ಅಧಿಕಾರಿಯಾಗುವುದು ಒಂದು ಸಾಧನೆಯಾದರೆ, ಕೆಲಸ ಮಾಡುವ ರಾಜ್ಯದ ಭಾಷೆ ಕಲಿತು ಜನರೊಂದಿಗೆ ಬೆರೆಯುವುದು ಮತ್ತೊಂದು ವಿಶೇಷ ಸಾಧನೆ. ಇದಕ್ಕೆ ಉತ್ತಮ ಉದಾಹರಣೆ ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್.
ಕನ್ನಡ ಮಾತೃಭಾಷೆಯಲ್ಲದಿದ್ದರೂ ಭಾಷೆಯ ಮೇಲೆ ಆಸಕ್ತಿ ಬೆಳೆಸಿಕೊಂಡು,ಕನ್ನಡದಲ್ಲಿಯೇ ಪುಸ್ತಕಗಳನ್ನು ಬರೆಯುವ ಮಟ್ಟಕ್ಕೆ ಬೆಳೆದಿರುವ ಅವರ ಪಯಣ ಭಾಷಾಭಿಮಾನ ಮತ್ತು ನಿರಂತರ ಕಲಿಕೆ ಸ್ಫೂರ್ತಿದಾಯಕವಾಗಿದೆ.
ನೀವು ಕನ್ನಡ ಭಾಷೆ ಕಲಿಯಲು ಆರಂಭಿಸಿದ್ದು ಯಾವಾಗ ಮತ್ತು ಹೇಗೆ?
1989ರ ಬ್ಯಾಚ್ನ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರು, ಕರ್ನಾಟಕದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆಡಳಿತದ ಜೊತೆಗೆ ಕನ್ನಡ ಸಾಹಿತ್ಯದೊಂದಿಗೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ.ತಮ್ಮ ಕನ್ನಡಾಭಿಮಾನ ಕುರಿತಂತೆ ಅವರು ಕನ್ನಡ ರಾಜ್ಯೋತ್ಸವದ ಸಂದರ್ಭ ‘ಪ್ರಜಾವಾಣಿ‘ ಜೊತೆ ಮಾತನಾಡಿದ್ದಾರೆ.
1989ರಲ್ಲಿ ನಾನು ಭಾರತೀಯ ಆಡಳಿತ ಸೇವೆಗೆ ನೇಮಕವಾದ ನಂತರ, ಮಸ್ಸೂರಿಯಲ್ಲಿ ನಡೆದ ಪ್ರೊಬೇಷನರಿ ಅಧಿಕಾರಿಗಳ ಪ್ರಥಮ ತರಬೇತಿ ಸಮಯದಲ್ಲಿ ನಮಗೆ ಕನ್ನಡ ಭಾಷೆಯ ಸಂಸ್ಕೃತಿಯನ್ನು ಜೀವನ ಶೈಲಿಯಲ್ಲಿ, ಚಿಂತನೆಯಲ್ಲಿ ಮತ್ತು ಆಡಳಿತದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿದರು. ನಾನು ಒಂದು ವರ್ಷ ಕನ್ನಡ ಭಾಷೆಯನ್ನು ಕನ್ನಡ ಭಾಷಾ ಶಿಕ್ಷಕರ ಮುಖಾಂತರ ಕಲಿತು ಪರೀಕ್ಷೆ ಮತ್ತು ಸಂದರ್ಶನದಲ್ಲಿ ಉತೀರ್ಣಳಾದೆ. ಮೈಸೂರಿನಲ್ಲಿರುವ ಕೇಂದ್ರ ಭಾರತೀಯ ಭಾಷೆಗಳ ಸಂಸ್ಥೆಯಲ್ಲಿ ಆಯೋಜಿಸಿದ್ದ 6 ವಾರಗಳ ತರಬೇತಿ ಕಾರ್ಯಕ್ರಮದಲ್ಲಿ ಆಡಿಯೋ ವಿಷುವಲ್ ತರಬೇತಿಯನ್ನು ಪಡೆದುಕೊಂಡೆ. ನಂತರ ನನಗೆ ಕನ್ನಡ ಭಾಷೆಯ ಮೇಲೆ ವಿಶೇಷ ಆಸಕ್ತಿ ಮೂಡಿದ್ದು, ಕನ್ನಡ ಪಠ್ಯಗಳು, ಸಾಹಿತ್ಯ, ಸಂಸ್ಕೃತಿ, ಲೇಖನಗಳು, ಮತ್ತು ಜನಸಾಮಾನ್ಯರೊಂದಿಗೆ ನಿರಂತರ ಸಂವಾದದ ಮೂಲಕ ಮೂಲಕ ಕನ್ನಡವನ್ನು ಅರ್ಥಮಾಡಿಕೊಳ್ಳುವ ಮತ್ತು ಬಳಸುವ ಸಾಮರ್ಥ್ಯ ಪಡೆದುಕೊಂಡೆ.
