ಬೆಂಗಳೂರು: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯಾವ ಮತದಾರರ ಪಟ್ಟಿಯನ್ನು ಪರಿಗಣಿಸಬೇಕು ಎಂಬ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ಎಸ್‌ಐಆರ್‌ಗೂ ಮೊದಲಿನ ಪಟ್ಟಿಯನ್ನು ಬಳಸಬೇಕೋ ಅಥವಾ ಎಸ್‌ಐಆರ್ ಬಳಿಕ ಹೊರ ಬಂದ ಪಟ್ಟಿಯನ್ನು ಬಳಸಬೇಕೊ ಎಂಬ ಜಿಜ್ಞಾಸೆ ನಡೆಯಿತು. ಪಕ್ಷದ ಹೈಕಮಾಂಡ್ ಜತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಸಂಪುಟ ಸಭೆಯಲ್ಲಿ ಸಚಿವರು ಈ ಕುರಿತು ತಮ್ಮ ತಮ್ಮ ಅಭಿಪ್ರಾಯ ದಾಖಲಿಸಿದ್ದು, ವಿಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ. ಎಸ್‌ಐಆರ್ ಇತರ ರಾಜ್ಯಗಳಲ್ಲಿ ಹೇಗೆ ನಡೆದಿದೆಯೋ ಗೊತ್ತಿಲ್ಲ. ಆದರೆ ನಮ್ಮಲ್ಲಿ ಬಹುತೇಕ ಸರಿಯಾಗಿಯೇ ನಡೆದಿದೆ. ಸಣ್ಣಪುಟ್ಟ ವ್ಯತ್ಯಾಸಗಳೂ ಇವೆ. ಐದೂವರೆ ಕೋಟಿ ಮತದಾರರ ಪಟ್ಟಿ ಪರಿಷ್ಕರಿಸುವಾಗ ಇವೆಲ್ಲ ಸಹಜ. ಆದ್ದರಿಂದ ಹೊಸ ಪಟ್ಟಿಯನ್ನು ಬಳಸುವುದೇ ಸೂಕ್ತ ಎಂದು ಕೆಲವು ಸಚಿವರು ಅಭಿಪ್ರಾಯ ದಾಖಲಿಸಿದರು.
ಈ ಅಭಿಪ್ರಾಯಕ್ಕೆ ಇನ್ನೂ ಕೆಲವು ಸಚಿವರು ಸಹಮತ ವ್ಯಕ್ತಪಡಿಸಲಿಲ್ಲ. ಎಸ್ಐಆರ್ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸಿ, ಈಗ ಅದನ್ನೇ ಒಪ್ಪಿಕೊಳ್ಳುವುದು ಸರಿಯಲ್ಲ. ಇದರಿಂದ ಇಂಡಿಯಾ ಕೂಟದ ಇತರ ಪಕ್ಷಗಳು ಮತ್ತು ವಿರೋಧ ಪಕ್ಷಗಳಿಗೆ ಆಹಾರವಾಗಬೇಕಾಗುತ್ತದೆ. ಹೀಗಾಗಿ, ಎಸ್‌ಐಆರ್ ಪೂರ್ವದ ಪಟ್ಟಿಯನ್ನು ಬಳಸಿಕೊಳ್ಳುವುದೇ ಸೂಕ್ತ ಎಂದು ಅವರು ತಮ್ಮ ಅಭಿಪ್ರಾಯ ಮಂಡಿಸಿದರು ಎಂದು ಮೂಲಗಳು ಹೇಳಿವೆ.
ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳಿಗೆ ಡಿಸೆಂಬರ್ ಒಳಗೇ ಚುನಾವಣೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಬೇರೆ ಕಾರಣಗಳನ್ನು ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್‌ಗೆ ಹೋದರೆ ಛೀಮಾರಿ ಹಾಕಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಚುನಾವಣೆ ನಡೆಸಲೇಬೇಕಾಗಿದೆ. ಆ ಬಳಿಕ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನೂ ನಡೆಸಬೇಕಾಗಿದೆ.
‘ಕೆಪಿಎಸ್‌ಸಿ: ನ್ಯಾಯ ಕೊಡಿಸುತ್ತೇವೆ’
‘2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ ನಡೆಸಿದ್ದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ 362 ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ತೀರ್ಮಾನದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಬಗ್ಗೆ ನಮೆಗೆಲ್ಲರಿಗೂ ಅನುಕಂಪವಿದೆ. ನ್ಯಾಯಾಲಯದಲ್ಲಿ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತೇವೆ’ ಎಂದು ಈಶ್ವರ ಖಂಡ್ರೆ ತಿಳಿಸಿದರು.
‘ಇವತ್ತಿನ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆ ಆಗಿಲ್ಲ. ಆದರೆ, ಇಷ್ಟು ವರ್ಷ ಕೆಲಸ ಮಾಡಿದವರಿಗೆ ನ್ಯಾಯ ಕೊಡಿಸಬೇಕು ಎಂಬ ಅಭಿಪ್ರಾಯ ಎಲ್ಲ ಸಚಿವರದ್ದಾಗಿದೆ. ಇವರಲ್ಲಿ ಕಳಂಕಿತರು ಯಾರು ಎಂಬ ಮಾಹಿತಿ ಇಲ್ಲ. ಹೀಗಾಗಿ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ’ ಎಂದರು.
ಆಯೋಗದ ತೀರ್ಮಾನ: ಸಚಿವ ಖಂಡ್ರೆ
‘ಯಾವ ಪಟ್ಟಿ ಬಳಸಬೇಕು ಎಂಬುದನ್ನು ರಾಜ್ಯ ಚುನಾವಣಾ ಆಯೋಗವೇ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ. ಬ್ಯಾಲೆಟ್ ಮೂಲಕ ಚುನಾವಣೆ ನಡೆಸಲಾಗುತ್ತದೆ. ಇದಕ್ಕಾಗಿ ಸರ್ಕಾರ ಹಣ ಬಿಡುಗಡೆ ಮಾಡಿದೆ’ ಎಂದು ಈಶ್ವರ ಖಂಡ್ರೆ ಹೇಳಿದರು.
ಮತದಾರರ ಪಟ್ಟಿಯ ಬಳಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಸ್ಥಳೀಯ ಸಂಸ್ಥೆ ಚುನಾವಣೆ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಯಾವ ಮತದಾರರ ಪಟ್ಟಿ ಬಳಸಬೇಕು ಎಂಬ ಚರ್ಚೆಯೂ ನಡೆಯಿತು. ಸಚಿವರು ತಮ್ಮ ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ’ ಎಂದರು.

