ಬೆಂಗಳೂರು, ನವೆಂಬರ್ 02: ಕನ್ನಡ ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಹೆಮ್ಮೆಯ ಸಾರ್ವಜನಿಕ ಸ್ವಾಮ್ಯದ ಎಚ್‌ಎಂಟಿ ಸಂಸ್ಥೆಯು ಕನ್ನಡಿಗರಿಗಾಗಿ ವಿಶೇಷವಾದ ‘ಎಚ್‌ಎಂಟಿ ಕನ್ನಡಿಗ’ ಹಾಗೂ ನಾಡಿನ ಸಾಂಸ್ಕೃತಿಕ ಅಸ್ಮಿತೆಯಾದ ‘ಗಂಡಭೇರುಂಡ’ ಲಾಂಛನವಿರುವ ನೂತನ ಕೈಗಡಿಯಾರಗಳ ಸರಣಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಹೆಚ್‌ಎಂಟಿ ಮೈದಾನದಲ್ಲಿ ನಡೆದ ವರ್ಣರಂಜಿತ ಹಾಗೂ ಅದ್ಧೂರಿ ಸಮಾರಂಭದಲ್ಲಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ನೂತನ ವಾಚ್‌ಗಳನ್ನು ಲೋಕಾರ್ಪಣೆ ಮಾಡಿದರು.

30-40 ವರ್ಷಗಳ ಹಿಂದಿನ ವೈಭವ ಮರುಕಳಿಸುವ ಗುರಿ ಎಂದ ಹೆಚ್‌ಡಿಕೆ

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಇಂದು ಹೆಚ್‌ಎಂಟಿಯ ಒಟ್ಟು ನಾಲ್ಕು ಹೊಸ ಅವತರಣಿಕೆಯ ವಾಚ್‌ಗಳನ್ನು ನಾಡಿಗೆ ಸಮರ್ಪಿಸುತ್ತಿರುವುದಾಗಿ ತಿಳಿಸಿದರು. “ಒಂದು ಕಾಲದಲ್ಲಿ ‘ಭಾರತದ ಸಮಯಪಾಲಕ’ ಎಂದು ಪ್ರಖ್ಯಾತಿಯಾಗಿದ್ದ ಎಚ್‌ಎಂಟಿ ಕೈಗಡಿಯಾರಗಳು ಕನ್ನಡಿಗರ ಹೆಮ್ಮೆಯ ಪ್ರತೀಕವಾಗಿದ್ದವು. ಈ ಐತಿಹಾಸಿಕ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಮತ್ತು 30-40 ವರ್ಷಗಳ ಹಿಂದಿನ ರೀತಿಯಲ್ಲಿ ಕಾರ್ಖಾನೆ ಮತ್ತೆ ರಾರಾಜಿಸುವಂತೆ ಮಾಡಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ” ಎಂದು ಭಾವೋದ್ವೇಗದಿಂದ ತಿಳಿಸಿದರು.

📍ಬೆಂಗಳೂರು

೭೧ನೇ ಕರ್ನಾಟಕ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ರಾಷ್ಟ್ರದ ಹೆಮ್ಮೆಯ ಕಾರ್ಖಾನೆ @HMTLtd ವಿಶೇಷವಾಗಿ ತಯಾರಿಸಿರುವ #hmtಕನ್ನಡಿಗ ಎಂಬ ನೂತನ ಸರಣಿಯ 4 ಉನ್ನತ ಶ್ರೇಣಿಯ, ಅತ್ಯುತ್ತಮ ಗುಣಮಟ್ಟದ ಕೈ ಗಡಿಯಾರಗಳನ್ನು ನಾಡಿಗೆ ಸಮರ್ಪಣೆ ಮಾಡುವ ಮಹಾಭಾಗ್ಯ ನನ್ನದಾಯಿತು.

