ಬಾಂಬ್ ಬೆದರಿಕೆ ಕರೆ ಬಂದಿದ್ದರೂ ಬಿಗ್ ಬಿ ಅಮಿತಾಭ್ ಬಚ್ಚನ್ ತಮ್ಮ ಭಾನುವಾರದ ಸಂಪ್ರದಾಯವನ್ನು ಕೈಬಿಟ್ಟಿಲ್ಲ. ಮುಂಬೈನ ಜಲ್ಸಾ ನಿವಾಸದ ಹೊರಗೆ ಸಾವಿರಾರು ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ. ಆದರೆ ಈ ಬಾರಿ ಭದ್ರತಾ ದೃಷ್ಟಿಯಿಂದ ಬುಲೆಟ್‌ಪ್ರೂಫ್ ಗ್ಲಾಸ್ ಕವರ್ ಹಿನ್ನೆಲೆಯಲ್ಲಿ ನಿಂತು ಅಭಿಮಾನಿಗಳಿಗೆ ಕೈ ಮುಗಿದಿದ್ದಾರೆ. ಅವರ ಜೊತೆಯಲ್ಲಿ ಮಗ ಅಭಿಷೇಕ್ ಬಚ್ಚನ್ ಕೂಡ ಸಾಥ್ ನೀಡಿದ್ದಾರೆ.

ಅಮಿತಾಭ್ ಬಚ್ಚನ್ ಅವರಿಗೆ 84 ವರ್ಷ ವಯಸ್ಸಾಗಿದೆ. ಪ್ರತೀ ಭಾನುವಾರ ಜಲ್ಸಾ ಬಂಗಲೆಯ ಹೊರಗೆ ಬಂದು ಅಭಿಮಾನಿಗಳನ್ನು ಭೇಟಿಯಾಗುವುದು ಅವರ ವಾಡಿಕೆ. ಆದರೆ ಕಳೆದ ವಾರ ಬಂದ ಬಾಂಬ್ ಬೆದರಿಕೆಯಿಂದಾಗಿ ಈ ಬಾರಿ ಕಟ್ಟುನಿಟ್ಟಿನ ಭದ್ರತೆ ಒದಗಿಸಲಾಗಿತ್ತು. ಗ್ಲಾಸ್ ಎನ್‌ಕ್ಲೋಸರ್ ಹಿಂಭಾಗದಲ್ಲಿ ನಿಂತೇ ಅವರು ಅಭಿಮಾನಿಗಳಿಗೆ ಶುಭಾಶಯ ತಿಳಿಸಿದರು.

ಈ ಸಂದರ್ಭದಲ್ಲಿ ಅಭಿಷೇಕ್ ಬಚ್ಚನ್ ತಂದೆಯ ಪಕ್ಕದಲ್ಲೇ ನಿಂತಿದ್ದರು. ಸುತ್ತಮುತ್ತಲಿನ ವಾತಾವರಣವನ್ನು ಗಂಭೀರವಾಗಿ ಗಮನಿಸುತ್ತಿದ್ದರು. ತಮ್ಮ ತಂದೆಯ ಸುರಕ್ಷತೆಯ ಬಗ್ಗೆ ಅಭಿಷೇಕ್ ಕಾಳಜಿ ವಹಿಸುವುದು ಕಂಡುಬಂತು. ಪ್ರಸ್ತುತ ಈ ಅಪರೂಪದ ಘಟನೆಯ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.

ಇತ್ತೀಚೆಗಷ್ಟೇ ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ಘಟನೆ ಬೆನ್ನಲ್ಲೇ ಮುಂಬೈನಲ್ಲಿ ಪ್ರಸಿದ್ಧ ಕಲಾವಿದರ ಭದ್ರತೆಯ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಇದರ ಜೊತೆಗೆ ಅಮಿತಾಭ್ ಬಚ್ಚನ್ ಅವರ ನಿವಾಸವನ್ನು ಬಾಂಬ್ ಇಟ್ಟು ಉಡಾಯಿಸುವುದಾಗಿ ಬೆದರಿಕೆ ಇಮೇಲ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಜಲ್ಸಾ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಇದನ್ನೂ ಓದಿ: ಸೋಶಿಯಲ್ ಮೀಡಿಯಾಗೆ ಗುಡ್​​ಬೈ ಹೇಳಿ ಕೆಲವೇ ದಿನದಲ್ಲಿ ಮರಳಿದ ಅಮಿತಾಭ್

ಎಷ್ಟೇ ಅಭದ್ರತೆ ಎದುರಾಗಿದ್ದರೂ ಅಮಿತಾಭ್ ಬಚ್ಚನ್ ತಮ್ಮ ಕೆಲಸಗಳಲ್ಲಿ ಸಕ್ರಿಯರಾಗಿದ್ದಾರೆ. ಪ್ರಸ್ತುತ ಅವರು ‘ಕೌನ್ ಬನೇಗಾ ಕರೋಡ್‌ಪತಿ 18’ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ. ಅವರು ‘ಕಲ್ಕಿ 2898 ಎಡಿ’ ಸಿನಿಮಾದ ಸೀಕ್ವೆಲ್​​ನ ಭಾಗವಾಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.