ಅಲ್ಲದೇ, ನಾವು ಪ್ರಪ್ರಥಮವಾಗಿ ಸ್ಥಳನಿಯುಕ್ತಿ ತೆಗೆದುಕೊಳ್ಳುವಾಗ ಮತ್ತು ಮುಂಬಡ್ತಿಯ ಸಮಯದಲ್ಲಿ ಕನ್ನಡದಲ್ಲಿ ಬರೆಯುವುದು, ಓದುವುದು ಮತ್ತು ಮಾತನಾಡುವುದರಲ್ಲಿ ಪರಿಣಿತಿ ಹೊಂದಿರಬೇಕಾಗುತ್ತದೆ. ಕಾರಣ, ಕರ್ನಾಟಕದ ಆಡಳಿತ ಭಾಷೆ ಕನ್ನಡವಾಗಿದ್ದು, ಜನಸಾಮಾನ್ಯರು ಕಚೇರಿಗಳಲ್ಲಿ ಕನ್ನಡದಲ್ಲಿಯೇ ವ್ಯವಹರಿಸುವುದರಿಂದ, ಕನ್ನಡ ಭಾಷೆಯ ಜ್ಞಾನ ಅಧಿಕಾರಿಗಳಿಗೆ ಕಡ್ಡಾಯವಾಗಿ ಇರಬೇಕಾಗುತ್ತದೆ. ಇದರಿಂದಾಗಿ,ಸ್ವಯಂಪ್ರೇರಣೆಯಿಂದ ಸುಲಲಿತವಾಗಿ ಕನ್ನಡ ಕಲಿಯಲು ನನಗೆ ಸಾಧ್ಯವಾಯಿತು.
ಕನ್ನಡ ನಿಮ್ಮ ಮಾತೃಭಾಷೆಯಲ್ಲದಿದ್ದರೂ ಕಲಿಯಬೇಕು ಎಂಬ ಆಸಕ್ತಿ ಮೂಡಲು ಕಾರಣವೇನು?
ಕನ್ನಡ ನನ್ನ ಮಾತೃಭಾಷೆಯಲ್ಲದಿದ್ದರೂ, ಈ ಭಾಷೆಯ ಬಗ್ಗೆ ಆಸಕ್ತಿ ಮೂಡಲು ಮುಖ್ಯ ಕಾರಣ ಅದರ ಶ್ರೀಮಂತ ಇತಿಹಾಸ, ಸಾಹಿತ್ಯ, ಸಂಸ್ಕೃತಿ ಮತ್ತು ಭಾಷೆಯಲ್ಲಿರುವ ಆತ್ಮೀಯತೆ. ಪ್ರತಿಯೊಂದು ಭಾಷೆಯೂ ತನ್ನದೇ ಆದ ಸೌಂದರ್ಯವನ್ನು ಹೊಂದಿದೆ. ಆದರೆ ಕನ್ನಡ ಭಾಷೆಯಲ್ಲಿರುವ ಮೃದುತ್ವ, ಪದಗಳ ವೈವಿಧ್ಯತೆ, ಗಾದೆಗಳು, ನುಡಿಗಟ್ಟುಗಳು ಹಾಗೂ ಭಾವನೆಗಳನ್ನು ವ್ಯಕ್ತಪಡಿಸುವ ವಿಶಿಷ್ಟ ಶೈಲಿ ನನ್ನನ್ನು ವಿಶೇಷವಾಗಿ ಆಕರ್ಷಿಸಿತು.
ನನ್ನ ಪಾಲಿಗೆ ಕನ್ನಡ ಕೇವಲ ಸಂವಹನದ ಭಾಷೆಯಲ್ಲ; ಅದು ಜ್ಞಾನಪರಂಪರೆ ಮತ್ತು ಜನಜೀವನದ ಪ್ರತಿಬಿಂಬವಾಗಿದೆ. ಕನ್ನಡಿಗರೊಂದಿಗೆ ಅವರದೇ ಭಾಷೆಯಲ್ಲಿ ಸಂವಹನ ನಡೆಸಿದಾಗ ಅವರ ಭಾವನೆ, ಸಂಸ್ಕೃತಿ ಮತ್ತು ಅಭಿವ್ಯಕ್ತಿಯನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು.
