‘ಜನರು ದೇವರನ್ನು ಕಾಣಲು ದೇವಸ್ಥಾನಗಳಿಗೆ ಹೋಗುತ್ತಾರೆ. ಬೇರೆ ಬೇರೆ ದೇವರುಗಳನ್ನು ಪೂಜಿಸುತ್ತಾರೆ. ಆದರೆ, ನಾನು ದೇವರಿಗಿಂತ ಹೆಚ್ಚಾಗಿ ಕನ್ನಡವನ್ನು ಪೂಜಿಸುತ್ತೇನೆ. ಕನ್ನಡವೇ ನನ್ನ ದೇವರು. 1959 ರಿಂದ ಆರಂಭವಾದ ನನ್ನ ಕನ್ನಡ ಪರವಾದ ಹೋರಾಟ ಇಂದಿಗೂ ನಿಂತಿಲ್ಲ’ ಎಂದು ಪ್ರಜಾವಾಣಿ ಜೊತೆ ಕನ್ನಡಪರ ಹೋರಾಟಗಾರರಾದ ವಾಟಾಳ್ ನಾಗರಾಜ್ ತಮ್ಮ ಕನ್ನಡದ ಪ್ರೀತಿಯನ್ನು ವ್ಯಕ್ತಪಡಿಸಿದರು.
ಕನ್ನಡ ಭಾಷೆ, ಕನ್ನಡಿಗರ ಹಕ್ಕು, ಕರ್ನಾಟಕದ ನೆಲ, ಜಲ ಮತ್ತು ಗಡಿ ವಿಚಾರ ಬಂದಾಗಲೆಲ್ಲಾ ನೆನಪಾಗುವ ಪ್ರಮುಖ ಹೆಸರು ವಾಟಾಳ್ ನಾಗರಾಜ್. ತಮ್ಮದೇ ಆದ ವಿಶಿಷ್ಟ ಹೋರಾಟದ ಶೈಲಿ, ವಿಭಿನ್ನ ಪ್ರತಿಭಟನೆಗಳು, ವ್ಯಂಗ್ಯಭರಿತ ಮಾತುಗಳು ಹಾಗೂ ಕನ್ನಡಪರ ಕಾಳಜಿಯ ಮೂಲಕ ದಶಕಗಳಿಂದ ಕನ್ನಡ ನಾಡಿನ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯಾಗಿದ್ದಾರೆ. ಕನ್ನಡ ಭಾಷೆಯ ಅಸ್ಮಿತೆ ಮತ್ತು ಕನ್ನಡಿಗರ ಸ್ವಾಭಿಮಾನಕ್ಕಾಗಿ ಬೀದಿಗಿಳಿದು ಹೋರಾಟ ನಡೆಸಿದ ವಾಟಾಳ್ ನಾಗರಾಜ್ ಅವರ ಬದುಕೇ ಒಂದು ಹೋರಾಟ.
ಸಾಮಾನ್ಯ ವ್ಯಕ್ತಿಯಿಂದ ಕನ್ನಡ ಚಳವಳಿಯ ನಾಯಕನವರೆಗೆ
ವಾಟಾಳ್ ನಾಗರಾಜ್ ಅವರು ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲೂಕಿನ ವಾಟಾಳ್ ಗ್ರಾಮದವರು. ಮೈಸೂರಿನ ಗ್ರಾಮೀಣ ಪರಿಸರದಲ್ಲಿ ಬೆಳೆದ ಅವರು, ಚಿಕ್ಕ ವಯಸ್ಸಿನಲ್ಲೇ ಬೆಂಗಳೂರಿಗೆ ಬಂದರು. ಅವರ ಜನ್ಮದಿನಾಂಕ ಮತ್ತು ವಯಸ್ಸಿನ ಕುರಿತು ವಿಭಿನ್ನ ದಾಖಲೆಗಳಲ್ಲಿ ಬೇರೆಬೇರೆ ಮಾಹಿತಿಗಳಿವೆ. ಈ ಕುರಿತು ಸ್ವತಃ ವಾಟಾಳ್ ನಾಗರಾಜ್ ಅವರನ್ನೇ ಕೇಳಿದರು ಅವರು ಸ್ಪಷ್ಟವಾದ ಉತ್ತರ ನೀಡುವುದಿಲ್ಲ.
