ಮಡಿಕೇರಿ: ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಬೆಳಗಾವಿ ಅಧಿವೇಶನದಲ್ಲಿ ಕನ್ನಡ ಬಾವುಟಕ್ಕೆ ಸಾಂವಿಧಾನಿಕ ಮತ್ತು ಅಧಿಕೃತ ಮಾನ್ಯತೆ ನೀಡುವಂತೆ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದರು.

ಹಾಲು ಉತ್ಪಾದಕರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ ಹಾಲು ಮತ್ತು ಮೊಸರಿನ ಬೆಲೆ ಹೆಚ್ಚಿಸಲಾಗಿದೆ. ಇದು ದುಡುಕಿನ ಕ್ರಮ ಅಲ್ಲ. ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿ ಈ ತೀರ್ಮಾನಿಸಲಾಗಿದೆ’ ಎಂದರು.

‘ಎಸ್‌ಐಆರ್ ಪ್ರಕ್ರಿಯೆ ಕುರಿತು ನಾವು ಸುಮ್ಮನೆ ಆರೋಪ ಮಾಡುತ್ತಿಲ್ಲ, ದಾಖಲೆಗಳ ಸಮೇತ ಹೋರಾಟ ಮಾಡುತ್ತಿದ್ದೇವೆ. ಬೆಂಗಳೂರಿನ ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ದಾಖಲೆಗಳ ಸಮೇತ ಅಕ್ರಮ ಪತ್ತೆಯಾಗಿದೆ. 3–4 ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾರರ ಪಟ್ಟಿಯಲ್ಲಿ ವ್ಯತ್ಯಾಸಗಳು ಪತ್ತೆಯಾಗಿವೆ’ ಎಂದು ಹೇಳಿದರು.