ನನ್ನ ಉದ್ದೇಶ ಕನ್ನಡವನ್ನು ಕೇವಲ ಕಲಿಯುವುದಲ್ಲ; ಕನ್ನಡದ ಸೊಗಡನ್ನು, ಸೌಂದರ್ಯವನ್ನು ಮತ್ತು ಆತ್ಮೀಯತೆಯನ್ನು ಗೌರವದಿಂದ ಅರ್ಥಮಾಡಿಕೊಂಡು, ಸಾಧ್ಯವಾದಷ್ಟು ಶುದ್ಧವಾಗಿ ಮತ್ತು ಸಹಜವಾಗಿ ಬಳಸುವುದಾಗಿದೆ.
ಕನ್ನಡ ಕಲಿಕೆಯ ಆರಂಭದ ದಿನಗಳಲ್ಲಿ ನಿಮಗೆ ಎದುರಾದ ಸವಾಲುಗಳೇನು?
ಕನ್ನಡ ಕಲಿಕೆಯ ಆರಂಭದ ದಿನಗಳಲ್ಲಿ ನನಗೆ ಎದುರಾದ ಪ್ರಮುಖ ಸವಾಲು ಎಂದರೆ ಕನ್ನಡ ಭಾಷೆಯ ವಿಶಿಷ್ಟ ಲಿಪಿ, ಉಚ್ಚಾರಣೆ ಮತ್ತು ವ್ಯಾಕರಣದ ಸೂಕ್ಷ್ಮತೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಾಗಿತ್ತು. ವಿಶೇಷವಾಗಿ, ಕೆಲವು ಕನ್ನಡ ಪದಗಳ ಉಚ್ಚಾರಣೆಯಲ್ಲಿರುವ ವ್ಯತ್ಯಾಸ, ಒಂದೇ ಪದಕ್ಕೆ ಸಂದರ್ಭಕ್ಕೆ ಅನುಗುಣವಾಗಿ ಬದಲಾಗುವ ಅರ್ಥಗಳು, ಗಾದೆಗಳು, ನುಡಿಗಟ್ಟುಗಳು ಹಾಗೂ ಪ್ರಾದೇಶಿಕ ಭಾಷಾ ಪ್ರಯೋಗಗಳನ್ನು ಅರ್ಥಮಾಡಿಕೊಳ್ಳುವುದು ಸವಾಲಿನ ಸಂಗತಿಯಾಗಿತ್ತು. ಆದರೆ, ಕನ್ನಡಿಗರಿಗೆ ನಾನು ಪ್ರಮುಖವಾಗಿ ಋಣಿಯಾಗಬೇಕಾದ ಅಂಶವೆಂದರೆ, ನಾನು ಒಂದುವೇಳೆ ತಪ್ಪು ಮಾಡಿದರೆ ಅವರು ಅವಹೇಳನ ಮಾಡದೇ ಭಾಷೆಯನ್ನು ತಿದ್ದುವ ಮೂಲಕ ನನಗೆ ಆತ್ಮವಿಶ್ವಾಸ ತುಂಬಿದರು.
ಇದರ ಫಲವಾಗಿ, ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ನನ್ನ ಸಾವಿರಾರು ಲೇಖನಗಳು, ಅಂಕಣಗಳು ಕನ್ನಡ ಭಾಷೆಯಲ್ಲಿ ಪ್ರಕಟಗೊಂಡು ಜನಮನ್ನಣೆ ಗಳಿಸಿವೆ ಎಂಬ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಅಭಿಪ್ರಾಯದಲ್ಲಿ, ಯಾವುದೇ ಭಾಷೆಯನ್ನು ಕಲಿಯುವಾಗ ತಪ್ಪುಗಳನ್ನು ಮಾಡುವುದು ಸಹಜ. ಆ ತಪ್ಪುಗಳಿಂದ ಕಲಿಯುವ ಮನೋಭಾವವೇ ಭಾಷೆಯ ಮೇಲೆ ಹಿಡಿತ ಸಾಧಿಸಲು ಮುಖ್ಯವಾದ ಮೆಟ್ಟಿಲು.
ಕನ್ನಡ ಮಾತನಾಡಲು ಮತ್ತು ಬರೆಯಲು ಕಲಿಯಲು ನೀವು ಅನುಸರಿಸಿದ ವಿಧಾನಗಳೇನು?