ರಾಷ್ಟ್ರದ ಗೌರವಾನ್ವಿತ ಪ್ರಧಾನಮಂತ್ರಿಗಳಾದ @narendramodi ಅವರ ದೂರದೃಷ್ಟಿ ನಾಯಕತ್ವ ಮತ್ತು ಆತ್ಮನಿರ್ಭರ ಭಾರತ ಸಂಕಲ್ಪದ ಪ್ರತೀಕವಾಗಿ #hmt ಕಾರ್ಖಾನೆ ತನ್ನ ಹಿಂದಿನ ವೈಭವದ ದಿನಗಳನ್ನು ಕಾಣಲಿದೆ ಎಂಬ ಅಚಲ ವಿಶ್ವಾಸವನ್ನು ಹೊಂದಿದ್ದೇನೆ. ಇದರ ಭಾಗವಾಗಿ ನೂತನವಾಗಿ ಅನಾವರಣಗೊಂಡಿರುವ ಕೈ ಗಡಿಯಾರಗಳು ಕನ್ನಡನಾಡಿನ ಅಸ್ಮಿತೆ, ಪರಂಪರೆ, ಸಂಸ್ಕೃತಿ ಹಾಗೂ ಕೌಶಲ್ಯತೆಯ ಪ್ರತೀಕವಾಗಿವೆ.

ಈ ಅಪರೂಪದ ಕಾರ್ಯಕ್ರಮದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕರಾದ ಶ್ರೀ @RAshokaBJP ಅವರು, ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾದ ಶ್ರೀ @ChalavadiN ಅವರು, ಮಾಜಿ ಸಚಿವ ಸಾ.ರಾ.ಮಹೇಶ್ ಅವರು, ಸಂಸದ ಡಾ. ಸಿ ಎನ್ ಮಂಜುನಾಥ್ ಅವರು, ಶಾಸಕರಾದ ಶ್ರೀ ಮುನಿರತ್ನ ಅವರು, ಶ್ರೀ ಎಂ.ಟಿ. ಕೃಷ್ಣಪ್ಪ ಅವರು, ಶ್ರೀ ಟಿ.ಎ. ಶರವಣ ಅವರು, ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀ ಎ.ಪಿ. ರಂಗನಾಥ್ ಅವರು, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಶ್ರೀ ಹೆಚ್.ಎಂ. ರಮೇಶ್ ಗೌಡರು, ವಿಧಾನ ಪರಿಷತ್ ಮಾಜಿ ಸದಸ್ಯರಾದ ಶ್ರೀ ಕೆ.ಎ. ತಿಪ್ಪೇಸ್ವಾಮಿ ಅವರು ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಪ್ರಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ ಅರ್ಜುನ್ ಜನ್ಯ ಮತ್ತು ಅವರ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕನ್ನಡ ಹಾಡುಗಳ ಮೂಲಕ ಅವರೆಲ್ಲರೂ ಅಭಿಮಾನಿಗಳಲ್ಲಿ ಪುಳಕ ಉಂಟು ಮಾಡಿದರು.

