ಕೊಚ್ಚಿ (ನ.6): ತನ್ನ ಚಿಕ್ಕಮ್ಮನಿಗೆ ಹುಷಾರಿಲ್ಲ ಎಂದು ಸುಳ್ಳು ಹೇಳಿ ವೈದ್ಯರೊಬ್ಬರನ್ನು ಅಪಾರ್ಟ್‌ಮೆಂಟ್‌ಗೆ ಕರೆಸಿ ಹಲ್ಲೆ ನಡೆಸಿ, ಅವರ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ನಡೆಸಿದ ಆರೋಪದಲ್ಲಿ ಪೊಲೀಸರು ಮಲಯಾಳಂ ಯುವ ನಟಿ ಅತುಲ್ಯಾ ಚಂದ್ರ(young Malayalam actress Athulya Chandra) ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ವೈದ್ಯರ ಮೇಲೆ ನಟಿ ಹಲ್ಲೆ ಮಾಡಿದ್ದು ಏಕೆ?

ವೈದ್ಯರು ನೀಡಿದ ದೂರಿನ ಪ್ರಕಾರ, ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿರುವ ಅತುಲ್ಯಾ ನ.2ರಂದು ವೈದ್ಯರಿಗೆ ಕರೆ ಮಾಡಿ ತನ್ನ ಚಿಕ್ಕಮ್ಮನಿಗೆ ಹುಷಾರಿಲ್ಲ ಎಂದು ಅಪಾರ್ಟ್‌ಮೆಂಟ್‌ಗೆ ಕರೆಸಿಕೊಂಡಿದ್ದರು. ಈ ವೇಳೆ ಅಲ್ಲಿ ನಟಿ ಸೇರಿ 12 ಮಂದಿ ಇದ್ದರು. ಅವರು ಇದ್ದಕ್ಕಿದ್ದಂತೆ ವೈದ್ಯನ ಮೇಲೆ ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೇ ಆತನ 2 ಫೋನ್, ಸ್ಮಾರ್ಟ್‌ವಾಚ್‌ ಸೇರಿದಂತೆ 3.25 ಲಕ್ಷ ರಯ. ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ, ಇದರ ಜತೆಗೆ ನಟಿಯ ಚಿಕ್ಕಮ್ಮನ ಮೇಲೆ ಲೈ ಗಿಕ ದೌರ್ಜನ್ಯ ವೆಸಗಿರುವ ಸುಳ್ಳು ಆರೋಪ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡು ಬಂಧಿಸಿದ್ದಾರೆ.

ವೈದ್ಯ ಅಪಾರ್ಟ್‌ಮೆಂಟ್‌ಗೆ ಹೋದಾಗ ಅಲ್ಲಿ ನಡೆದಿದ್ದೇ ಬೇರೆ!