ಕನ್ನಡ ಮಾತನಾಡಲು ಮತ್ತು ಬರೆಯಲು ಕಲಿಯುವ ಪ್ರಕ್ರಿಯೆಯಲ್ಲಿ ವಿವಿಧ ಭಾಷಾ ಸಂಪನ್ಮೂಲಗಳು ಹಾಗೂ ಸಂವಹನ ವಿಧಾನಗಳನ್ನು ಅನುಸರಿಸಿದ್ಧೇನೆ. ಮುಖ್ಯವಾಗಿ, ಬರವಣಿಗೆಯ ಮೂಲಕ ಅಧಿಕೃತ ಪತ್ರಗಳು, ಟಿಪ್ಪಣಿಗಳು, ಲೇಖನಗಳು ಮತ್ತು ವರದಿಗಳ ಮಾದರಿಗಳನ್ನು ಅಭ್ಯಾಸ ಮಾಡುವ ಮೂಲಕ ಸಂದರ್ಭಕ್ಕೆ ತಕ್ಕಂತೆ ಸೂಕ್ತ ಪದಪ್ರಯೋಗ ಮತ್ತು ವಾಕ್ಯರಚನೆ ಮಾಡುವುದನ್ನು ಕಲಿತುಕೊಂಡೆ.
ಭಾಷೆಯ ಬಳಕೆಯಲ್ಲಿ ಕಂಡುಬರುವ ತಪ್ಪುಗಳನ್ನು ಗುರುತಿಸಿ ತಿದ್ದಿಕೊಳ್ಳುವುದೂ ಸಹ ಕನ್ನಡ ಭಾಷೆಯನ್ನು ಸರಿಯಾಗಿ ಕಲಿಯಲು ನನಗೆ ಸಹಾಯ ಮಾಡಿತು. ಇದರಿಂದ ಸಾಮಾನ್ಯ ಸಂಭಾಷಣೆಯಿಂದ ಹಿಡಿದು ಅಧಿಕೃತ ಆಡಳಿತಾತ್ಮಕ ಕನ್ನಡದವರೆಗೆ ವಿಭಿನ್ನ ಸಂದರ್ಭಗಳಲ್ಲಿ ಕನ್ನಡವನ್ನು ಹೆಚ್ಚು ಸಮರ್ಪಕವಾಗಿ ಬಳಸಲು ನನಗೆ ಸಾಧ್ಯವಾಯಿತು.
ಕನ್ನಡ ಕಲಿಯುವ ಸಂದರ್ಭದಲ್ಲಿ ನಿಮಗೆ ಸಹಾಯ ಮಾಡಿದವರು ಯಾರು? ಕನ್ನಡ ಕಲಿಕೆಯ ಅನುಭವ ಹೇಗಿತ್ತು? ಕನ್ನಡದಲ್ಲಿ ಮೊದಲ ಬಾರಿಗೆ ಭಾಷಣ ಮಾಡಿದ ಅಥವಾ ಅಧಿಕೃತವಾಗಿ ಮಾತನಾಡಿದ ಅನುಭವ ಹೇಗಿತ್ತು?
ನನ್ನ ಪತಿ ಡಾ. ರಜನೀಶ್ ಗೋಯಲ್ರವರು ನನಗೆ ಕನ್ನಡ ಭಾಷೆಯನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಹಾಯವಾಗುವಂತೆ ಸುಲಭ ಕನ್ನಡ ವ್ಯಾಕರಣ ಮತ್ತು ಪದಗಳ ಒಂದು ಚಾರ್ಟ್ ಅನ್ನು ಮಾಡಿಕೊಡುತ್ತಿದ್ದರು. ಇದರಲ್ಲಿ ಭೂತಕಾಲ, ವರ್ತಮಾನ ಮತ್ತು ಭವಿಷ್ಯಕಾಲದ ಪದಗಳನ್ನು ಸೂಚಿಸುವ ಸರಳ ವಾಕ್ಯಗಳು ಇರುತ್ತಿತ್ತು. ನಾನು ಮೂಲತ: ಹಿಂದಿ ಭಾಷಿಕಳಾಗಿದ್ದು, ಹಿಂದಿ ಮತ್ತು ಕನ್ನಡ ಪದಬಳಕೆಯಲ್ಲಿ ಬಹಳ ವ್ಯತ್ಯಾಸಗಳು ಇರುತ್ತವೆ. ಆದ್ದರಿಂದ, ನಾಮಪದ, ಕ್ರಿಯಾಪದಗಳನ್ನು ಕಲಿಯಲು ಅವರು ನೀಡಿದ ಚಾರ್ಟ್ ನನಗೆ ಬಹಳ ಸಹಾಯ ಮಾಡಿತು.