ವಿದ್ಯಾರ್ಥಿ ಜೀವನದಿಂದಲೇ ನಾಯಕ
ಹೌದು, ಅವರು ಚಿಕ್ಕ ವಯಸ್ಸಿನವರಿದ್ದಾಗಲೇ ನಾಯಕತ್ವದ ಗುಣ ಬೆಳೆಸಿಕೊಂಡರು. 1962ರಲ್ಲಿ ಬೆಂಗಳೂರಿನ ಗಾಂಧಿನಗರದಲ್ಲಿರುವ ಅಲಂಕಾರ್ ಚಿತ್ರಮಂದಿರದಲ್ಲಿ ಹಿಂದಿ ಚಿತ್ರ ಪ್ರದರ್ಶನದ ವಿರುದ್ಧ ಪ್ರತಿಭಟನೆ ನಡೆಸಿದ್ದು, ಅವರ ಹೋರಾಟದ ಆರಂಭಿಕ ಘಟನೆಗಳಲ್ಲಿ ಒಂದಾಗಿದೆ.
ಕನ್ನಡ ಚಳವಳಿ ಎಂಬ ಹೆಸರು ನೀಡಿದ್ದೇ ನಾನು
ಅಂದಿನ ಮುಖ್ಯಮಂತ್ರಿ ಕಂಗಲ್ ಹನುಮಂತಯ್ಯನವರ ಸಾರ್ವಜನಿಕ ಸಭೆ ಒಂದರಲ್ಲಿ ವಾಟಾಳ್ ನಾಗರಾಜ್ ನೀನು ಭಾಷಣ ಮಾಡು ಎಂದು ಕೇಳಿದರು. ಆಗ ಎದ್ದು ನಿಂತು ಭಾಷಣ ಮಾಡಿದೆ. ಅಲ್ಲಿಂದಲೇ ಜನ ನನ್ನನ್ನು ಗುರುತಿಸಿದರು. ಸಿಕ್ಕ ಸಿಕ್ಕಲ್ಲಿ ಕನ್ನಡಪರ ಹೋರಾಟ ಆರಂಭಿಸಿದೆವು. ಕನ್ನಡ ಚಳವಳಿ ಎಂಬ ಹೆಸರು ನೀಡಿದ್ದೇ ನಾನು ಎಂದರು.
ಕನ್ನಡಪರ ಹೋರಾಟಕ್ಕೆ ರಾಜಕೀಯ ವೇದಿಕೆಯೂ ಅಗತ್ಯ ಎಂಬ ಉದ್ದೇಶದಿಂದ ವಾಟಾಳ್ ನಾಗರಾಜ್ ಅವರು ಕನ್ನಡ ಚಳವಳಿ ವಾಟಾಳ್ ಪಕ್ಷವನ್ನು ಸ್ಥಾಪಿಸಿದರು. ಪಕ್ಷದ ಮೂಲಕ ಕನ್ನಡ ಭಾಷೆ, ಕನ್ನಡಿಗರ ಉದ್ಯೋಗಾವಕಾಶ, ರಾಜ್ಯದ ನೆಲ, ಜಲ ಹಾಗೂ ಗಡಿ ಸಮಸ್ಯೆಗಳನ್ನು ರಾಜಕೀಯ ಚರ್ಚೆಯ ಮುಂಚೂಣಿಗೆ ತರುವ ಪ್ರಯತ್ನ ಮಾಡಿದರು.
ರಾಜ್ಯದಲ್ಲಿ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಆಗ್ರಹಿಸಿ, ಇತರೆ ಹೋರಾಟಗಾರರ ಜೊತೆ ಸೇರಿ ಹಣ ಕೊಟ್ಟು ಕನ್ನಡ ಸಿನಿಮಾಗಳ ಟಿಕೆಟ್ ಖರೀದಿಸುತ್ತಿದ್ದರು. ಈ ವಿಚಾರವನ್ನು ಅವರು ಪ್ರಜಾವಾಣಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ ಕನ್ನಡ ಸಿನಿಮಾ ಬಿಡುಗಡೆಯಾದಾಗ ಚಿತ್ರರಂಗ ಭರ್ತಿಯಾಗಿದೆ ಎಂಬ ಬೋರ್ಡ್ ಬೀಳಬೇಕು ಎಂಬುದು ಅವರ ಆಶಯವಾಗಿತ್ತು.
