ಬೆಂಗಳೂರು: ‘ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಎಂಬ ಹೋರಾಟವನ್ನು ಯಾರೂ ಹತ್ತಿಕ್ಕಲು ಅವಕಾಶ ನೀಡುವುದಿಲ್ಲ. ಸಂಘರ್ಷ ಆಯ್ಕೆಯಲ್ಲ, ಆದರೆ, ಕನ್ನಡಿಗರ ಹಕ್ಕಿನ ಹೋರಾಟಕ್ಕೆ ಯಾರೇ ಅಡ್ಡ ಬಂದರೂ ಸಹಿಸುವುದಿಲ್ಲ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಎಚ್ಚರಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಪ್ರಧಾನ ಕಚೇರಿ ಮುಂಭಾಗ ಏರ್ಪಡಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಐಟಿ–ಬಿಟಿ ಕಂಪನಿಗಳು ಸೇರಿದಂತೆ ಬೆಂಗಳೂರಿನ ಉದ್ಯಮಗಳಿಗೆ ತೆರಳಿ ಕನ್ನಡಿಗ ಉದ್ಯೋಗಿಗಳ ಲೆಕ್ಕ ಕೇಳುವ ‘ಆಗ್ರಹ ಅಭಿಯಾನ’ ನಿಲ್ಲಿಸುವುದಿಲ್ಲ. ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಎಷ್ಟು ಪ್ರಮಾಣದಲ್ಲಿ ಉದ್ಯೋಗ ಲಭಿಸುತ್ತಿದೆ ಎಂದು ತಿಳಿದುಕೊಳ್ಳುವ ಹಕ್ಕು ನಮಗಿದೆ’ ಎಂದರು.

‘ಅಭಿಯಾನದ ನಂತರ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರ ಔದ್ಯೋಗಿಕ ಸ್ಥಾನಮಾನ, ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯಗಳ ಕುರಿತು ರಾಜ್ಯ ಸರ್ಕಾರಕ್ಕೆ ವೇದಿಕೆ, ಸಮಗ್ರ ಸತ್ಯ ಶೋಧನ ವರದಿ ಸಲ್ಲಿಸಲಿದೆ. ಐ.ಟಿ ಕಂಪನಿಗಳಿಗೆ ಜಗಳ ಮಾಡಲು ಹೋಗುತ್ತಿಲ್ಲ’ ಎಂದರು.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ದಿನೇಶ್ ಕುಮಾರ್ ಎಸ್. ಸಿ., ರಾಜ್ಯ ಉಪಾಧ್ಯಕ್ಷ ದಾ. ಪಿ. ಅಂಜನಪ್ಪ ಇದ್ದರು.

‘ಉದ್ಯೋಗ ಮೀಸಲಾತಿ ಕಾಯ್ದೆ ತನ್ನಿ’

‘ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಎಂಬ ಕೂಗು ಎದ್ದಾಗಲೆಲ್ಲ ಕೆಲವು ಉದ್ಯಮಿಗಳು ರಾಜ್ಯ ಬಿಟ್ಟು ಹೋಗುತ್ತೇವೆ ಎಂದು ಬ್ಲ್ಯಾಕ್ ಮೇಲ್ ಮಾಡುತ್ತಾರೆ. ಸರ್ಕಾರಕ್ಕೆ ಇಂಥವರ ಮಾತೇ ಮುಖ್ಯವಾಗುತ್ತದೆ. ಈ ಧೋರಣೆ ಅಪಾಯಕಾರಿ. ಈಗಲಾದರೂ ಸರ್ಕಾರ ಕನ್ನಡಿಗರ ಉದ್ಯೋಗ ಮೀಸಲಾತಿ ಕಾಯ್ದೆ ಜಾರಿಗೆ ತರಬೇಕು’ ಎಂದು ಟಿ.ಎ. ನಾರಾಯಣ ಗೌಡ ಆಗ್ರಹಿಸಿದರು.

‘ದೇಶದಲ್ಲಿ ನಡೆಯುತ್ತಿರುವ ವಲಸೆಯ ಶೇಕಡ 30ಕ್ಕೂ ಹೆಚ್ಚು ವಲಸೆ ಕರ್ನಾಟಕಕ್ಕೆ ಆಗುತ್ತಿದೆ. ಮುಖ್ಯಮಂತ್ರಿ ನೀಡಿದ ಹೇಳಿಕೆ ಪ್ರಕಾರ ಉತ್ತರ ಭಾರತದ 40 ಲಕ್ಷಕ್ಕೂ ಹೆಚ್ಚು ಮಂದಿ ಬೆಂಗಳೂರಿಗೆ ವಲಸೆ ಬಂದಿದ್ದಾರೆ. ಇದು ಹೀಗೇ ಮುಂದುವರಿದರೆ ಕನ್ನಡಿಗರು ತಮ್ಮ ನೆಲದಲ್ಲೇ ಪರಕೀಯರಂತೆ ಬದುಕುವ ಸ್ಥಿತಿ ನಿರ್ಮಾಣವಾಗಲಿದೆ’ ಎಂದರು.

261102-4-1295617226