ವಿಶೇಷ ಸಂಗತಿ ಎಂದರೆ, ನಾನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಸಹಾಯಕ ಆಯುಕ್ತರಾಗಿದ್ದ ಸಂದರ್ಭದಲ್ಲಿ, ವೇದಿಕೆಯಲ್ಲಿ ಭಾಷಣ ಮಾಡುವ ಅವಕಾಶ ಸಿಕ್ಕಿತ್ತು. 'ಎಲ್ಲರಿಗೆ ನಮಸ್ಕಾರ. ನಾನು ಇವತ್ತು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನಗೆ ತುಂಬಾ ಸಂತೋಷವಾಗಿದೆ. ಈ ಕಾರ್ಯಕ್ರಮವು ಜನರ ಅಭಿವೃದ್ಧಿಗೆ ಹಾಗೂ ನಮ್ಮ ನಾಡಿನ ಅಭಿವೃದ್ಧಿಗೆ ಬಹಳ ಮುಖ್ಯ ಪಾತ್ರ ವಹಿಸಿದೆ. ನಾವು ಎಲ್ಲರೂ ನಾಡಿನ ಅಭಿವೃದ್ಧಿಗೆ ಕೈಜೋಡಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ' ಎಂಬ ನಾಲ್ಕು ಪುಟ್ಟ ವಾಕ್ಯಗಳನ್ನು ಆಗ ರಜನೀಶ್ರವರು ತಯಾರಿಸಿಕೊಟ್ಟರು. ಇದನ್ನು ಚಾಚೂ ತಪ್ಪದೇ ಬಾಯಿಪಾಠ ಮಾಡಿ ವೇದಿಕೆಯ ಮೇಲೆ ಹೇಳಿದಾಗ ನನಗೆ ಬಹಳ ರೋಮಾಂಚನ ಅನುಭವವಾಯಿತು. ಇದೇ ನನ್ನ ಕನ್ನಡದ ಪ್ರಥಮ ಭಾಷಣ.
ಅಲ್ಲದೇ, ನಾನು ಕೋಲಾರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಜನರು ಬಳಸುತ್ತಿದ್ದ ತೆಲುಗು, ತಮಿಳು ಮಿಶ್ರಿತ ಕನ್ನಡದಿಂದಾಗಿ ನನಗೆ ಸ್ವಲ್ಪಮಟ್ಟಿಗೆ ಗೊಂದಲ ಉಂಟಾಗಿತ್ತು. ಆದರೆ, ನಾನು ಮಂಗಳೂರಿಗೆ ವರ್ಗಾವಣೆಯಾದ ನಂತರ ಅಲ್ಲಿಯ ಜನರ ಸಂಪರ್ಕದಿಂದಾಗಿ ಸ್ವಚ್ಛವಾಗಿ ಕನ್ನಡ ಮಾತನಾಡಲು ಆರಂಭಿಸಿದೆ. ಅಲ್ಲಿ ಆಗಷ್ಟೇ ನವಸಾಕ್ಷರ ಆಂದೋಲನ ಆರಂಭವಾಗಿತ್ತು. ತಮಾಷೆಯ ವಿಷಯ ಏನೆಂದರೆ, ನಾನೂ ಆಗಷ್ಟೇ ಅಂಬೆಗಾಲಿಡುವ ಮಗುವಿನಂತೆ ಕನ್ನಡ ಕಲಿಯಲು ಆರಂಭಿಸಿದ್ದೆ. ಆಗ ಅವರ ಜೊತೆ ಕನ್ನಡದಲ್ಲಿ ಮಾತನಾಡುತ್ತಾ, ಉತ್ತಮ ಬಾಂಧವ್ಯ ಬೆಳೆಯಿತು.
ನಿಮ್ಮ ಕನ್ನಡ ಕಲಿಕೆಯಲ್ಲಿ ಯಾರ ಪಾತ್ರ ಹೆಚ್ಚು ಮಹತ್ವದ್ದಾಗಿದೆ? ಕನ್ನಡದ ಮೊದಲ ಪದ, ವಾಕ್ಯ ಅಥವಾ ಪುಸ್ತಕ ನಿಮಗೆ ನೆನಪಿದೆಯೇ?
ನಾನು ಮೊದಲೇ ಹೇಳಿದಂತೆ, ನನ್ನ ಪತಿ ಡಾ. ರಜನೀಶ್ ಗೋಯಲ್ರವರು ನನಗೆ ಕನ್ನಡ ಭಾಷೆಯನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡಿದರು. ವಿಶೇಷವಾಗಿ ಕನ್ನಡ ಮಾತನಾಡುವವರೊಂದಿಗೆ ನಿರಂತರವಾಗಿ ಸಂಭಾಷಣೆ ನಡೆಸುವುದು ನನಗೆ ಹೆಚ್ಚು ಸಹಾಯ ಮಾಡಿತು. ನನ್ನ ಕನ್ನಡ ಕಲಿಕೆಯ ಆರಂಭದ ದಿನಗಳಲ್ಲಿ ನಾನು ಕಲಿತ ಮೊದಲ ಪದ "ನಮಸ್ಕಾರ". ನಂತರ ಸರಳವಾದ ಪದಗಳು ಮತ್ತು ವಾಕ್ಯಗಳನ್ನು ಕಲಿಯಲು ಪ್ರಾರಂಭಿಸಿದೆ. ಕನ್ನಡ ದಿನಪತ್ರಿಕೆಗಳು, ಪುಸ್ತಕಗಳು ಹಾಗೂ ಬಸವಣ್ಣನವರ ವಚನಗಳನ್ನು ಓದುವ ಮೂಲಕ ಕನ್ನಡ ಭಾಷೆಯ ಸೌಂದರ್ಯ, ಸಂಸ್ಕೃತಿ ಮತ್ತು ಸಾಹಿತ್ಯದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡೆ.
ಕನ್ನಡ ಕಲಿಯುವಾಗ ನಿಮಗೆ ಅತ್ಯಂತ ಕಷ್ಟವೆನಿಸಿದ ಅಂಶ ಯಾವುದು — ಉಚ್ಚಾರಣೆ, ವ್ಯಾಕರಣ, ಓದು ಅಥವಾ ಬರವಣಿಗೆ?
ಕನ್ನಡ ಕಲಿಯುವಾಗ ನನಗೆ ಸ್ವಲ್ಪಮಟ್ಟಿಗೆ ಕಷ್ಟವೆನಿಸಿದ ಅಂಶವೆಂದರೆ ಉಚ್ಚಾರಣೆ ಮತ್ತು ವ್ಯಾಕರಣ. ಕೆಲವು ಕನ್ನಡ ಪದಗಳನ್ನು ಸರಿಯಾಗಿ ಉಚ್ಚರಿಸುವುದು ಹಾಗೂ ವಾಕ್ಯಗಳನ್ನು ವ್ಯಾಕರಣಬದ್ಧವಾಗಿ ರಚಿಸುವುದು ಆರಂಭದಲ್ಲಿ ಸವಾಲಿನ ಸಂಗತಿಯಾಗಿತ್ತು. ಆದರೆ, ನನ್ನ ನಿರಂತರ ಅಭ್ಯಾಸ, ಕನ್ನಡ ಪುಸ್ತಕಗಳ ಓದು ಮತ್ತು ಕನ್ನಡ ಭಾಷಿಕರೊಂದಿಗೆ ಸಂವಹನ ನಡೆಸುವ ಮೂಲಕ ಈ ತೊಂದರೆಗಳನ್ನು ಕ್ರಮೇಣ ನಿವಾರಿಸಿಕೊಳ್ಳಲು ಸಾಧ್ಯವಾಯಿತು.
ಕನ್ನಡವನ್ನು ಕಲಿಯಲು ನೀವು ವಿಶೇಷವಾಗಿ ಪುಸ್ತಕಗಳನ್ನು ಓದುತ್ತಿದ್ದೀರಾ ಅಥವಾ ಕನ್ನಡಿಗರೊಂದಿಗೆ ಮಾತನಾಡುವ ಮೂಲಕ ಕಲಿತಿರಾ?
ಕನ್ನಡ ಕಲಿಯಲು ನಾನು ಪುಸ್ತಕಗಳನ್ನು ಓದುವ ಜೊತೆಗೆ ಕನ್ನಡಿಗರೊಂದಿಗೆ ನಿರಂತರವಾಗಿ ಮಾತನಾಡುವ ಅಭ್ಯಾಸವನ್ನೂ ಮಾಡಿಕೊಂಡಿದ್ದೆ. ಕನ್ನಡ ದಿನಪತ್ರಿಕೆಗಳು, ಕಥೆ ಮತ್ತು ಕಾದಂಬರಿಗಳನ್ನು ಓದುವ ಮೂಲಕ ಹೊಸ ಪದಗಳನ್ನು ಕಲಿತೆ. ಅಲ್ಲದೆ, ಕನ್ನಡಿಗರೊಂದಿಗೆ ಸಂಭಾಷಣೆ ನಡೆಸುವುದರಿಂದ ಸರಿಯಾದ ಉಚ್ಚಾರಣೆ, ಪದಪ್ರಯೋಗ ಮತ್ತು ಮಾತನಾಡುವ ಶೈಲಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಇವೆರಡೂ ಕನ್ನಡ ಕಲಿಕೆಯಲ್ಲಿ ಬಹಳ ಸಹಕಾರಿಯಾದವು.
ಕನ್ನಡ ಕಲಿತ ನಂತರ ಕರ್ನಾಟಕದ ಜನರು ಮತ್ತು ಅವರ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ನಿಮ್ಮ ದೃಷ್ಟಿಕೋನದಲ್ಲಿ ಬದಲಾವಣೆಯಾಗಿದೆಯೇ?
ನಾನು ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ಬಂದಿದ್ದಾದ್ದರಿಂದ, ಉತ್ತರ ಭಾರತೀಯಳಾಗಿ ನನಗೆ ದಕ್ಷಿಣ ಭಾರತ ಎಂದರೆ ಮದ್ರಾಸ್, ಇಡ್ಲಿ, ದೋಸೆ ಎಂಬ ಯೋಚನೆ ನನ್ನ ಮನಸ್ಸಿನಲ್ಲಿತ್ತು. ಆದರೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಾ ಸಾಗಿದಂತೆ, ಕನ್ನಡ ನಾಡಿನ ಶ್ರೀಮಂತಿಕೆ, ಇಲ್ಲಿ ಆಚರಿಸಲ್ಪಡುವ ಹಬ್ಬಗಳು, ಸಂಸ್ಕೃತಿ, ಪುರಾತನ ಇತಿಹಾಸ, ಭವ್ಯ ಪರಂಪರೆ ಎಷ್ಟು ವಿಶೇಷವಾಗಿದೆ ಎಂಬ ಬಗ್ಗೆ ತಿಳಿದುಕೊಳ್ಳುತ್ತಾ, ಕನ್ನಡ ಭಾಷೆಯ ಬಗ್ಗೆ ವಿಶೇಷ ಗೌರವ ಮತ್ತು ಅಭಿಮಾನ ನನ್ನ ಮನಸ್ಸಿನಲ್ಲಿ ಮೂಡಿತು. ಇಂದಿಗೂ ಕನ್ನಡ ನಾಡು, ಜನರ ಬಗ್ಗೆ ನನಗೆ ಅಪಾರ ಪ್ರೀತಿ ಇದೆ.
ಕನ್ನಡದ ಯಾವುದಾದರೂ ಪದ, ಗಾದೆ ಅಥವಾ ಸಾಹಿತ್ಯ ಕೃತಿ ನಿಮ್ಮ ಮನಸ್ಸಿನ ಮೇಲೆ ವಿಶೇಷ ಪ್ರಭಾವ ಬೀರಿದೆಯೇ?
ನಾನು ಕಲಬುರಗಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಗುಲ್ಬರ್ಗ ವಿಶ್ವವಿದ್ಯಾಲಯ, ಕೆಕೆಆರ್ಡಿಬಿ, ಸಂಗಮೇಶ್ವರ ಮಹಿಳಾ ಮಂಡಳ, ಹಾಗೂ ಚೈತನ್ಯಮಯಿ ಆರ್ಟ್ ಗ್ಯಾಲರಿರವರ ವತಿಯಿಂದ “ಯಶಸ್ವಿ ಬದುಕಿಗೆ ಮೆಟ್ಟಿಲು” ಎಂಬ ಶರಣರ ಹದಿನೈದು ಕತೆಗಳು ಮತ್ತು ಆಕರ್ಷಕ ಚಿತ್ರಗಳುಳ್ಳ ಪುಸ್ತಕವನ್ನು ಪ್ರಕಟಿಸಿದ್ದು, ಇದನ್ನು ಮಕ್ಕಳಿಗೆ ನೀಡಿದಾಗ ಅವರು ಬಹಳ ಖುಷಿ ಪಟ್ಟರು. ನನಗೂ ಒಂದು ಸಾರ್ಥಕ ಭಾವನೆ ಮೂಡಿತು.