ನನ್ನ ಮದುವೆ ಕೂಡ ಚಳವಳಿಯಾಗಿತ್ತು
ತಮ್ಮ ಹಾಗೂ ಜ್ಞಾನಾಂಬಿಕೆ ಅವರ ವಿವಾಹದ ಕುರಿತು ಮಾತನಾಡಿದ ವಾಟಾಳ್ ನಾಗರಾಜ್ ‘ನನ್ನ ಮದುವೆ ಕೂಡ ಒಂದು ರೀತಿಯ ಚಳವಳಿಯೇ’ ಆಗಿತ್ತು ಎಂದರು. ‘ಮದುವೆ ಸಂದರ್ಭದಲ್ಲಿ ತಾಳವಾಡಿ ಕರ್ನಾಟಕ್ಕೆ ಸೇರಬೇಕೆಂದು ಚಳವಳಿಯಲ್ಲಿ ಭಾಗಿಯಾಗಿದ್ದ ನನ್ನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದರು. ಆ ಸಂದರ್ಭದಲ್ಲಿ ಜೈಲಿನಲ್ಲೇ ತಾಳಿ ಕಟ್ಟುವ ಯೋಜನೆಯೂ ಇತ್ತು’ ಆದರೆ, ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರು ತಮಿಳುನಾಡು ಮುಖ್ಯಮಂತ್ರಿ ಜೊತೆ ಮಾತನಾಡಿ ಬಿಡುಗಡೆ ಮಾಡಿಸಿದ್ದರು. ಮದುವೆಗೆ ಇನ್ನೆರಡು ದಿನ ಇರುವಾಗ ಜೈಲಿನಿಂದ ಬಿಡುಗಡೆಯಾಗಿದ್ದೆ’ ಎಂದು ತಿಳಿಸಿದರು.
25ನೇ ವರ್ಷಕ್ಕೆ ನಾನು ಶಾಸಕ
‘1967ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿ 25ನೇ ವರ್ಷಕ್ಕೆ ಶಾಸಕನಾಗಿ ಆಯ್ಕೆಯಾಗಿದೆ. ಅದಾದ ಬಳಿಕ ಅದೇ ಕ್ಷೇತ್ರದಿಂದ ಒಟ್ಟು ಮೂರು ಬಾರಿ. ಬಳಿಕ ಚಾಮರಾಜನಗರ ಕ್ಷೇತ್ರದಿಂದ ಎರಡು ಬಾರಿ ಶಾಸಕನಾದೆ’ ಎಂದಿದ್ದಾರೆ.
ಶಾಸಕರಾದ ನೀವು ಮಂತ್ರಿ ಆಗಲಿಲ್ಲ ಏಕೆ?
ಎಸ್. ನಿಜಲಿಂಗಪ್ಪನವರು ಮಂತ್ರಿ ಮಾಡುವುದಾಗಿ ನನಗೆ ಆಹ್ವಾನ ನೀಡಿದರು. ಆದರೆ, ನಾನು ತಿರಸ್ಕರಿಸಿದೆ. ನನಗೆ ಕನ್ನಡ ಪರ ಹೋರಾಟವೇ ಮುಖ್ಯವಾಗಿತ್ತು. ಮಂತ್ರಿ ಆದರೆ, ಕಪ್ಪು ಬಾವುಟ ಹಿಡಿಯುವುದು ಯಾರು? ಕನ್ನಡಕ್ಕಾಗಿ ಹೋರಾಡುವವರು ಯಾರು? ಎಂದು ಅವರ ಜೊತೆ ಹೋಗಲಿಲ್ಲ. ಆದರೆ, ಪ್ರಸ್ತುತ ರಾಜಕಾರಣ ಸಂಪೂರ್ಣವಾಗಿ ಹದಗೆಟ್ಟಿ ಹೋಗಿದೆ. ಸಿಡಿ, ಸ್ಟಿಂಗ್ ಆಪರೇಷನ್ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ನಿಮ್ಮ ಮುಂದಿನ ನಡೆ?
‘ಕಾವೇರಿ, ಮೇಕೆದಾಟು ಮತ್ತು ಮಹದಾಯಿ ನದಿ ನೀರಿನ ವಿವಾದಗಳಿದ್ದು, ಮುಂದಿನ ದಿನಗಳಲ್ಲಿ ಸುಮ್ಮನೆ ಕೂರುವುದಿಲ್ಲ. ನಮ್ಮ ರಾಜ್ಯದ ನದಿಗಳ ನೀರು ಇರುವುದು ನಮ್ಮವರಿಗಾಗಿ. ನಾವು ಬಳಸಿ ಹೆಚ್ಚಾದರೆ ಮಾತ್ರ ಬೇರೆ ರಾಜ್ಯಗಳಿಗೆ ನೀಡಬಹುದು. ಹಾಗಾಗಿ, ಮುಂದಿನ ದಿನಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಹೋರಾಟಕ್ಕೆ ಕರೆ ನೀಡುತ್ತೇನೆ’ ಎಂದಿದ್ದಾರೆ.

