ವಿಜಯಪುರ: ‘ಮಹಾರಾಷ್ಟ್ರ ಸರ್ಕಾರವು ಕಾನೂನು ಬಾಹಿರವಾಗಿ ಕೃಷ್ಣಾ ನದಿ ತಿರುವ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಆರೋಪಿಸಿದರು.
‘ಮಹಾಬಲೇಶ್ವರ ಸಮೀಪ ಕೃಷ್ಣಾ ನದಿಯಿಂದ 40 ಟಿಎಂಸಿ ಅಡಿ ಪ್ರವಾಹದ ನೀರನ್ನು ಭೀಮಾ ನದಿಯ ಉಜನಿ ಜಲಾಶಯಕ್ಕೆ ಹರಿಸಲು ಯೋಜನೆ ರೂಪಿಸಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನೀಡಿರುವ ಹೇಳಿಕೆ ಅತ್ಯಂತ ಕಳವಳಕಾರಿ ಸಂಗತಿ’ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
‘ಕೃಷ್ಣಾ ನದಿಯ ನೀರನ್ನು ಸಾಂಗ್ಲಿ ಮತ್ತು ಸೊಲ್ಲಾಪುರ ಜಿಲ್ಲೆಗಳಲ್ಲಿ ನೀರಾವರಿ ಯೋಜನೆಗೆ ಬಳಸಲು ಮಹಾರಾಷ್ಟ್ರ ಸರ್ಕಾರ ಉದ್ದೇಶಿಸಿದೆ. ಈ ಯೋಜನೆಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ₹24 ಕೋಟಿ ಮಂಜೂರು ಮಾಡಿರುವುದಾಗಿ ತಿಳಿದು ಬಂದಿದೆ. ಅಲ್ಲದೆ, ವಿಶ್ವ ಬ್ಯಾಂಕ್ನ ₹19 ಸಾವಿರ ಕೋಟಿ ನೆರವಿನೊಂದಿಗೆ ಈ ಯೋಜನೆ ಅನುಷ್ಠಾನ ಮಾಡುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿದ್ದಾರೆ’ ಎಂದು ತಿಳಿಸಿದರು.
‘ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ–II (ಕೆಡಬ್ಲ್ಯುಡಿಟಿ II ) ತೀರ್ಪಿನಲ್ಲಿ ಮಹಾರಾಷ್ಟ್ರಕ್ಕೆ 81 ಟಿಎಂಸಿ ಅಡಿ, ಕರ್ನಾಟಕಕ್ಕೆ 173 ಟಿಎಂಸಿ ಅಡಿ ಮತ್ತು ಅವಿಭಜಿತ ಆಂಧ್ರಪ್ರದೇಶಕ್ಕೆ 194 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಈ ತೀರ್ಪು 2050ರ ಮೇ 31ರವರೆಗೆ ಅನ್ವಯವಾಗಲಿದ್ದು, ಅಲ್ಲಿಯವರೆಗೆ ನದಿ ತೀರದ ಯಾವುದೇ ರಾಜ್ಯವು ಈ ಮಿತಿಗಿಂತ ಹೆಚ್ಚುವರಿಯಾಗಿ ಲಭ್ಯವಾಗುವ ನೀರನ್ನು ಬೇರೆಡೆಗೆ ತಿರುಗಿಸಲು ಅಥವಾ ಬಳಸಿಕೊಳ್ಳಲು ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದರು.
‘ಕೆಡಬ್ಲ್ಯುಡಿಟಿ II ತೀರ್ಪು ಇನ್ನೂ ಅಧಿಕೃತವಾಗಿ ಕೇಂದ್ರ ಸರ್ಕಾರದ ಗೆಜೆಟ್ನಲ್ಲಿ ಪ್ರಕಟವಾಗಿಲ್ಲ. ಮಹಾರಾಷ್ಟ್ರದ ಉದ್ದೇಶಿತ ಯೋಜನೆಯು ಕೆಡಬ್ಲ್ಯುಡಿಟಿ –II ತೀರ್ಪಿನ ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ, ಈ ಯೋಜನೆ ಕಾನೂನುಬಾಹಿರವಾಗಿದೆ’ ಎಂದರು.
‘ವಿಶ್ವ ಬ್ಯಾಂಕ್ನಿಂದ ಇಂತಹ ಯೋಜನೆಗೆ ಹಣಕಾಸು ನೆರವು ದೊರೆಯಬೇಕಾದರೆ ಕೇಂದ್ರ ಸರ್ಕಾರದ ಮಾರ್ಗದರ್ಶನ ಮತ್ತು ಅನುಮೋದನೆ ಅಗತ್ಯ. ಹಾಗಾದರೇ, ಕೇಂದ್ರ ಸರ್ಕಾರವು ಈ ಯೋಜನೆಗೆ ಅನುಮೋದನೆ ನೀಡಿದೆಯೇ ಮತ್ತು ಹೂಡಿಕೆಗೆ ಅಗತ್ಯವಾದ ಅನುಮತಿ ನೀಡಿದೆಯೇ ಎಂಬುದು ಸ್ಪಷ್ಟವಾಗಬೇಕಿದೆ’ ಎಂದು ಹೇಳಿದರು.
‘ಮಹಾರಾಷ್ಟ್ರ ಸರ್ಕಾರ ಅಕ್ರಮವಾಗಿ ಯೋಜನೆ ಕೈಗೊಳ್ಳುವುದರಿಂದ ನಮ್ಮ ರಾಜ್ಯದ ಆಲಮಟ್ಟಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಹಾಗೂ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಹರಿಯುವ ನೀರಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಎಂ.ಬಿ.ಪಾಟೀಲ್ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮಹಾರಾಷ್ಟ್ರದ ಅಕ್ರಮ ಯೋಜನೆ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜತೆ ಚರ್ಚಿಸಿ ಯೋಜನೆ ತಡೆಗೆ ಕಾನೂನು ಹೋರಾಟ ನಡೆಸಲಾಗುವುದು