ಪುಸ್ತಕದ ಮುಖಪುಟ
ನನಗೆ ಬಸವಣ್ಣನವರ ವಚನಗಳು ಮನಸ್ಸಿನ ಮೇಲೆ ವಿಶೇಷ ಪ್ರಭಾವ ಬೀರಿದೆ. ಬಸವಣ್ಣನವರು 18ನೇ ಶತಮಾನದಲ್ಲಿಯೇ ಜಾತಿಮತಗಳ ಬೇಧಭಾವ ವನ್ನು ತೊಡೆದುಹಾಕಲು ಶ್ರಮಿಸಿದಂತವರು. ಅವರ ವಚನಗಳಲ್ಲಿ ಪ್ರಮುಖವಾಗಿ, “ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ” ವಚನವು ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರುತ್ತದೆ. ಜನರಲ್ಲಿ ಬೇಧಭಾವ ತೊಡೆದು ಹಾಕಿ ಸಮಾನತೆ ತರಬೇಕು ಎಂಬುದು ಸರ್ಕಾರದ ಆಶಯವಾಗಿದೆ ಅಲ್ಲದೇ, ನನ್ನ ಆಶಯ ಕೂಡ ಆಗಿದೆ.
ಕನ್ನಡ ಕಲಿಕೆಯಿಂದ ನಿಮ್ಮ ವೈಯಕ್ತಿಕ ಜೀವನ ಅಥವಾ ಆಡಳಿತಾತ್ಮಕ ಕಾರ್ಯವೈಖರಿಗೆ ಏನು ಪ್ರಯೋಜನವಾಗಿದೆ?
ಕನ್ನಡ ಕಲಿಕೆಯಿಂದ ನನ್ನ ವೈಯಕ್ತಿಕ ಜೀವನ ಮತ್ತು ಆಡಳಿತ ಸುಧಾರಣೆಯಲ್ಲಿ ಹಲವಾರು ಗೋಚರ ಬದಲಾಣೆಗಳಾಗಿವೆ. ಉದಾ: ಸರ್ಕಾರದ ಪ್ರಮುಖ ಸಾರ್ವಜನಿಕ ಕೇಂದ್ರಿತ ಯೋಜನೆಯಾದ ʼಸಕಾಲʼದಲ್ಲಿ ಸಾರ್ವಜನಿಕರು ತಮ್ಮ ಕುಂದು ಕೊರತೆ, ಅಹವಾಲುಗಳನ್ನು ಕನ್ನಡದಲ್ಲಿಯೇ ಸಲ್ಲಿಸುತ್ತಾರೆ. ಅದನ್ನು ಅರ್ಥ ಮಾಡಿಕೊಂಡು ಅವರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಬೇಕಾಗುತ್ತದೆ.
ನಾನು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಹಲವಾರು ಬಾರಿ ಗ್ರಾಮಗಳಲ್ಲಿ ರಾತ್ರಿ ವಾಸ್ತವ್ಯವನ್ನು ಮಾಡಿದ್ದು, ಜನರ ಸಮಸ್ಯೆಗಳನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಅವರೂ ಸಹ ತಮ್ಮ ಸಮಸ್ಯೆಗಳನ್ನು ಯಾವುದೇ ಸಂಕೋಚ ಇಲ್ಲದೇ ನನ್ನ ಬಳಿ ಹೇಳಿಕೊಂಡಿದ್ದಾರೆ. ಈ ಸಮಯದಲ್ಲಿ ಕನ್ನಡ ಭಾಷೆಯಿಂದ ನನಗೆ ಬಹಳ ಸಹಾಯವಾಗಿದೆ. ಕೆಲವೊಮ್ಮೆ ನಮ್ಮ ಅಧೀನ ಅಧಿಕಾರಿಗಳು ಯಾವುದೇ ಸಮಸ್ಯೆ ಇಲ್ಲ, ಎಲ್ಲಾ ಸರಿಯಾಗಿದೆ ಎಂದು ಹೇಳುತ್ತಾರೆ. ಆದರೆ, ಜನರ ಹತ್ತಿರ ಹೋಗಿ ಅವರೊಂದಿಗೆ ಬೆರೆತಾಗ ಮಾತ್ರ ನೈಜ ಪರಿಸ್ಥಿತಿಯ ಅರಿವಾಗುತ್ತದೆ, ನಂತರ ಅವರ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಲು ಸಾಧ್ಯವಾಗುತ್ತದೆ ಎಂಬುದು ನನ್ನ ಭಾವನೆ.

