ಹಾವೇರಿ: ಗ್ರಾಮ ಆಡಳಿತ ಅಧಿಕಾರಿ (ವಿಎಒ) ನೇಮಕ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಆರೋಪದಡಿ, ಮೊದಲ ರ‍್ಯಾಂಕ್‌ ಪಡೆದಿದ್ದ ಅಭ್ಯರ್ಥಿ ಶಂಕರ ಬಸವರಾಜ ಬನ್ನೂರ ವಿರುದ್ಧ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಭಾನುವಾರ ರಾತ್ರಿ ಎಫ್ಐಆರ್ ದಾಖಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸೂಚನೆ ಮೇರೆಗೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರ ನಿರ್ದೇಶನದಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ಸವಣೂರು ಉಪ‌ ವಿಭಾಗಾಧಿಕಾರಿ (ಎಸಿ) ಸಮೀರ ಪ್ರಕಾಶ ಖೋಡೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಭಾನುವಾರ ರಾತ್ರಿ ಶಿಗ್ಗಾವಿ ಠಾಣೆಗೆ ಭೇಟಿ‌ ನೀಡಿದ್ದ ಶಿಗ್ಗಾವಿ ತಹಶೀಲ್ದಾರ್ ಯಲ್ಲಪ್ಪ ಅವರು, ಎಸಿ ಅವರ ದೂರನ್ನು ಪೊಲೀಸರಿಗೆ ನೀಡಿದ್ದರು.

ದೂರಿನ‌ ಪರಿಶೀಲನೆ ‌ನಡೆಸಿದ ಪೊಲೀಸರು, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ 2023ರ ಪರೀಕ್ಷಾ ಕಾಯ್ದೆ ಪ್ರಕಾರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ದೂರಿನ ವಿವರ: 'ಹಾನಗಲ್ ಪಟ್ಟಣದ ಗುಡಿಕೇರಿ ಓಣಿಯ ಎಲೆಪೇಟೆ ನಿವಾಸಿ ಶಂಕರ ಬಸವರಾಜ ಬನ್ನೂರ ಎಂಬಾತ, ಅ. 4ರಂದು ಶಿಗ್ಗಾವಿಯ ಬಿ.ಬಿ. ಮಾಮ್ಲೆದೇಸಾಯಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದಿದ್ದ ವಿಎಒ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದ. ಬೆಳಿಗ್ಗೆ ಹಾಗೂ ಮಧ್ಯಾಹ್ನದ ಅವಧಿಯಲ್ಲಿ ನಡೆದಿದ್ದ ಎರಡೂ ಪರೀಕ್ಷೆಯಲ್ಲಿ ನಕಲು ಮಾಡಲು, ಮೊಬೈಲ್‌ನಂತಹ ವಸ್ತುವನ್ನು ಕೊಠಡಿಯೊಳಗೆ ಕೊಂಡೊಯ್ದಿದ್ದ. ಅದನ್ನು ಬಳಸಿ ಪ್ರಶ್ನೆಪತ್ರಿಕೆ ಫೋಟೊ ತೆಗೆದು, ಸರಿ ಉತ್ತರವನ್ನು ಕಂಡುಕೊಂಡಿದ್ದ. ಒಎಂಆರ್ ಪ್ರತಿ ಭರ್ತಿ ಮಾಡಿದ್ದ. ಮೊಬೈಲ್‌ನಂತಹ ವಸ್ತುವನ್ನು ಬಳಸಿ ನಕಲು ಮಾಡುವ ಮೂಲಕ, 200 ಅಂಕಗಳ ಪೈಕಿ 151.25 ಅಂಕ ಪಡೆದಿರುವ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು' ಎಂದು ಎಸಿ ಸಮೀರ್ ಪ್ರಕಾಶ ಖೋಡೆ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಗ್ರಾಮ ಆಡಳಿತ ಅಧಿಕಾರಿ ನೇಮಕ ಪರೀಕ್ಷೆ: ಮೊದಲ ರ‍್ಯಾಂಕ್ ಅಭ್ಯರ್ಥಿ ವಶಕ್ಕೆ !