ವಿಜಯಪುರ: ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವ ಸಲುವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿದ್ದಾರೆ ಎಂದು ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಧಾನಿ ಮೋದಿ ಮತ್ತು ದೇವೇಗೌಡರು ನಡುವೆ ಉತ್ತಮ ಸಂಬಂಧವಿದೆ. ಹೇಗಾದರೂ ಮಾಡಿ ನನ್ನ ಮಗ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಲ್ಲಿ ಉಳಿಸಿ ಎಂದು ದೇವೇಗೌಡರಲ್ಲಿ ಯಡಿಯೂರಪ್ಪ ಮನವಿ ಮಾಡಿರಬಹುದು ಎಂದರು.
ಇದೇ ವೇಳೆ, ಜೆಡಿಎಸ್ ಜತೆಗೆ ಹೊಂದಾಣಿಕೆ ಇಲ್ಲ ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಯಡಿಯೂರಪ್ಪ ಈಗ ಒಂದಾಗಿ ಹೋಗುತ್ತೇವೆ ಎನ್ನುತ್ತಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ಇಬ್ಬರೂ (ದೇವೇಗೌಡ, ಯಡಿಯೂರಪ್ಪ) ಒಬ್ಬರಿಗೊಬ್ಬರು ಟಾಂಗ್ ನೀಡುವುದು ಖಚಿತ ಎಂದು ಹೇಳಿದರು.
ಅಲ್ಲದೇ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಮಾಡಲಿ. ಮುಂದಿನ 10 ವರ್ಷಗಳ ಕಾಲ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ ಎಂದು ವಿಜಯೇಂದ್ರ ಘೋಷಣೆ ಮಾಡಲಿ ಎಂದು ಯತ್ನಾಳ್ ಸವಾಲು ಹಾಕಿದರು.
ಅಕ್ಕಿಯಂತೆ ಸಕ್ಕರೆ ಕಡಿಮೆ ದರದಲ್ಲಿ ವಿತರಿಸಿ: ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಕೇಂದ್ರ ಮತ್ತು ರಾಜ್ಯ ಎರಡೂ ಸರ್ಕಾರಗಳ ಜವಾಬ್ದಾರಿ ಇದೆ. ಕೇಂದ್ರದವರು ನುಣುಚಿಕೊಳ್ಳಲು ಸಾಧ್ಯವಿಲ್ಲ. ಬಡವರ ಬಗ್ಗೆ ಕಾಳಜಿ ಇದ್ದರೆ, ಬಿಪಿಎಲ್ ಕಾರ್ಡ್ದಾರರಿಗೆ ಅಕ್ಕಿಯಂತೆ ಸಕ್ಕರೆಯನ್ನೂ ಕಡಿಮೆ ದರದಲ್ಲಿ ವಿತರಿಸಿ ಎಂದು ಯತ್ನಾಳ ಒತ್ತಾಯಿಸಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಸಮಿತಿ ರಚಿಸಿದ್ದಾರೆ. ಆದರೆ, ಆ ಸಮಿತಿ ಇದುವರೆಗೂ ವರದಿ ನೀಡಿಲ್ಲ. ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಬೇಡಿ. ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ₹4 ಸಾವಿರ ನೀಡಲು ಸಿದ್ಧವಿದ್ದು, ರೈತರ ಹಿತ ಕಾಪಾಡಲು ಸರ್ಕಾರಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಸಕ್ಕರೆ ಬೆಲೆಯನ್ನು ಪ್ರತಿ ಕೆಜಿಗೆ ಕನಿಷ್ಠ ₹55 ನಿಗದಿಪಡಿಸಬೇಕು. ಎಥೆನಾಲ್ ಖರೀದಿಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