#೭೧ನೇಕರ್ನಾಟಕರಾಜ್ಯೋತ್ಸವ
#ರಾಜ್ಯೋತ್ಸವ

@PMOIndia @MHI_GoI

— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) November 1, 2026

ವಾಚ್‌ಗಳ ವಿಶೇಷತೆಗಳು ಮತ್ತು ಬೆಲೆ ವಿವರ

ಎಚ್‌ಎಂಟಿ ಬಿಡುಗಡೆ ಮಾಡಿರುವ ಈ ಹೊಸ ಕನ್ನಡಿಗ ಸರಣಿಯ ವಾಚ್‌ಗಳು ಅತ್ಯಾಕರ್ಷಕ ವಿನ್ಯಾಸವನ್ನು ಹೊಂದಿವೆ. ಈ ಹೊಸ ವಾಚ್‌ಗಳಲ್ಲಿ ಕನ್ನಡ ಬಾವುಟ, ಕನ್ನಡಿಗ ಪದ ಹಾಗೂ ನಾಡಿನ ಅಸ್ಮಿತೆಯಾದ ‘ಗಂಡಭೇರುಂಡ’ ಲಾಂಛನವನ್ನು ಅಳವಡಿಸಲಾಗಿದೆ. ಅಲ್ಲದೆ, ವಾಚ್‌ಗಳ ಡಯಲ್‌ಗಳು ರೇಡಿಯಮ್ ಹೊಳಪನ್ನು ಹೊಂದಿದ್ದು, ಕತ್ತಲಲ್ಲೂ ಸಮಯ ಸ್ಪಷ್ಟವಾಗಿ ಕಾಣುವಂತೆ ರೂಪಿಸಲಾಗಿದೆ. ಈ ಕೈಗಡಿಯಾರಗಳ ಆರಂಭಿಕ ಬೆಲೆಯು ಅಂದಾಜು 3,500 ರೂ.ನಿಂದ 3,600 ರೂ.ವರೆಗೆ ಇದೆ. ಇವು ಮೆಟಲ್ ಚೈನ್ ಹಾಗೂ ಇಟಲಿಯ ಅಪ್ಪಟ ಲೆದರ್ ಬೆಲ್ಟ್‌ಗಳ ರೂಪದಲ್ಲಿ ಲಭ್ಯವಿವೆ. ಕನ್ನಡಪರ ಹೋರಾಟಗಾರರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡದ ಸಂಗೀತ ಸಂಜೆ ಜನಮನ ಸೆಳೆಯಿತು.

ಎಚ್‌ಎಂಟಿ ಕೈಗಡಿಯಾರ ಕಾರ್ಖಾನೆಗೆ ಮರುಜೀವ

ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಬಳಿಕ ಹೆಚ್.ಡಿ. ಕುಮಾರಸ್ವಾಮಿ ಅವರು ಕನ್ನಡಿಗರ ಹೆಮ್ಮೆಯ ‘ಎಚ್‌ಎಂಟಿ’ (HMT) ಕೈಗಡಿಯಾರ ಕಾರ್ಖಾನೆಗೆ ಮರುಜೀವ ನೀಡಲು ಮತ್ತು ಅದರ ಹಿಂದಿನ ವೈಭವವನ್ನು ಮರಳಿ ತರಲು ವಿಶೇಷ ಮುತುವರ್ಜಿ ವಹಿಸಿ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಇದರ ಭಾಗವಾಗಿ ಕನ್ನಡ ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ‘ಎಚ್‌ಎಂಟಿ ಕನ್ನಡಿಗ’ ನೂತನ ವಾಚ್ ಸರಣಿಯನ್ನು ಮಾರುಕಟ್ಟೆಗೆ ಪರಿಚಯಿಸಿ ನಾಡಿಗೆ ಸಮರ್ಪಿಸಿದ್ದಾರೆ.

ಇದೇ ಉತ್ಸಾಹ ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಬೆಂಬಲ ನೀಡುವ ಸದುದ್ದೇಶದಿಂದ ಅವರು ಗೌರಿ ಗಣೇಶ ಹಬ್ಬದ ದಿನದಂದು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಸ್ವತಃ ಎಚ್‌ಎಂಟಿ ವಾಚ್‌ ಅನ್ನು ಉಡುಗೊರೆಯಾಗಿ ನೀಡಿ ಕೈಗೆ ಕಟ್ಟಿದ್ದರು. ತಂದೆಯ ಈ ಪ್ರೀತಿಯ ಉಡುಗೊರೆಯನ್ನು ಸ್ವೀಕರಿಸಿದ್ದ ನಿಖಿಲ್ ಕುಮಾರಸ್ವಾಮಿ, ದೇಶದ ಹೆಮ್ಮೆಯ ಸಂಕೇತವಾಗಿರುವ ಎಚ್‌ಎಂಟಿ ವಾಚ್‌ಗಳನ್ನು ಪ್ರತಿಯೊಬ್ಬ ಯುವಜನರೂ ಕಡ್ಡಾಯವಾಗಿ ಬಳಸಿ ಪ್ರೋತ್ಸಾಹಿಸಬೇಕು ಎಂದು ಸಾಮಾಜಿಕ ಜಾಲತಾಣಗಳ ಮೂಲಕ ನಾಡಿನ ಯುವಕರಿಗೆ ವಿಶೇಷ ಸಂದೇಶ ಹಾಗೂ ಮನವಿ ಕೂಡ ಮಾಡಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