ಬೆಂಗಳೂರು: ರಾಜ್ಯ ಸರ್ಕಾರವು ನಾಟಕಗಳ ಪ್ರದರ್ಶನಕ್ಕೆ ಸೆನ್ಸಾರ್‌ ವಿಧಿಸಲು ಮುಂದಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ‘ರಾಜ್ಯದಲ್ಲಿ ತುರ್ತುಪರಿಸ್ಥಿತಿ 2.0 ಆರಂಭವಾಗಿದೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದಿದೆ.

ನಗರದ ವಿವಿಧ ಕಲಾಭವನ, ರಂಗಮಂದಿರದ ವ್ಯವಸ್ಥಾಪಕರಿಗೆ ನೋಟಿಸ್‌ ನೀಡಿರುವ ಪೊಲೀಸರು, ತಮ್ಮಲ್ಲಿ ಪ್ರದರ್ಶನವಾಗುವ ನಾಟಕಗಳ ಕುರಿತ ಮಾಹಿತಿ ಸಲ್ಲಿಸಿ ಎಂದು ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು,ರಂಗಕರ್ಮಿಗಳು, ಸಾಮಾಜಿಕ ಕಾರ್ಯಕರ್ತರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಸಾಮಾಜಿಕ ಸ್ವಾಸ್ಥ್ಯ, ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ನಾಟಕದ ಕಥಾವಸ್ತು, ಸಂಭಾಷಣೆ, ನಾಟಕದ ಉದ್ದೇಶ, ಸಾರ್ವಜನಿಕರಿಗೆ ನಾಟಕದ ಮೂಲಕ ನೀಡಲು ಉದ್ದೇಶಿಸಿರುವ ಸಂದೇಶ, ಪ್ರದರ್ಶನದ ದಿನಾಂಕ, ಸ್ಥಳ ಮತ್ತು ಸಮಯದ ಮಾಹಿತಿಯನ್ನು ಒದಗಿಸಬೇಕು’ ಎಂದು ಪೊಲೀಸರು ಸೂಚಿಸಿದ್ದಾರೆ.

‘ನಿರ್ದೇಶಕ, ನಿರ್ಮಾಪಕ ಮತ್ತು ಆಯೋಜಕರ ವಿವರ, ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮ, ನಾಟಕ ಪ್ರದರ್ಶನಕ್ಕೆ ಪಡೆದುಕೊಂಡಿರುವ ಅಗತ್ಯ ಅನುಮತಿ ಮತ್ತು ಪರವಾನಗಿಗಳ ದಾಖಲೆಗಳನ್ನು ಸಲ್ಲಿಸಿ’ ಎಂದು ಹೇಳಿದ್ದಾರೆ.

‘ನಾಟಕದಲ್ಲಿ ಕಾನೂನುಬಾಹಿರ ಸಂಗತಿಗಳು ಇದ್ದು, ಸಾರ್ವಜನಿಕರ ಶಾಂತಿಗೆ ಧಕ್ಕೆ ತರುವಂತಿದ್ದರೆ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಂಬಂಧಿತ ಪ್ರಾಧಿಕಾರದ ಗಮನಕ್ಕೆ ತರಲಾಗುವುದು. ಈ ವಿಚಾರದಲ್ಲಿ ಪೊಲೀಸರೊಂದಿಗೆ ಸಹಕರಿಸಿ’ ಎಂದು ನೋಟಿಸ್‌ನಲ್ಲಿ ಕೋರಲಾಗಿದೆ.

ನಗರದ ಸುಚಿತ್ರ ಸಾಂಸ್ಕೃತಿಕ ಅಕಾಡೆಮಿಯಲ್ಲಿ ಅಕ್ಟೋಬರ್‌ 31ರಂದು, ಅಡ್ಡಂಡ ಕಾರ್ಯಪ್ಪ ಅವರ ರಚನೆ ಮತ್ತು ನಿರ್ದೇಶನದ ‘ಗಾಂಧಿ ಹತ್ಯೆಯ ಸತ್ಯ’ ನಾಟಕದ ಪ್ರದರ್ಶನದ ವೇಳೆ ಅವರ ಮುಖಕ್ಕೆ ಮಸಿ ಬಳಿಯಲಾಗಿತ್ತು.

ಆ ಘಟನೆಯ ನಂತರ ಅಕಾಡೆಮಿಯಲ್ಲಿ ಪ್ರದರ್ಶನವಾದ ನಾಟಕದ ಸಂಬಂಧ ದೂರು–ಪ್ರತಿದೂರು ದಾಖಲಾಗಿತ್ತು. ಆನಂತರ ಅಕಾಡೆಮಿಯ ವ್ಯವಸ್ಥಾಪಕರಿಗೆ ನೋಟಿಸ್‌ ನೀಡಿದ್ದ ಪೊಲೀಸರು, ಮುಂದಿನ ಆದೇಶದವರೆಗೂ ಮುಂದೂಡುವಂತೆ ಸೂಚಿಸಿದ್ದರು. ಯಾವುದೇ ಪ್ರದರ್ಶನಗಳು ನಡೆದು, ಅದರಿಂದ ಕಾನೂನು ಸುವ್ಯವಸ್ಥೆಗೆ ತೊಂದರೆಯಾದರೆ ಅಕಾಡೆಮಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ಪೊಲೀಸರು ಎಚ್ಚರಿಸಿದ್ದರು.