ ಮಗನನ್ನು ಹೊತ್ತು ಸರ್ಕಾರದ ಕಚೇರಿಗಳಿಗೆ ಹಲವಾರು ಬಾರಿ ಅಲೆದಾಡಿದರೂ ಸಮಸ್ಯೆ ಮಾತ್ರ ಪರಿಹಾರ ಆಗುತ್ತಿಲ್ಲ’

ತಾಲ್ಲೂಕಿನ ಕನಕಾಪುರ ನಿವಾಸಿ, ಅಂಗವಿಕಲ ರಾಜಪ್ಪ ಕೋಟ್ಯಾಳ ಅವರತಂದೆ ಹನುಮಪ್ಪ ಅವರ ನೋವಿನ ಮಾತಿದು. ಪತ್ನಿ ಹಾಲಮ್ಮ ಜೊತೆ ಪ್ರತಿದಿನ ಅಧಿಕಾರಿಗಳನ್ನು ಭೇಟಿಯಾಗು ವುದೇ, ಅವರ ನಿತ್ಯದ ಕಾಯಕವಾಗಿದೆ.

ಮಗನ ನಿತ್ಯ ಕರ್ಮಗಳನ್ನು ಮಾಡಿಸುತ್ತ, ಆತನ ಆರೈಕೆಗೆ ಬದುಕನ್ನು ಮೀಸಲಿಟ್ಟಿರುವ ದಂಪತಿ ಗ್ರಾಮದಲ್ಲಿ ಕೂಲಿಗೆಲಸ ಮಾಡುತ್ತಾರೆ. ಮಗನಿಗೆ ಪ್ರತಿ ತಿಂಗಳು ಬರುತ್ತಿದ್ದ ಮಾಸಾಶನವು ಅವರಿಗೆ ಕೊಂಚ ಆಧಾರವಾಗಿತ್ತು.

2010ರಲ್ಲೇ ರಾಜಪ್ಪ ಅವರಿಗೆ ಪ್ರತಿ ತಿಂಗಳು ₹ 1,000 ಮಾಸಾಶನ (ಸದ್ಯ ₹1,400) ಮಂಜೂರಾಗಿತ್ತು. ಅದಕ್ಕೆ ಸಂಬಂಧಪಟ್ಟಂತೆ ಎಲ್ಲ ದಾಖಲೆಗಳು ಉಪ ತಹಶೀಲ್ದಾರ್‌ರಿಗೆ ಸಲ್ಲಿಕೆಯಾಗಿತ್ತು. ಆದರೆ, 2023ರಲ್ಲಿ ಏಕಾಏಕಿ ಮಾಸಾಶನ ಸ್ಥಗಿತಗೊಂಡಿತು. ಈ ಬಗ್ಗೆ ವಿಚಾರಿಸಿದಾಗ, ‘ನಿಮ್ಮ ಮಗನ ಆಧಾರ್ ಕಾರ್ಡ್ ಮಾಹಿತಿಯು ಇಲಾಖೆಯ ದಾಖಲೆಯೊಂದಿಗೆ ಹೊಂದಾಣಿಕೆ ಆಗುತ್ತಿಲ್ಲ. ಹೀಗಾಗಿ, ಮಾಸಾಶನ ಬರುವುದಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓದಲು, ಬರೆಯಲು ಗೊತ್ತಿಲ್ಲ: ‘ಅಂಗವಿಕಲ ಮತ್ತು ಮಾನಸಿಕ ಅಸ್ವಸ್ಥ ಮಗನನ್ನು ಸಾಕುತ್ತಿದ್ದೇವೆ. ನಮಗೆ ಕೂಲಿಯೇ ಆಧಾರ. ಆತನ ಮಾಸಾಶನ ಸ್ಥಗಿತ ಗೊಂಡಿದ್ದರಿಂದ ಇನ್ನಷ್ಟು ಸಮಸ್ಯೆ ಆಗಿದೆ. ನಮಗೆ ಓದಲು, ಬರೆಯಲು ಬಾರದು. ಮತ್ತೊಬ್ಬರ ಬಳಿ ಅರ್ಜಿ ಬರೆಸಿ, ಕಚೇರಿಗಳಿಗೆ ಕೊಟ್ಟರೂ ಸಮಸ್ಯೆ ಬಗೆಹರಿಯುತ್ತಿಲ್ಲ’ ಎಂದು ತಾಯಿ ಹಾಲಮ್ಮ ಹೇಳಿದರು.

‘ಸರ್ಕಾರಿ ಕಚೇರಿಗಳಲ್ಲಿ ಬಡವರ ಕೆಲಸ ಬೇಗನೇ ಆಗುತ್ತಿಲ್ಲ. ಎಲ್ಲರ ಕಾಲುಮುಗಿದಿದ್ದೇವೆ. ಅಳಲು ತೋಡಿಕೊಂಡಿ ದ್ದೇವೆ. ಆದರೆ, ಯಾರೂ ಸ್ಪಂದಿಸುತ್ತಿಲ್ಲ. ಕೆಲವರು ಬೆಂಗಳೂರಿಗೆ ಹೋಗಲು ಹೇಳುತ್ತಾರೆ. ಇಂಥ ಮಗನನ್ನು ಬೆಂಗಳೂರಿಗೆ ಕರೆದೊಯ್ಯವುದು ಹೇಗೆ? ಅಲ್ಲಿ ಯಾರೂ ನಮಗೆ ಪರಿಚಿತರಿಲ್ಲ? ಯಾರನ್ನು ಭೇಟಿ ಆಗಬೇಕು ಎಂಬುದು ಗೊತ್ತಿಲ್ಲ’ ಎಂದರು.

– ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿರಾಜಪ್ಪ ಅವರ ಮಾಸಾಶನವು ತಾಂತ್ರಿಕ ಕಾರಣಗಳಿಂದ ಸ್ಥಗಿತವಾಗಿದೆ. ಸಮಸ್ಯೆ ಬೇಗನೇ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಿರುವೆ.