"ಸಿನಿಮಾ ನೋಡಿ ಯಥರ್ವ್ ಜೋರಾಗಿ ಅಳುತ್ತಿದ್ದ. 'ಅಪ್ಪಾ, ನೀವು ಹಕ್ಕಿಯನ್ನು ಕೊಂದಿದ್ದು ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ನೀವು ನಟನೆ ಮಾಡುತ್ತಿದ್ದೀರಿ ಎಂದು ನನಗೆ ಗೊತ್ತು. ಆದರೂ ಹಕ್ಕಿಯನ್ನು ಸಾಯಿಸಿದ್ದು ತಪ್ಪು. ನೀವು ಹಾಗೆ ಮಾಡಬಾರದಿತ್ತು ಡಾಡಾ' ಎಂದು ಹೇಳುತ್ತಿದ್ದ" ಎಂದಿದ್ದಾರೆ ಸಾಯಿ ಪಲ್ಲವಿ.
ʻರಾಮಾಯಣʼ ಸಿನಿಮಾ ನೋಡಿ ಕಣ್ಣೀರಿಟ್ಟ ಯಶ್ ಪುತ್ರ ಯಥರ್ವ್; ಸಾಯಿ ಪಲ್ಲವಿ ಬಿಚ್ಚಿಟ್ಟ ಭಾವುಕ ಸಂಗತಿ!
Ramayana Movie: ತೆರೆಮೇಲೆ ರಾಕ್ಷಸ ರಾಜ ರಾವಣನಾಗಿ ಅಬ್ಬರಿಸುವ ರಾಕಿಂಗ್ ಸ್ಟಾರ್ ಯಶ್ ಅವರನ್ನು ಕಂಡು ಅವರ ಪುತ್ರ ಯಥರ್ವ್ ಕಣ್ಣೀರಿಟ್ಟಿದ್ದಾನೆ. ಅಪ್ಪನನ್ನು ಹೀರೋ ಎಂದುಕೊಂಡಿದ್ದ ಮಗನಿಗೆ ರಾವಣನ ಪಾತ್ರವನ್ನು ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅದರಲ್ಲೂ ಜಟಾಯು ಪಕ್ಷಿಯ ರೆಕ್ಕೆ ಕತ್ತರಿಸುವ ದೃಶ್ಯ ಕಂಡು ಆತ ದುಃಖದಿಂದ ಅತ್ತಿದ್ದಾನೆ. ಈ ಮುದ್ದಾದ, ಭಾವುಕ ಪ್ರಸಂಗವನ್ನು ನಟಿ ಸಾಯಿ ಪಲ್ಲವಿ ಇದೀಗ ಬಹಿರಂಗಪಡಿಸಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನದಲ್ಲಿ ಅದ್ದೂರಿಯಾಗಿ ಮೂಡಿಬರುತ್ತಿರುವ ‘ರಾಮಾಯಣ’ ಸಿನಿಮಾ ಸದ್ಯ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಈ ಸಿನಿಮಾದಲ್ಲಿ ಯಶ್ ಲಂಕಾಧಿಪತಿ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದರೆ, ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ಮತ್ತು ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಪಾತ್ರಗಳು, ದೃಶ್ಯಗಳು ಹಾಗೂ ತಾರಾಗಣದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಯಶ್ ಅವರ ಮನೆಯಲ್ಲೇ ನಡೆದ ಪುಟ್ಟ ಘಟನೆಯೊಂದು ಅಭಿಮಾನಿಗಳ ಗಮನ ಸೆಳೆದಿದೆ.
ಅಪ್ಪನೇ ಹೀರೋ, ರಾವಣ ಹೇಗಾಗ್ತಾರೆ?
ನಟ ಯಶ್ ಅವರು ತಮ್ಮ ಮಕ್ಕಳಿಗೆ ಸಂಬಂಧಿಸಿದ ಈ ಅನುಭವವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಸುಮಾ ಕನಕಾಲ ಅವರೊಂದಿಗಿನ ಮಾತುಕತೆಯಲ್ಲಿ ಮಾತನಾಡಿದ ಯಶ್, ಮಕ್ಕಳಿಗೆ ಸಾಮಾನ್ಯವಾಗಿ ಅಜ್ಜ-ಅಜ್ಜಿಯರು ರಾಮಾಯಣದ ಕಥೆಗಳನ್ನು ಹೇಳುತ್ತಾರೆ. ಹೀಗಾಗಿ ತಮ್ಮ ಮಗನಿಗೂ ರಾಮಾಯಣದ ಕಥೆ ಪರಿಚಯವಿದೆ ಎಂದು ತಿಳಿಸಿದ್ದಾರೆ.
"ನನ್ನ ಮಗನ ದೃಷ್ಟಿಯಲ್ಲಿ ನಾನೇ ಯಾವಾಗಲೂ ಹೀರೋ. ಆದರೆ ಈಗ ಅವನಿಗೆ ರಾಮಾಯಣದ ಕಥೆ ಗೊತ್ತಿದೆ. ಹೀಗಾಗಿ ನನ್ನ ಬಳಿ ಬಂದು, 'ಡ್ಯಾಡಿ, ನೀನು ರಾವಣನಾ? ರಾಮ ಅಲ್ಲವಾ?' ಎಂದು ಕೇಳುತ್ತಾನೆ. ಅವನ ಈ ಮುಗ್ಧ ಪ್ರಶ್ನೆಗಳಿಗೆ ಏನು ಉತ್ತರಿಸಬೇಕು ಎಂಬುದೇ ನನಗೆ ತಿಳಿಯುತ್ತಿರಲಿಲ್ಲ" ಎಂದು ಯಶ್ ನಗುತ್ತಲೇ ಹೇಳಿದ್ದಾರೆ.
ಮಕ್ಕಳಿಗೆ ತಂದೆಯೇ ಆದರ್ಶ. ಅದರಲ್ಲೂ ತೆರೆಮೇಲೆ ಸದಾ ಹೀರೋ ಆಗಿ ಕಾಣಿಸಿಕೊಳ್ಳುವ ಯಶ್ ಅವರನ್ನು ತಮ್ಮ ಮಗ ರಾವಣನ ಪಾತ್ರದಲ್ಲಿ ನೋಡಿದಾಗ ಉಂಟಾದ ಗೊಂದಲ ನಿಜಕ್ಕೂ ವಿಶೇಷವಾಗಿತ್ತು.
ಸಿನಿಮಾ ನೋಡಿ ಕಣ್ಣೀರಿಟ್ಟ ಯಥರ್ವ್!
ಯಶ್ ತಮ್ಮ ಇಬ್ಬರು ಮಕ್ಕಳೊಂದಿಗೆ ಲಾಸ್ ಏಂಜಲೀಸ್ನಲ್ಲಿ ‘ರಾಮಾಯಣ’ ಸಿನಿಮಾವನ್ನು ವೀಕ್ಷಿಸಿದ್ದರು. ಮಕ್ಕಳ ಪಾಲಿಗೆ ಅದೊಂದು ಮೊದಲ ಸಿನಿಮಾ ಅನುಭವವಾಗಿತ್ತು. ಒಳ್ಳೆಯದು, ಕೆಟ್ಟದ್ದು, ಪರಸ್ಪರ ಗೌರವಿಸುವುದು ಸೇರಿದಂತೆ ಹಲವು ವಿಚಾರಗಳನ್ನು ಕಲಿಯುವ ವಯಸ್ಸಿನಲ್ಲಿ ಪರದೆಯ ಮೇಲೆ ಕಂಡ ದೃಶ್ಯಗಳು ಯಥರ್ವ್ನ ಮನಸ್ಸಿನ ಮೇಲೆ ಪರಿಣಾಮ ಬೀರಿದ್ದವು.
ಈ ವಿಚಾರವನ್ನು ಯಶ್ ವಿವರಿಸುತ್ತಿದ್ದಾಗ ನಟಿ ಸಾಯಿ ಪಲ್ಲವಿ ಮಧ್ಯಪ್ರವೇಶಿಸಿ, ಥಿಯೇಟರ್ನಿಂದ ಹೊರಬಂದ ಬಳಿಕ ನಡೆದ ಘಟನೆಯನ್ನು ವಿವರಿಸಿದ್ದಾರೆ.
"ಸಿನಿಮಾ ಮುಗಿದು ಹೊರಬಂದಾಗ ಯಥರ್ವ್ ಜೋರಾಗಿ ಅಳುತ್ತಿದ್ದ. ಅವನು ಯಶ್ ಬಳಿ ಬಂದು, 'ಅಪ್ಪಾ, ನೀವು ಹಕ್ಕಿಯನ್ನು ಕೊಂದಿದ್ದು ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ನೀವು ನಟನೆ ಮಾಡುತ್ತಿದ್ದೀರಿ ಎಂದು ನನಗೆ ಗೊತ್ತು. ಆದರೂ ಹಕ್ಕಿಯನ್ನು ಸಾಯಿಸಿದ್ದು ತಪ್ಪು. ನೀವು ಹಾಗೆ ಮಾಡಬಾರದಿತ್ತು ಡಾಡಾ' ಎಂದು ಹೇಳುತ್ತಿದ್ದ" ಎಂದು ಸಾಯಿ ಪಲ್ಲವಿ ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
ಮಗನ ಮುಗ್ಧ ಮಾತುಗಳಿಗೆ ಅಭಿಮಾನಿಗಳು ಫಿದಾ!
‘ರಾಮಾಯಣ’ದ ಕಥೆಯಲ್ಲಿ ರಾವಣನು ಜಟಾಯು ಪಕ್ಷಿಯ ರೆಕ್ಕೆಗಳನ್ನು ಕತ್ತರಿಸುವ ದೃಶ್ಯ ಪ್ರಮುಖವಾಗಿರುತ್ತದೆ. ಈ ದೃಶ್ಯವನ್ನು ಕಂಡ ಯಥರ್ವ್, ತನ್ನ ತಂದೆಯೇ ನಿಜವಾಗಿಯೂ ಹಕ್ಕಿಗೆ ನೋವುಂಟು ಮಾಡಿದ್ದಾರೆ ಎಂದು ಭಾವಿಸಿ ದುಃಖಿತನಾಗಿದ್ದ. ಸಿನಿಮಾ ಮತ್ತು ನೈಜ ಜೀವನದ ನಡುವಿನ ವ್ಯತ್ಯಾಸವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದ ಮಗನ ಮುಗ್ಧ ಮನಸ್ಸು ಈ ಘಟನೆಯಲ್ಲಿ ಎದ್ದು ಕಾಣುತ್ತದೆ.
ತೆರೆಮೇಲೆ ರಾವಣನಾಗಿ ಭಯ ಹುಟ್ಟಿಸುವ ಯಶ್, ಮಗನ ಪಾಲಿಗೆ ಮಾತ್ರ ಪ್ರೀತಿಯ ಅಪ್ಪ. ಅಪ್ಪನಿಂದ ತಪ್ಪು ನಡೆದಿದೆ ಎಂದು ಭಾವಿಸಿ ಕಣ್ಣೀರಿಡುತ್ತಲೇ ಬುದ್ಧಿವಾದ ಹೇಳಿದ ಯಥರ್ವ್ನ ಈ ಕ್ಯೂಟ್ ಪ್ರಸಂಗ ಇದೀಗ ಅಭಿಮಾನಿಗಳ ಮನ ಗೆದ್ದಿದೆ. ರಾವಣನ ಪಾತ್ರಕ್ಕಾಗಿ ಯಶ್ ನಡೆಸಿರುವ ತಯಾರಿ ಒಂದೆಡೆಯಾದರೆ, ಅವರ ಮಗನ ಈ ಮುಗ್ಧ ಪ್ರತಿಕ್ರಿಯೆ ಮತ್ತೊಂದೆಡೆ ‘ರಾಮಾಯಣ’ ಚಿತ್ರದ ಬಗ್ಗೆ ಹೊಸ ಕುತೂಹಲ ಮೂಡಿಸಿದೆ.

