ನಿರ್ದೇಶಕ ನಿತೇಶ್ ತಿವಾರಿ ಅವರ ‘ರಾಮಾಯಣ‘ ಸಿನಿಮಾ ಭಾರೀ ಬಜೆಟ್ನಲ್ಲಿ ನಿರ್ಮಾಣವಾಗಿದೆ. ಈ ಚಿತ್ರದ ಜಗತ್ತನ್ನು ಕೇವಲ ಗ್ರೀನ್ ಸ್ಕ್ರೀನ್ ಮೂಲಕ ಸೃಷ್ಟಿಸಿಲ್ಲ. ಬದಲಿಗೆ ನೈಜ ಅನುಭವ ನೀಡಲು ಬೃಹತ್ ಸೆಟ್ಗಳನ್ನು ಹಾಕಲಾಗಿದೆ. ರಾವಣನ ಸಿಂಹಾಸನದಿಂದ ಹಿಡಿದು ಶೂರ್ಪಣಖಿಯ ರಥದವರೆಗೆ ಎಲ್ಲವನ್ನೂ ಕೈಯಿಂದಲೇ ನಿರ್ಮಿಸಲಾಗಿದೆ. ಆರ್ಟ್ ಡಿಪಾರ್ಟ್ಮೆಂಟ್ ಹಲವು ತಿಂಗಳು ಶ್ರಮಿಸಿ ಈ ಭವ್ಯ ಸೆಟ್ಗಳನ್ನು ಸಿದ್ಧಪಡಿಸಿದೆ.
ಮುಂಬೈನ ಫಿಲ್ಮ್ ಸಿಟಿಯಲ್ಲಿ ಈ ಸಿನಿಮಾಗಾಗಿ ಸುಮಾರು 150ಕ್ಕೂ ಹೆಚ್ಚು ಸೆಟ್ಗಳನ್ನು ನಿರ್ಮಿಸಲಾಗಿದೆ. 2024ರ ಏಪ್ರಿಲ್ ತಿಂಗಳಿನಿಂದಲೇ ಈ ನಿರ್ಮಾಣ ಕಾರ್ಯ ಪ್ರಾರಂಭವಾಗಿತ್ತು. ಪ್ರತಿಯೊಂದು ವಿನ್ಯಾಸವನ್ನು ಹಲವು ಬಾರಿ ಪರಿಶೀಲಿಸಿದ ನಂತರವೇ ಅದನ್ನು ಬಳಸಲಾಯಿತು. ನಟರು ನೈಜ ವಾತಾವರಣದಲ್ಲಿ ನಟಿಸಲಿ ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು.
ಈ ಸಿನಿಮಾದಲ್ಲಿ ಅತ್ಯಂತ ದುಬಾರಿ ವಸ್ತುವೆಂದರೆ ಅದು ರಾವಣನ ಸಿಂಹಾಸನ. ಇದನ್ನು ಮಾಡಲು ಸುಮಾರು ನಾಲ್ಕು ತಿಂಗಳು ಬೇಕಾಯಿತು. ಇದರ ಅಂದಾಜು ವೆಚ್ಚ 1 ಕೋಟಿ ರೂಪಾಯಿ. ಫೈಬರ್ನಿಂದ ಮಾಡಿದ ಈ ಸಿಂಹಾಸನಕ್ಕೆ 24 ಕ್ಯಾರಟ್ ಚಿನ್ನದ ಲೇಪನ ಮಾಡಲಾಗಿದೆ.
ಶೂರ್ಪಣಖಿಯ ರಥ ನಿರ್ಮಾಣಕ್ಕೆ ಬರೋಬ್ಬರಿ 1.5 ಕೋಟಿ ರೂಪಾಯಿ ವೆಚ್ಚವಾಗಿದೆ. ಇದು ಕೇವಲ ಪ್ರಾಪರ್ಟಿ ಆಗಿರದೆ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದರ ಜೊತೆಗೆ 24 ಅಡಿ ಎತ್ತರದ ಜಟಾಯು ಅಸ್ಥಿಪಂಜರದ ಮಾದರಿಯನ್ನು ನಿರ್ಮಿಸಲಾಯಿತು. ಇದು ನಟರು ಸರಿಯಾದ ಕಡೆ ನೋಡಿ ಸಂಭಾಷಣೆ ಹೇಳಲು ಸಹಾಯ ಮಾಡಿತು.
ಇದನ್ನೂ ಓದಿ: ಭರ್ಜರಿ ಓಪನಿಂಗ್ ಕಂಡ ‘ರಾಮಾಯಣ’; ಆದರೂ ‘ಆದಿಪುರುಷ್’ ದಾಖಲೆ ಮುರಿಯಲು ವಿಫಲ
ಇನ್ನು 50 ಅಡಿ ಅಗಲದ ಪುಷ್ಪಕ ವಿಮಾನವನ್ನು ಸ್ಟುಡಿಯೋ ಒಳಗೆ ತರಲು ಸಾಧ್ಯವಾಗಲಿಲ್ಲ. ಹಾಗಾಗಿ ಅದನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ನಿರ್ಮಿಸಲಾಯಿತು. ಲಂಕೆಯ ಸೆಟ್ ಹಾಕಲು ದಿನಕ್ಕೆ 500ರಿಂದ 600 ಕಾರ್ಮಿಕರು ಕೆಲಸ ಮಾಡಿದರು. ಪ್ರತಿ ಸೆಟ್ ಅನ್ನು ಶೂಟಿಂಗ್ಗೆ ಮುನ್ನ ನಿತೇಶ್ ತಿವಾರಿ ಖುದ್ದಾಗಿ ಪರಿಶೀಲಿಸುತ್ತಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