ಈ ಘಟನೆ ನವೆಂಬರ್ 2 ರಂದು ನಡೆದಿದೆ. ದೂರಿನ ಪ್ರಕಾರ ನಟಿ ಅತುಲ್ಯಾ ಮತ್ತು ವೈದ್ಯ ಈಗಾಗಲೇ ಸ್ನೇಹಿತರಾಗಿದ್ದರು. ತನ್ನ ಚಿಕ್ಕಮ್ಮಗೆ ಹುಷಾರಿಲ್ಲವೆಂದು ಅಪಾರ್ಟ್‌ಮೆಂಟ್‌ಗೆ ಕರೆಸಿಕೊಂಡಿದ್ದ ನಟಿ. ಸ್ನೇಹಿತೆ ಕಾಲ್ ಮಾಡಿದ್ದರಿಂದ ಅಪಾರ್ಟ್‌ಮೆಂಟ್‌ಗೆ ಹೋಗಿದ್ದ ವೈದ್ಯರು. ಆದರೆ ಸಂಜೆ 6.30 ಕ್ಕೆ ಅಪಾರ್ಟ್ ಮೆಂಟ್‌ಗೆ ಹೋದಾಗ, ಅಲ್ಲಿನ ದೃಶ್ಯ ಕಂಡು ಶಾಕ್ ಆಗಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ಚಿಕ್ಕಮ್ಮ ಇಲ್ಲ. ಬದಲಾಗಿ ಅಲ್ಲಿ ತನಗಾಗಿ ಕಾದು ಕುಳಿತಿದ್ದ ಗ್ಯಾಂಗ್ ನೋಡಿದ್ದಾರೆ. ಫ್ಲ್ಯಾಟ್‌ ಒಳಗೆ ನಟಿ ಅತುಲ್ಯಾ ಸೇರಿದಂತೆ ಒಟ್ಟು ಹನ್ನೆರಡು ಜನರ ಗುಂಪು ಇದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಪಾರ್ಟ್‌ಮೆಂಟ್ ಒಳಗೆ ಹೋಗ್ತಿದ್ದಂತೆ ಲಾಕ್ ಮಾಡಿ ವೈದ್ಯರನ್ನು ಹೊರಗೆ ಹೋಗದಂತೆ ತಡೆದಿದ್ದಾರೆ. ಏನಾಗುತ್ತಿದೆ ಎಂದು ಡಾಕ್ಟರ್ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಬೆದರಿಕೆಯೊಡ್ಡಲು ಶುರು ಮಾಡಿದ್ದಾರೆ. ಈ ಪ್ರಕರಣದಲ್ಲಿ ಮೊದಲ ಆರೋಪಿ ಬಿಬಿನ್ ಎಂಬುವವನು ವೈದ್ಯರ ಮುಖಕ್ಕೆ ಪಂಚ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ನಂತರ ಎಲ್ಲರೂ ಸೇರಿಕೊಂಡು ವೈದ್ಯರನ್ನ ಕುರ್ಚಿಯ ಮೇಲೆ ಕೂರಿಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಂತರ ವೈದ್ಯರ ಬಳಿಯಿದ್ದ ಬೆಲೆ ಬಾಳುವ ಮೊಬೈಲ್, ಇತರೆ ವಸ್ತುಗಳನ್ನೆಲ್ಲ ಕಸಿದುಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕದ್ದ ಮೊಬೈಲ್ ಫೋನ್‌ಗಳ ಮೌಲ್ಯ ಸುಮಾರು 3 ಲಕ್ಷ ರೂ.ಗಳಷ್ಟಿತ್ತು ಎನ್ನಲಾಗಿದೆ.

ಹೇಗೋ ಅಪಾರ್ಟ್‌ಮೆಂಟ್‌ನಿಂದ ತಪ್ಪಿಸಿಕೊಂಡ ನಂತರ ವೈದ್ಯರು ಸೀದಾ ಕಡವಂತ್ರ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಪೊಲೀಸರು ಅಥುಲ್ಯಾ ಸೇರಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಒಂಭತ್ತು ಆರೋಪಿಗಳು ಪರಾರಿಯಾಗಿದ್ದು ಪತ್ತೆಕಾರ್ಯ ನಡೆಯುತ್ತಿದೆ.

ವೈದ್ಯರ ಮೇಲೆ ದ್ವೇಷಕ್ಕೆ ಕಾರಣವೇನು?

ನಟಿ ಅತುಲ್ಯಾ ಮತ್ತು ವೈದ್ಯರು ಇಬ್ಬರು ಪರಿಚಿತರು, ಸ್ನೇಹಿತರಾಗಿದ್ದು ದ್ವೇಷಕ್ಕೆ ಕಾರಣವೇನು? ಹಣಕಾಸಿನ ವಿವಾದವೇ? ಅಥವಾ ವೈಯಕ್ತಿಕ ದ್ವೇಷದಿಂದ ದಾಳಿ ಮಾಡಲಾಗಿದೆಯೇ? ಎಲ್ಲ ಆಯಾಮಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪರಿಚಿತರೆಂದರೆ ಅಪಾರ್ಟ್‌ಮೆಂಟ್‌ಗೆ, ಮನೆಗೆ ಹೋಗಿ ಚಿಕಿತ್ಸೆ ವೈದ್ಯರಿಗೆ ಈ ಘಟನೆ ಒಂದು ಪಾಠವಾಗಿದೆ.