ನವದೆಹಲಿ: ರಾಜ್ಯ ರಾಜಕೀಯದಲ್ಲಿ ಸ್ಟಿಂಗ್‌ ಆಪರೇಷನ್‌ ಪ್ರಕರಣದ ಪೊಲೀಸ್ ತನಿಖೆ ಮಹತ್ವದ ಹಂತ ತಲುಪಿರುವ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರನ್ನು ಇಂದು ಭೇಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆಯಿದೆ. ಇದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಭಾನುವಾರ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಗೂ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಮುಖಾಮುಖಿಯಾಗಿದ್ದರೂ, ಆ ಭೇಟಿಯು ಕೇವಲ ಹೋರಾಟಕ್ಕೆ ಮಾತ್ರ ಸೀಮಿತವಾಗಿತ್ತು. ಇದು ಕೇವಲ 15 ನಿಮಿಷಗಳ ಭೇಟಿಯಾಗಿತ್ತು.

ಇಂದು ಸಂಜೆ ರಾಹುಲ್ ಗಾಂಧಿ ಭೇಟಿಗೆ ಸಿದ್ದರಾಮಯ್ಯ ಸಮಯ ಕೋರಿದ್ದು, ಇಬ್ಬರೂ ನಾಯಕರ ನಡುವೆ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳು ಹಾಗೂ ಆಂತರಿಕ ಬೆಳವಣಿಗೆಗಳ ಕುರಿತು ಪ್ರಮುಖ ಚರ್ಚೆಗಳು ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರದ ಭಾಗವಾಗಿ ನಡೆಸಲಾಗಿದೆ ಎನ್ನಲಾದ ಸ್ಟಿಂಗ್‌ ಆಪರೇಷನ್‌ ಪ್ರಕರಣ, ದಿನಕ್ಕೊಂದು ರೀತಿಯಲ್ಲಿ ಭಾರೀ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ ಈ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರ ಹೆಸರನ್ನು ಪೊಲೀಸರು ಉಲ್ಲೇಖಿಸಿದ್ದಾರೆ.

ಮಹಿಳೆಯೊಬ್ಬರ ಸಂದರ್ಶನವನ್ನು ಮುಂದಿಟ್ಟುಕೊಂಡು ಹೆಣೆಯಲಾದ ಕಟ್ಟುಕಥೆ, ಅದರಲ್ಲಿ ಉದ್ದೇಶಪೂರ್ವಕವಾಗಿ ತಮ್ಮ ಹೆಸರನ್ನು ತಳುಕು ಹಾಕಿರುವುದು ಹಾಗೂ ಇದರ ಆಧಾರದಲ್ಲಿ ನಡೆದ ಬ್ಲ್ಯಾಕ್‌ಮೇಲ್ ಯತ್ನಗಳ ಕುರಿತು ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರ ಗಮನಕ್ಕೆ ತರಲಿದ್ದಾರೆ. ಈ ಷಡ್ಯಂತ್ರದಲ್ಲಿ ಸ್ವಪಕ್ಷೀಯರೇ ಶಾಮೀಲಾಗಿರುವ ಶಂಕೆ ಇರುವುದರಿಂದ, ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದು ಸೂತ್ರಧಾರಿಗಳನ್ನು ಬಯಲಿಗೆಳೆಯುವಂತೆ ಆಗ್ರಹಿಸುವ ನಿರೀಕ್ಷೆಯಿದೆ.

ಪ್ರಕರಣದಲ್ಲಿ ತಮ್ಮ ಯಾವುದೇ ಪಾತ್ರವಿಲ್ಲದಿದ್ದರೂ ರಾಜಕೀಯ ಬದುಕಿಗೆ ಮಸಿ ಬಳಿಯಲು ಹುನ್ನಾರ ನಡೆಸಲಾಗಿದೆ ಎಂಬ ಅಸಮಾಧಾನವನ್ನು ಅವರು ಹೈಕಮಾಂಡ್ ಮುಂದೆ ಹಂಚಿಕೊಳ್ಳಲಿದ್ದಾರೆ. ಈಗಾಗಲೇ ಪೊಲೀಸರ ತನಿಖೆ ಮುಂದುವರಿದಿದ್ದು, ಈ ವಿಡಿಯೋದ ಮೂಲ ಮತ್ತು ಇದರ ಹಿಂದಿರುವ ಕಾಣದ ಕೈಗಳ ಸತ್ಯಾಸತ್ಯತೆ ಬಹಿರಂಗವಾಗಬೇಕು ಎಂದು ಆಗ್ರಹಿಸುವ ಸಾಧ್ಯತೆಯಿದೆ.

ಸ್ಟಿಂಗ್ ಆಪರೇಷನ್ ವಿವಾದ: ನಮ್ಮ ಸಮಸ್ಯೆ ನಾವೇ ಬಗೆಹರಿಸಿಕೊಳ್ಳುತ್ತೇವೆ, ಹೈಕಮಾಂಡ್ ಮಧ್ಯಪ್ರವೇಶ ಅಗತ್ಯವಿಲ್ಲ- DCM ಪರಮೇಶ್ವರ್ ಸ್ಪಷ್ಟನೆ

ಕೇವಲ ವಿವಾದವಷ್ಟೇ ಅಲ್ಲದೆ, ರಾಜ್ಯ ಸರ್ಕಾರದಲ್ಲಿ ಖಾಲಿ ಉಳಿದಿರುವ ಎರಡು ಸಚಿವ ಸ್ಥಾನಗಳ ಭರ್ತಿ ಹಾಗೂ ವಿವಿಧ ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿಯ ಆಕಾಂಕ್ಷಿಗಳ ಪಟ್ಟಿಯ ಕುರಿತಾಗಿಯೂ ಇಬ್ಬರು ನಾಯಕರ ನಡುವೆ ಸಮಾಲೋಚನೆ ನಡೆಯುವ ಸಾಧ್ಯತೆಯಿದೆ.